Sunday, 24th November 2024

Nikhil Kumaraswamy: ಸೋಲು-ಗೆಲುವು ಸಾಮಾನ್ಯ, ಯಾರೂ ಧೃತಿಗೆಡಬಾರದು; ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಮನವಿ

ರಾಮನಗರ: ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಸೋಲಿನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಪಂಚಾಯಿತಿಯ ಶ್ರೀರಾಂಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತ ಹಾಗೂ ಅಭಿಮಾನಿ ಮಂಜುನಾಥ್ (ಅಭಿ) ಅವರ ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ವೇಳೆ ಯುವಕನ ಕುಟುಂಬಕ್ಕೆ ಧೈರ್ಯ ಹೇಳಿದ ನಿಖಿಲ್‌ ಕುಮಾರಸ್ವಾಮಿ ಅವರು, ಇನ್ನೆಂದೂ ಇಂಥ ದುಡುಕಿನ ನಿರ್ಧಾರ ಮಾಡಬೇಡ ಎಂದು ಯುವಕನಿಗೆ ಕಿವಿಮಾತು ಹೇಳಿದರು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಸೋಲೇ ಗೆಲುವಿನ ಮೆಟ್ಟಿಲು. ಹೀಗಾಗಿ ಯಾರೂ ಧೃತಿಗೆಡಬಾರದು ಎಂದು ಕಾರ್ಯಕರ್ತರಿಗೆ ನಿಖಿಲ್ ಅವರು ಮನವಿ ಮಾಡಿದರು.

ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ ಎಲ್ಲರೂ ಪಕ್ಷದ ಜತೆ ನಿಂತು ಕೆಲಸ ಮಾಡೋಣ, ಹೋರಾಟ ಮಾಡೋಣ. ನಾನು ಸೋತಿದ್ದೇನೆ ಎಂದು ಮನೆಯಲ್ಲಿ ಕುರುವುದಿಲ್ಲ, ಎದೆಗುಂದುವುದಿಲ್ಲ ನಿಮ್ಮ ಜತೆ ನಾನು ಇರ್ತೀನಿ, ಪಕ್ಷ ಇರುತ್ತೆ ಯಾರು ಕೂಡ ಧೃತಿಗೆಡಬಾರದು ಎಂದರು.

ಮನೆಗೆ ಆಧಾರವಾಗಿದ್ದ ಮಂಜುನಾಥ್ ಅವರು ಈ ರೀತಿ ಮಾಡಿಕೊಂಡಿದ್ದಕ್ಕೆ ಬಹಳ ಬೇಸರವಾಯಿತು. ಈ ತರ ಮಾಡಿಕೊಳ್ಳ ಬೇಡಿ ನಿಮ್ಮ ಜತೆ ನಾನಿರುತ್ತೇನೆ, ಎರಡು ಮಕ್ಳಳಿವೆ, ಮನಸ್ಸು ಧೃತಿಗೆಡ ಬೇಡಿ, ನಿಮ್ಮ ಜತೆ ಇರ್ತೇನೆ. ತಾಲೂಕಿನಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಮತ್ತು ಪಕ್ಷದ ಮೇಲೆ ಕಾರ್ಯಕರ್ತರು ಪ್ರಾಣ ಇಟ್ಟುಕೊಂಡಿದ್ದಾರೆ. ಯಾರು ಧೈರ್ಯ ಕಳೆದುಕೊಳ್ಳಬೇಡಿ ಎಂದು ನಿಖಿಲ್ ಅವರು ಮನವಿ ಮಾಡಿದರು.

ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಜಯಮುತ್ತು, ಮುಖಂಡರಾದ ಕುಕ್ಕೂರ ದೊಡ್ಡಿ ಜಯರಾಮ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಇದ್ದರು.

ಈ ಸುದ್ದಿಯನ್ನೂ ಓದಿ | DK Shivakumar: ಗ್ಯಾರಂಟಿ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಪೂರಕ: ಡಿಸಿಎಂ ಡಿ.ಕೆ.ಶಿವಕುಮಾರ್