Tuesday, 22nd October 2024

Nikhil Kumaraswamy: ದೇವೇಗೌಡರಿಗೆ ಕಾಂಗ್ರೆಸ್ ನಾಯಕರು ನಂಬಿಕೆ ದ್ರೋಹ ಮಾಡಿದ್ರು: ನಿಖಿಲ್ ಕುಮಾರಸ್ವಾಮಿ

Nikhil Kumaraswamy

ತುಮಕೂರು: ತುಮಕೂರು ಜಿಲ್ಲೆಗೂ ದೇವೇಗೌಡರಿಗೂ ಅವಿನೋಭಾವ ಸಂಬಂಧ ಇದೆ, 2019ರಲ್ಲಿ ದೇವೇಗೌಡರು ಚುನಾವಣೆಗೆ ಸ್ಪರ್ಧೆ ಮಾಡಿದಾಗ ಕಾಂಗ್ರೆಸ್ ನಾಯಕರುಗಳು ನಂಬಿಕೆ ದ್ರೋಹ ಮಾಡಿದ್ರು, ನಮ್ಮ ಜತೆಯಲ್ಲಿದುಕೊಂಡೆ ಕುತ್ತಿಗೆ ಕೊಯ್ಯುವ ಕೆಲಸ ಮಾಡಿದ್ರು ಎಂದು ಕಾಂಗ್ರೆಸ್ ನಾಯಕರುಗಳ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕನಾಯಕನಹಳ್ಳಿ ಜಿ.ಎಂ.ಆರ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಬೂತ್ ಸಮಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷವನ್ನು ತಳಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಇದೊಂದು ಮಹತ್ವದ ನಿರ್ಧಾರವಾಗಿದೆ. ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರನ್ನು ಅಧಿಕಾರಕ್ಕೆ ಬಂದ ಮೇಲೆ ಗುರುತಿಸುವ ಪ್ರಾಮಾಣಿಕ ಕೆಲಸ ಮಾಡ್ತೀನಿ, ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎಲ್ಲಾ ಎಂದರು.

ಜಿಲ್ಲೆಯ ಜನತೆ ಜೆಡಿಎಸ್ ಪಕ್ಷಕ್ಕೆ ಸದಾ ಕಾಲ ಆಶೀರ್ವಾದ ಮಾಡಿದ್ದಾರೆ. 2006 – 07 ರಲ್ಲಿ ಕುಮಾರಣ್ಣ ಸಿಎಂ ಆದಾಗ ತುಮಕೂರಿನ 11ವಿಧಾನಸಭಾ ಕ್ಷೇತ್ರದಲ್ಲಿ 9 ವಿಧಾನಸಭಾ ಕ್ಷೇತ್ರದ ಶಾಸಕರನ್ನು ಆಯ್ಕೆ ಮಾಡಿಕೊಟ್ಟಿರುವಂತ ಇತಿಹಾಸ ತುಮಕೂರು ಜಿಲ್ಲೆಯ ಜನತೆ ಸಲ್ಲುತ್ತದೆ. ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಮತ್ತು ಬೂತ್ ಮಟ್ಟದ ಸಮಿತಿ ರಚನೆ ಆಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು 1999 ಪ್ರಾರಂಭ ಮಾಡಿ ಕರೆ ಕೊಟ್ಟಿದ್ದರು. ಆದ್ರೆ ಇಲ್ಲಿಯವರೆಗೂ ಕೂಡ ಆಗಿಲ್ಲ. ದೇವೇಗೌಡರ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಸದಾಕಾಲ ಪಕ್ಷದ ಏಳಿಗೆಗಾಗಿ ಸ್ವಾರ್ಥ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡಿರುವುದು ಇಡೀ ರಾಜ್ಯದಲ್ಲಿ ಲಕ್ಷಾಂತರ ಜನ ಇದ್ದಾರೆ. ಅಂತಹ ಕಾರ್ಯಕರ್ತರನ್ನ ಗುರುತಿಸಬೇಕೆಂದು ಇಡೀ ರಾಜ್ಯದಲ್ಲಿ ಜೆಡಿಎಸ್ ಸದಸ್ಯತ್ವ ನೊಂದಣಿ ಮತ್ತು ಪಕ್ಷ ಸಂಘಟನೆ ಅನಿವಾರ್ಯವಾಗಿದೆ ಎಂದರು.

Nikhil Kumaraswamy

ಕುಮಾರಣ್ಣ ಕೇಂದ್ರ ಮಂತ್ರಿಯಾದ ನಂತರ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು, ಉತ್ಸಾಹ, ಹುಮ್ಮಸ್ಸು ಪ್ರಾರಂಭವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಂಚರತ್ನ ಯೋಜನೆಯನ್ನು ಇಡೀ ರಾಜ್ಯದ ಉದ್ದಗಲಕ್ಕೂ ಕೊಡ್ಬೇಕು ಅಂತ ಹಿನ್ನೆಲೆಯಲ್ಲಿ ಕುಮಾರಣ್ಣ ರಾಜ್ಯದ ಜನತೆ ಮುಂದೆ ತಗೆದುಕೊಂಡು ಹೋದರು. ರಾಜ್ಯದ ಇತಿಹಾಸದಲ್ಲಿ ರೈತರ ಸಾಲ ಮನ್ನ ಮಾಡಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಕುಮಾರಣ್ಣ ಎಂದರು.

ನೀವೆಲ್ಲರೂ ಪ್ರೀತಿಯಿಂದ ಅಣ್ಣ ಅನ್ನುವ ಪದ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರಿಗೆ ಅಣ್ಣಾವ್ರು ಎಂದು ಕರೆಯುತ್ತಿದ್ವಿ. ರಾಜಕಾರಣದಲ್ಲಿ ಪ್ರೀತಿಯಿಂದ ಅಣ್ಣ ಅಂತ ಕುಮಾರಣ್ಣ ಅಂತ ನಿವೆಲ್ಲರೂ ಮನೆಯ ಮಗನ ರೀತಿ ಬೆಳೆಸಿದ್ದೀರಿ, ಆಶೀರ್ವದಿಸಿದ್ದೀರಿ. ದೇವೇಗೌಡರು ಈ ವಯಸ್ಸಿನಲ್ಲೂ ಕಾಶ್ಮೀರಕ್ಕೆ ಹೋಗಿದ್ರು, ಈ ದೇಶದ ಪ್ರಧಾನ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಶ್ಮೀರ ಕ್ಕೆ ವಿಶೇಷವಾಗಿ 6 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ರು. ದೇವೇಗೌಡರು ಆಡಳಿತ ಮಾಡಿದ್ದು ಕಡಿಮೆ ಅವಧಿ ಅಷ್ಟೇ, ಆದರೆ ಪರಿಣಾಮಕಾರಿ ಅವರು ರೂಪಿಸಿದ ಕಾರ್ಯಕ್ರಮ ಇವವತ್ತಿಗೂ ಇಡೀ ದೇಶದ ರೈತ ಮನಸ್ಸಿನಲ್ಲಿ ಉಳಿದಿದೆ ಎಂದರು.

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕುಮಾರಣ್ಣನ ಮುಂಬರುವ ದಿನಗಳಲ್ಲಿ 5 ವರ್ಷದಕಾಲ ಮುಖ್ಯಮಂತ್ರಿ ಮಾಡುವುದಕ್ಕೆ ಶಕ್ತಿ ಬರುತ್ತೆ ಎಂದು ತಿಳಿಸಿದರು. ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರನ್ನ ಮುಂಬರುವ ದಿನಗಳಲ್ಲಿ ಸಚಿವರಾಗಿ ಮಾಡುವ ಭರವಸೆ ನೀಡಿದರು.

ಪ್ರಾದೇಶಿಕ ಪಕ್ಷ ಮುಂಬರುವ ದಿನಗಳಲ್ಲಿ ರಾಜ್ಯದ 31 ಜಿಲ್ಲೆಯಲ್ಲೂ ಪ್ರವಾಸ ಮಾಡಿ ಸದೃಢವಾಗಿ ಕಟ್ಟುವಂತ ಪ್ರಾಮಾಣಿಕ ಕೆಲಸ ಮಾಡ್ತೀನಿ ನೀವೆಲ್ಲರೂ ನಮಗೆ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಸದಸ್ಯತ್ವ ನೋಂದಣಿ ಮತ್ತು ಬೂತ್ ಕಮಿಟಿಗಳ ನೇಮಕದಲ್ಲಿ ತೊಡಗಿ, ಪಕ್ಷವನ್ನು ಬಲಪಡಿಸುವಂತೆ ಮನವಿ ಮಾಡಿದರು.ಇಂದಿನಿಂದಲೇ ಪಕ್ಷದ ಕಾರ್ಯಕರ್ತರು ಕೆಲಸ ಆರಂಭಿಸುವಂತೆ ಅವರು ಕರೆ ನೀಡಿದರು.