Friday, 29th November 2024

ಕಣ್ಮರೆಯಾಗುತ್ತಿರುವ ಪಕ್ಷಿಗಾಗಿ ಗೂಡು

ಇಂದು ವಿಶ್ವ ಗುಬ್ಬಿಗಳ ದಿನಾಚರಣೆ

ಚಿಕ್ಕಕೋಲಿಗ ಗ್ರಾಮದಲ್ಲೊಂದು ಗುಬ್ಬಚ್ಚಿ ರಕ್ಷಕ ಕುಟುಂಬ

ವಿಶೇಷ ವರದಿ: ನಾರಾಯಣಸ್ವಾಮಿ ಸಿ.ಎಸ್ ಚಿಕ್ಕಕೋಲಿಗ

ಹೊಸಕೋಟೆ: ಬೆಳೆಯುತ್ತಿರುವ ತಂತ್ರಜ್ಞಾನದ ವೇಗಕ್ಕೆ ಮನುಸಂಕುಲದ ಮಧ್ಯೆ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಸಾಕಿ ಆರೈಕೆ ಮಾಡುತ್ತಿದೆ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದಲ್ಲಿರುವ ಪದ್ಮ ಹನುಮಂತರೆಡ್ಡಿ ಕುಟುಂಬ.

ಪದ್ಮ, ಹನುಮಂತರೆಡ್ಡಿ ಅವರ ಮನೆಯಲ್ಲಿ ಗುಬ್ಬಚ್ಚಿಗಳು ವಾಸವಾಗಿರಲು ಎಲ್ಲೆಡೆ ರಟ್ಟಿನ ಡಬ್ಬಗಳನ್ನು ಇಟ್ಟು ಆಶ್ರಯ ಕಲ್ಪಿಸಿದ್ದಾರೆ. ಹಗಲೆಲ್ಲಾ ಹೊರ ಗಡೆ ಸಂಚರಿಸಿ ಸಂಜೆಯಾಗುತ್ತಿದ್ದಂತೆ ಮನೆಯ ಅಂಗಳದಲ್ಲಿ ಚಿಲಿಪಿಲಿ ಗುಟ್ಟುವ ಗುಬ್ಬಚ್ಚಿಗಳು ಮನೆಯಲ್ಲಿ ಇಟ್ಟಿರುವ ಗೂಡುಗಳಲ್ಲಿ ಸೇರಿಕೊಳ್ಳುತ್ತವೆ.

ಸಾಕಷ್ಟು ಸಂಖ್ಯೆಯಲ್ಲಿ ಗುಬ್ಬಚ್ಚಿಗಳು ಪದ್ಮ, ಹನುಮಂತರೆಡ್ಡಿ ಅವರಿಗೆ ಸೇರಿದ ಎರಡು ಮನೆಗಳಲ್ಲಿ ವಾಸವಾಗಿದ್ದು, ಇವುಗಳಿಗೆ ಪ್ರತಿನಿತ್ಯ ಆಹಾರವಾಗಿ ಅಕ್ಕಿ ಕಾಳು ಹಾಕಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಸಂಜೆಯಾಗುತ್ತಿದ್ದಂತೆ ಗುಬ್ಬಚ್ಚಿಗಳು ತಮ್ಮ ತಮ್ಮ ಮನೆ ಸೇರುಕೊಳ್ಳುತ್ತವೆ ಎನ್ನುತ್ತಾರೆ ಹನುಮಂತರೆಡ್ಡಿ.

ಮಾ.20 ರಂದು ವಿಶ್ವ ಗುಬ್ಬಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಹಿಂದೆ ಗುಬ್ಬಿಗಳು ಎಲ್ಲೆಡೆ ಕಾಣ ಸಿಗುತ್ತಿದ್ದವು. ಆದರೆ ಇಂದು ಸಂತತಿ ಕ್ಷೀಣಿಸುತ್ತಿವೆ ಹಿಂದಿನ ಕಾಲದಲ್ಲಿ ಮನೆ ಕಟ್ಟುವಾಗ ಗುಬ್ಬಿಗಳಿಗೆಂದೇ ಗೂಡುಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಇಂದು ಅದು ಮಾಯವಾಗಿದೆ. ಇವೆಲ್ಲದರ ಜತೆಗೆ ಎಲ್ಲೆಡೆ ಹರಡಿರುವ ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ಕಿರಣಗಳು ಗುಬ್ಬಿಗಳಿಗೆ ಮಾರಕವಾಗಿವೆ.

ಈ ಟವರ್ ಗಳಿಂದ ಹೊರಡುವ ಕಿರಣಗಳಿಂದ ಅವುಗಳ ಸಂತತಿಗೆ ಗಂಭೀರ ಪರಿಣಾಮ ಬೀರಿದ್ದು, ಗುಬ್ಬಿಗಳ ಸಂಖ್ಯೆ ಇಳಿಮುಖ ವಾಗುತ್ತಿವೆ. ಮುಂದಿನ ದಿನಗಳಲ್ಲಿ ಗುಬ್ಬಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬರಬಹುದೇನೋ ಎನ್ನುವ ಆತಂಕ ಎದುರಾಗಿದೆ ಎನ್ನುತ್ತಾರೆ ಪದ್ಮ, ಹನುಮಂತರೆಡ್ಡಿ ಕುಟುಂಬದವರು.

ಅಡುಗೆ ಮನೆಯಲ್ಲಿಯೂ ಗುಬ್ಬಚ್ಚಿಗಳ ವಾಸ: ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ಒಂದು ಕಾಲದಲ್ಲಿ ಇತ್ತು. ಗುಬ್ಬಚ್ಚಿಗಳು ಪ್ರೀತಿ ಎಷ್ಟು ಎಂದರೆ ಅವರ ಅಡುಗೆ ಮನೆಯಲ್ಲಿಯೂ ಗುಬ್ಬಚ್ಚಿಗಳು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ ಮನೆಯ ಮುಂಭಾಗದಲ್ಲಿ ಪ್ರತಿನಿತ್ಯ ಹಾಕುವ ಅಕ್ಕಿ, ಕಾಳು ತಿನ್ನಲು ಗುಂಪು ಸೇರುತ್ತವೆ. ಸರಾಸರಿ ತಿಂಗಳಿಗೆ 20 ರಿಂದ 25
ಕೆ.ಜಿ ಅಕ್ಕಿ ಗುಬ್ಬಚ್ಚಿಗಳಿಗಾಗಿ ಖರ್ಚುಮಾಡುತ್ತಾರೆ.

ಇನ್ನೂ ಮನೆಯವರು ಊಟ ಮಾಡುವಾಗ ಹಾಜರಾಗುವ ಗುಬ್ಬಚ್ಚಿಗಳಿಗೆ ಮುದ್ದೆಯಂಥ ಆಹಾರವನ್ನು ಚಿಕ್ಕ-ಚಿಕ್ಕ ಉಂಡೆ ಗಳಾಗಿ ಹಾಕುತ್ತಾರೆ. ಕಚ್ಚಿ ತಿನ್ನುವ ಅವು ಸಂತಸದಿಂದಲೇ ಚಿಲಿ-ಪಿಲಿಯಿಂದ ಮನೆಯ ಎಲ್ಲೆಡೆ ಓಡಾಡುತ್ತಿದ್ದರೆ ಮನೆಯ ಮಕ್ಕಳು ಓಡಾಡಿದಂತೆ ಭಾಸವಾಗಿ ಆನಂದವಾಗುತ್ತದೆ ಎನ್ನುತ್ತಾರೆ ಪದ್ಮ, ಹನುಮಂತರೆಡ್ಡಿ.

ಮನೆಯಲ್ಲಿ ಪ್ರೀತಿ, ವಿಶ್ವಾಸ, ವಾಸ್ತು ಉತ್ತಮವಾಗಿದ್ದರೆ ಮಾತ್ರ ಗುಬ್ಬಚ್ಚಿಗಳು ವಾಸಿಸುತ್ತವೆ ಎಂಬ ನಂಬಿಕೆ ಇವರದು. ಆರ್ಥಿಕ ವಾಗಿ ಯಾವುದೇ ಲಾಭ ಇಲ್ಲದೆ ಗುಬ್ಬಚ್ಚಿಗಳನ್ನು ಸಾಕುತ್ತಿರುವ ಪದ್ಮ, ಹನುಮಂತರೆಡ್ಡಿ ಅವರ ಗುಬ್ಬಚ್ಚಿಗಳ ಪರವಾಗಿನ
ಪ್ರೀತಿ, ಆರೈಕೆ ಅವಿನಾಭಾವ ಸಂಬಂಧದಂತಿದೆ.

ಮಾನವೀಯತೆ ಮೆರೆದ ಕುಟುಂಬ

ಮನೆಯಲ್ಲಿ ಎಷ್ಟೇ ಜನ ಇದ್ದರೂ ಸಹ ಅವು ತಮ್ಮ ಪಾಡಿಗೆ ತಾವು ಗೂಡಿನಲ್ಲಿ ವಾಸಿಸುತ್ತವೆ. ಇಲ್ಲಿ ವಾಸಿಸುತ್ತಿರುವ ಗುಬ್ಬಿಗಳು ಎಷ್ಟರ ಮಟ್ಟಿಗೆ ಹೊಂದಿಕೊಂಡಿವೆ ಎಂದರೆ ಚಿಕ್ಕ ಮಕ್ಕಳು ಹಾಗೂ ಮನೆಯವರು ಯಾರೇ ಆಗಲಿ ಅವುಗಳ ಹತ್ತಿರ ಸುಳಿದಾಡಿ ದರೂ ಸಹ ಅವುಗಳು ಬೆದರೆದ ಸುಮ್ಮನೆ ತಮ್ಮ ಪಾಡಿಗೆ ತಾವು ಮೇವು ತಿನ್ನುತ್ತಿರುತ್ತವೆ. ಕೆಲ ಗುಬ್ಬಿಗಳು ಮನೆಯೊಳಗೆ ಸೇರಬಾರದು ಮತ್ತೆ ಅವುಗಳಿಂದ ಮನೆಯಲ್ಲಾ ಹಾಳಾಗುತ್ತವೆ ಅವುಗಳ ಶಬ್ದ ಕೇಳಲಾಗದು ಎಂದು ಅವುಗಳನ್ನು ಬೆದರಿಸಿ ಓಡಿಸುತ್ತಾರೆ. ಆದರೆ ಚಿಕ್ಕಕೋಲಿಗ ಗ್ರಾಮದ ಪದ್ಮ, ಹನುಮಂತರೆಡ್ಡಿಿ ಇವುಗಳಿಗೆಲ್ಲಾ ತಲೆಕೆಡಿಸಿಕೊಳ್ಳದೇ, ನಮ್ಮಂತೇ ಇವು ಎಂದು ಭಾವಿಸಿ ಅವುಗಳಿಗೆ ರಕ್ಷಣೆ ನೀಡಿ ಸೂರು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.