Friday, 29th November 2024

ನೇತ್ರಾವತಿ ನದಿಗೆ ವರ್ಟಿಕಲ್‌ ಲಿಪ್ಟ್ ಅಣೆಕಟ್ಟು

ವಿಶೇಷ ವರದಿ

ಪಶ್ಚಿಮ ವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ ಮಹತ್ತರ ಯೋಜನೆ ವಿದ್ಯುತ್ ಚಾಲಿತ ಹಾಗೂ ಮ್ಯಾನುವೆಲ್ ನಿರ್ವಹಣೆಯ ಗೇಟ್ ಅಳವಡಿಸುವ ತಂತ್ರಜ್ಞಾನದಿಂದ ನಿರ್ವಹಣೆ

ಮಂಗಳೂರು: ಆಧುನಿಕ ತಂತ್ರಜ್ಞಾನ ಅಳವಡಿಸಿ ಪುತ್ತೂರು ತಾಲೂಕಿನ ಬಿಳಿಯೂರು ಗ್ರಾಮದ ಕಡಪುವಿನಲ್ಲಿ ನೇತ್ರಾವತಿ ನದಿ ವರ್ಟಿಕಲ್ ಲಿಪ್ಟ್‌ ಅಣೆಕಟ್ಟು ನಿರ್ಮಾಣ ಯೋಜನಾ ಕಾಮಗಾರಿ ಭರದಿಂದ ಸಾಗುತ್ತಿದೆ.

ಬೆಳ್ತಂಗಡಿ ಹಾಗೂ ಪುತ್ತೂರು ಎರಡು ತಾಲೂಕಿನ ಹಲವು ಊರುಗಳನ್ನು ಬೆಸೆಯಲು ಸೇತುವೆ, ನೀರೋದಗಿಸಲು ಕಿಂಡಿ ಅಣೆಕಟ್ಟು ನಿರ್ಮಾಣ ಹಂತದಲ್ಲಿದ್ದು, ಆಧುನಿಕ ತಂತ್ರಜ್ಞಾನ ಹೊಂದಿರುವ ವಿದ್ಯುತ್ ಚಾಲಿತ ಹಾಗೂ ಮ್ಯಾನುವೆಲ್ ನಿರ್ವಹಣೆಯ ಗೇಟ್ ಅಳವಡಿಸುವ ತಂತ್ರಜ್ಞಾನ ಇಲ್ಲಿ ಅನುಷ್ಠಾನಿಸಲಾಗುತ್ತಿದೆ.

ಮೂರು ತಿಂಗಳ ಹಿಂದೆಯಷ್ಟೇ ಸಚಿವ ಮಾಧುಸ್ವಾಮಿ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, 2022 ಮಾ. ಒಳಗಾಗಿ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

46.70 ಕೋಟಿ ರು. ವೆಚ್ಚದ ಯೋಜನೆ: ಪಶ್ಚಿಮ ವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ಮೂಲಕ 46.70 ಕೋಟಿ ರು. ವೆಚ್ಚದಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕು ಬೆಸೆಯುವ ಸೇತುವೆ ಹಾಗೂ ಕೃಷಿ ಭೂಮಿಗೆ ನೀರೋದಗಿಸುವ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡ ಲಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಳಿ ಯೂರಿನಿಂದ ಬೆಳ್ತಂಗಡಿ ತಾಲೂಕಿನ ತೆಕ್ಕಾರೆಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಿಂದ ಬೆಳ್ತಂಗಡಿಯ ಬಾಜಲ್‌ಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಬಂಟ್ವಾಳ, ಪುಂಜಾಲಕಟ್ಟೆೆ, ಬೆಳ್ತಂಗಡಿಯ ಕೆಲ ಪ್ರದೇಶಗಳಿಗೆ ಸಂಚಾರ ಹತ್ತಿರವಾಗಲಿದ್ದು, ಅನಗತ್ಯ ಸುತ್ತಾಟ ತಪ್ಪಲಿದೆ.

ವಿದ್ಯುತ್ ಚಾಲಿತ ಹಾಗೂ ಮ್ಯಾನುವೆಲ್ ತಂತ್ರಜ್ಞಾನ
ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಥಮ ವರ್ಟಿಕಲ್ ಲಿಪ್ಟ್‌ ಮಾದರಿ ಕಿಂಡಿ ಅಣೆಕಟ್ಟು ಇದಾಗಿದ್ದು, ಕಿಂಡಿ ಅಣೆಕಟ್ಟು ನಿರ್ಮಾಣದಿಂದ 7 ರಿಂದ 10 ಕಿ.ಮೀ. ವ್ಯಾಪ್ತಿಯ ತನಕದ ಕೃಷಿ ಭೂಮಿಗೆ ನೀರೋದಗಣೆಯಾಗಲಿದೆ. ನದಿ ಮಟ್ಟದಲ್ಲಿ 6 ಮೀ. ಅಗಲದ ಕಿಂಡಿ, 4 ಮೀಟರ್ ಎತ್ತರದಲ್ಲಿ ಜಲ ಮಟ್ಟವಿರಲಿದೆ.

42 ಗೇಟ್‌ಗಳಿವೆ. 41 ಫಿಲ್ಲರ್‌ಗಳಿವೆ. ಇಲ್ಲಿ ಗೇಟು ಅಳವಡಿಕೆಯ ಪ್ರಕ್ರಿಯೆ ವಿದ್ಯುತ್ ಚಾಲಿತ ಹಾಗೂ ಮ್ಯಾನುವೆಲ್ ತಂತ್ರಜ್ಞಾನ ಗಳನ್ನು ಹೊಂದಲಿದೆ. ವಿದ್ಯುತ್ ಇರುವ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಗೇಟು ಅಳವಡಿಕೆ, ತೆರಯುವುದು, ಇಲ್ಲದ ಸಂದರ್ಭದಲ್ಲಿ ಮಾನವ ಶ್ರಮದಿಂದ ರೋಲರ್ ತಿರುಗಿಸಿ ಗೇಟ್ ಲಿಪ್ಟ್‌ ಮಾಡಬಹುದಾಗಿದೆ ಎಂದು ಇಲಾಖೆ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

ಸೇತುವೆ ಆಧಾರಿತ ಕಿಂಡಿ ಅಣೆಕಟ್ಟು ನಿರ್ಮಾಣ
ಉಭಯ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಉದ್ದ 306 ಮೀ.ನಷ್ಟಿರಲಿದೆ. ಸೇತುವೆಯ ಅಗಲ 6.50 ಮೀ.ಇದ್ದು, ಇದರಲ್ಲಿ 1 ಮೀ. ಪಾದಚಾರಿ ಸಂಚಾರಕ್ಕೆ ಬಳಕೆಯಾಗಲಿದೆ. ಸೇತುವೆ ಆಧಾರಿತ ಕಿಂಡಿ ಅಣೆಕಟ್ಟು ನಿರ್ಮಾಣದ ಕಾಲಾವಧಿ ಒಟ್ಟು 18 ತಿಂಗಳು. ಈಗಾಗಲೇ ಮೂರು ತಿಂಗಳಲ್ಲಿ 153 ಮೀ.ನಷ್ಟು ಅಡಿಪಾಯ ಕಾಮಗಾರಿ ಪೂರ್ಣಗೊಂಡು ಫಿಲ್ಲರ್ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ದ.ಕ ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಎಇಇ ಸಂದೀಪ್ ತಿಳಿಸಿದ್ದಾರೆ.

***

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಥಮ ವರ್ಟಿಕಲ್ ಲಿಪ್ಟ್‌ ಕಿಂಡಿ ಅಣೆಕಟ್ಟು ಇದಾಗಿದೆ. ಜತಗೆ ಸೇತುವೆಯು ಇದೆ. ಈಗಾಗಲೇ ಶೇ.45 ರಿಂದ 50 ರಷ್ಟು ಕಾಮಗಾರಿ ಆಗಿದ್ದು, ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಒಂದು ಭಾಗ ಪೂರ್ತಿ ಆದ ಮೇಲೆ ಉಳಿದ ಅರ್ಧಭಾಗದ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಮಳೆಗಾಲದ ಅವಧಿ ಬರುವ  ಮೊದಲು ನದಿ ತಳ ಭಾಗದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉಳಿದ ಕಾಮಗಾರಿ ಅನಂತರ ಕೈಗೊಳ್ಳಲಾಗುವುದು.
– ಸಂಜೀವ ಮಠಂದೂರು, ಪುತ್ತೂರು ಶಾಸಕರು