Saturday, 14th December 2024

ಕೋವಿಡ್‌ ಸೋಂಕಿತ ತಾಯಿ ಎದೆಹಾಲುಣಿಸುವುದರಿಂದ ಮಗುವಿಗೆ ಸೋಂಕು ತಗುಲಲ್ಲ

ವಿಶೇಷ ವರದಿ: ಅಪರ್ಣಾ ಎ.ಎಸ್. ಬೆಂಗಳೂರು

ಕೋವಿಡ್ ಸಂದರ್ಭದಲ್ಲಿ ಗರ್ಭಧಾರಣೆ ಹಾಗೂ ಕರೋನಾ ಸೋಂಕಿತ ತಾಯಿ ಮಗುವಿಗೆ ಸ್ತನ್ಯಪಾನ ಮಾಡುವುದರಿಂದ ಮಗುವಿನ ಆರೋಗ್ಯಕ್ಕೆ ಹಾನಿಕಾರಕ ಎಂಬ ಭಯ ಅನೇಕ ತಾಯಂದಿರಿಗಿದ್ದು, ಈ ಭಯವನ್ನು ಬಿಟ್ಟು ಮಗುವಿಗೆ ಎದೆಹಾಲನ್ನು ಧೈರ್ಯದಿಂದ ನೀಡಬಹುದಾಗಿದೆ.

ಕೋವಿಡ್ ಸಂದರ್ಭದಲ್ಲಿ ಅನೇಕ ಮಹಿಳೆಯರು ಗರ್ಭವತಿಯಾಗುವುದರಿಂದ ಮಗುವಿಗೆ ತೊಂದರೆಯಾಗ ಬಹುದು ಎಂಬ ಕಾರಣದಿಂದ ಹಿಂಜರಿದವರೇ ಅನೇಕ. ಇದಕ್ಕೆ ಪ್ರಸ್ತುತ ಸೂಕ್ತ ಉತ್ತರ ದೊರೆಯುತ್ತಿದ್ದು, ಕರೋನಾ ಸಂದರ್ಭದಲ್ಲಿ ಗರ್ಭಿಣಿಯಾದರೆ ಅಥವಾ ಹೆರಿಗೆಯಾದರೆ ಮಗುವಿಗೆ ಯಾವುದೇ ತೊಂದರೆ
ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಹುಟ್ಟಲಿರುವ ಮಗುವಿಗೆ ಕರೋನಾ ವೈರಸ್ ಬಾಧಿಸುವುದಿಲ್ಲ.

ಇನ್ನು ಮಗು ಗರ್ಭದೊಳಗಿರುವಾಗ ತಾಯಿಗೆ ಸೋಂಕು ತಗುಲಿದರೂ ಅದರಿಂದ ಮಗುವಿಗೆ ಯಾವುದೇ ತೆರನಾದ ಅಪಾಯಗಳು ಸಂಭವಿಸುವುದಿಲ್ಲ. ಹಾಗೊಂದು ವೇಳೆ ಉಸಿರಾಟದ ಸಮಸ್ಯೆಯಂತಹ ಗಂಭೀರ ಸಮಸ್ಯೆ ಎದುರಾದಾಗ ಮಾತ್ರ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ: ಇನ್ನು ಅನೇಕರಲ್ಲಿ ಕಾಡುವ ಮತ್ತೊಂದು ಪ್ರಶ್ನೆಯೆಂದರೆ ತಾಯಿಗೆ ಕೋವಿಡ್ ಸೋಂಕಿದ್ದು ಮಗುವಿಗೆ ಹಾಲುಣಿಸುವುದರಿಂದ ಮಗುವಿಗೆ ಸೋಂಕುಂಟಾಗುವ ಸಾಧ್ಯತೆ ಯಿದೆಯೇ ಎನ್ನುವ ಪ್ರಶ್ನೆಗಳಿವೆ.

ಮಗು ಜನಿಸಿದ 30 ನಿಮಿಷದಲ್ಲಿಯೇ ಎದೆ ಹಾಲು ನೀಡುವಂತೆ ವೈದ್ಯರು ಸಲಹೆ ನೀಡುತ್ತಿದ್ದು, ಕೋವಿಡ್ ಸಂದರ್ಭದಲ್ಲಿಯೂ ಅಷ್ಟೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮಗುವಿಗೆ ಹಾಲುಣಿಸುವಂತೆ ಸೂಚನೆ ನೀಡುತ್ತಾರೆ. ಈ ಸಂದರ್ಭದಲ್ಲಿ ತಾಯಿ ಮಾಸ್ಕ್ ಹಾಗೂ ಕೈಗವಸು ಧರಿಸಿ ಹಾಲೂಡಿಸಿದರೆ ಮಗುವಿಗೆ ಯಾವುದೇ ರೀತಿಯ ತೊಂದರೆ ಸಂಭವಿಸುವುದಿಲ್ಲ. ಮಗು ಜನಿಸಿದಾಗ ಮೊದಲ ಬಾರಿಗೆ ನೀಡುವ ತಾಯಿಹಾಲು ಹೆಚ್ಚು ರೋಗನಿರೋಧಕ ಸಾಮರ್ಥ್ಯವನ್ನು ಅಧಿಕ ಪ್ರೋಟೀನ್, ಅಗತ್ಯ ಪೋಷಕಾಂಶಗಳ ಸಾರವನ್ನು ನೀಡುವುದರಿಂದ ಕರೋನಾ ಸಂದರ್ಭದಲ್ಲಿಯೂ ತಾಯಿ ಹಾಲೇ ಶ್ರೇಷ್ಠವಾದುದಾಗಿದೆ.

ಸ್ತನ್ಯಪಾನದಿಂದ ಪ್ರಯೋಜನ: ತಾಯಂದಿರ ಎದೆಹಾಲು ಮಗುವಿಗೆ ಮಾತ್ರವಲ್ಲದೇ ತಾಯಿಗೂ ಹಲವು ಪ್ರಯೋಜನ ಆಗಲಿದೆ. ಹಾಲುಣಿಸುವ ಸಮಯದಲ್ಲಿ ಕ್ಯಾಲೊರಿಗಳಿಂದ ಪೂರ್ವ ಗರ್ಭಧಾರಣೆಯ ತೂಕವನ್ನು ಹಿಂದಿರುಗಿಸುತ್ತದೆ. ಮಧುಮೇಹವನ್ನು ಶೇ.26ರಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ. ಹಾಗೆ
ಹೃದಯ ರಕ್ತನಾಳದ ಕಾಯಿಲೆಯನ್ನು ಶೇ.10ರಷ್ಟು ಕಡಿಮೆ ಮಾಡುತ್ತದೆ. ತಾಯಿ- ಮಗುವಿನ ಬಾಂಧವ್ಯ ಹೆಚ್ಚು ಮಾಡಲು ಎದೆಹಾಲು ಉಣಿಸುವುದು ಸಹ ಸಹಕಾರಿಯಾಗುತ್ತದೆ.ಇನ್ನು ಜನಿಸಿದಒಂದು ಗಂಟೆಯೊಳಗೆ ಸ್ತನ್ಯಪಾನದಿಂದ ಪ್ರತಿವರ್ಷ 2,20,000ಕ್ಕೂ ಹೆಚ್ಚು ಶಿಶುಗಳು ಉಳಿಯಲ್ಪಟ್ಟಿವೆ.

ಎದೆಹಾಲು ಸೂಕ್ತ
ಹಲವು ತಾಯಂದಿರು ಎದೆಹಾಲು ಕುಡಿಸದೇ ಬಾಟಲಿ ಹಾಲಿನ ಮೊರೆ ಹೋಗ್ತಾರೆ. ಈ ರೀತಿಯಲ್ಲಿ ಮಾಡುವುದರಿಂದ ಮಗುವಿನ ಆರೋಗ್ಯಕ್ಕೆ ಕಂಟಕವಾಗಲಿದೆ. ಇನ್ನು ಎದೆಹಾಲು ಕುಡಿಸುವುದರಿಂದ ಯಾವುದೇ ರೀತಿಯ ಸೌಂದರ್ಯ ಕಳೆದುಕೊಳ್ಳುವುದಿಲ್ಲ. ಬಾಟಲಿ ಹಾಲು ಕುಡಿಸುವುದರಿಂದ ಮಗುವಿಗೆ ಅಪೌಷ್ಟಿಕತೆ ಜತೆಗೆ ನ್ಯುಮೋನಿಯಾ, ಡೈರಿಯಾದಂತಹ ಸಮಸ್ಯೆಗಳು ಕಾಡುತ್ತದೆ. ಕೋವಿಡ್ ಸಂದರ್ಭ ದಲ್ಲಿಯೂ ತಾಯಿ ಸುರಕ್ಷತಾ ಮಾರ್ಗಸೂಚಿ ಪಾಲಿಸಿದರೆ ಯಾವುದೇ ಅಂಜಿಕೆ ಯಿಲ್ಲದೇ ಮಗುವಿಗೆ ಎದೆಹಾಲು ನೀಡಬಹುದಾಗಿದೆ.

ಹಾಲು ಕುಡಿಸುವುದು ಕೂಡ ಒಂದು ವ್ಯಾಯಮವಾಗಿದ್ದು, ಮಗು ಎದೆಹಾಲು ಕೂಡಿದಾಗ ನಿಮ್ಮ ದೇಹದಲ್ಲಿರುವ ಕ್ಯಾಲೋರಿಸ್ ಬರ್ನ್ ಆಗುತ್ತದೆ. ಜತೆಗೆ ಒತ್ತಡ, ಹೃದಯ ಕಾಯಿಲೆ ಸಮಸ್ಯೆಗಳಿಂದಲೂ ದೂರ ಇರಬಹು ದಾಗಿದೆ. ಇನ್ನು ಕೋವಿಡ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಇರುವುದರಿಂದ ಅನೇಕ ತಾಯಿಯರಿಗೆ ಎದೆ ಹಾಲನ್ನು ಬಾಟಲ್‌ನಲ್ಲಿ ಸಂಗ್ರಹಿಸುವ ಅಗತ್ಯತೆಯೂ ಬರುವುದಿಲ್ಲ. ಮಾತ್ರವಲ್ಲದೇ ಮಗುವಿಗೆ ಅಗತ್ಯವಿದ್ದಾಗ ಎದೆಹಾಲನ್ನು ನೇರವಾಗಿ ಉಣಿಸುವು ದರಿಂದ ಮಗುವಿಗೆ ಬೊಜ್ಜಿನಂತಹ ಅನೇಕ ಕಾಯಿಲೆಗಳಿಂದ ಸುರಕ್ಷಿತ ವಾಗಿರಿಸಬಹುದು.

***

ಕೋವಿಡ್ ಸಂದರ್ಭದಲ್ಲಿ ಗರ್ಭಧಾರಣೆ ಹಾಗೂ ನವಜಾತ ಶಿಶುವಿಗೆ ಹಾಲುಣಿಸುವುದರಿಂದ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮಗುವಿಗೆ ಸೋಂಕಿನ ಯಾವುದೇ ಭಯವಿರುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಮಗು ಹೆತ್ತಿರುವ ಅನೇಕ ಉದಾಹರಣೆಗಳಿವೆ. ಇನ್ನು ಸ್ತನ್ಯಪಾನದಿಂದಲೂ ಮಗು ಹಾಗೂ ತಾಯಿಗೂ ಪ್ರಯೋಜನವಿದೆ.
-ಡಾ.ಚಂದ್ರಿಕಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ