Wednesday, 6th November 2024

Ninasam: ನೀನಾಸಂ ತಿರುಗಾಟ ತಂಡದಿಂದ ರಂಗ ಶಂಕರದಲ್ಲಿ ಅ. 15 & 16ರಂದು 2 ನಾಟಕ ಪ್ರದರ್ಶನ

Ninasam

ಬೆಂಗಳೂರು: ಕರ್ನಾಟಕದ ಖ್ಯಾತ ತಿರುಗಾಟ ನಾಟಕ ತಂಡವಾದ ನೀನಾಸಂ (Ninasam) ಅಕ್ಟೋಬರ್ 15 ಮತ್ತು 16, 2024ರಂದು ಬೆಂಗಳೂರಿನ ರಂಗಶಂಕರದಲ್ಲಿ ತನ್ನ ಎರಡು ಪ್ರಸಿದ್ಧ ನಾಟಕಗಳನ್ನು ಪ್ರದರ್ಶಿಸಲಿದೆ. ಅ. 15ರಂದು ʼಮಾಲತೀ ಮಾಧವʼ ಮತ್ತು ಅ. 16ರಂದು ʼಅಂಕದ ಪರದೆʼ ನಾಟಕಗಳು ಸಂಜೆ 7:30ಕ್ಕೆ ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.

ನೀನಾಸಂ ಬಗ್ಗೆ

ನೀನಾಸಂ ತಿರುಗಾಟ ತಂಡವು ಪ್ರತಿ ವರ್ಷ 2 ಹೊಸ ನಾಟಕಗಳನ್ನು ಕರ್ನಾಟಕದ ವಿವಿಧ ನಗರಗಳು ಮತ್ತು ಹಳ್ಳಿಗಳಿಗೆ ಪ್ರದರ್ಶಿಸುತ್ತದೆ. ಕಳೆದ 23 ವರ್ಷಗಳಲ್ಲಿ ನೀನಾಸಂ ತಂಡವು 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ 3,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಸುಮಾರು 19 ಲಕ್ಷ ಜನರಿಗೆ ನಾಟಕವನ್ನು ತಲುಪಿಸಿದೆ.

ʼಮಾಲತೀ ಮಾಧವʼ

ರಚನೆ: ಭವಭೂತಿ
ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರ ಕೆ.ವಿ.

ಕ್ರಿ.ಶ. 8ನೆಯ ಶತಮಾನದ ಪ್ರಸಿದ್ಧ ಸಂಸ್ಕೃತ ನಾಟಕಕಾರ ಭವಭೂತಿಯ ಈ ಕೃತಿ ಮೇಲ್ನೋಟಕ್ಕೆ ಸರಳವಾಗಿದೆ. ಮಾಲತಿ ಮತ್ತು ಮಾಧವ ಎಂಬ ಪ್ರೇಮಿಗಳು ತಮ್ಮ ಮದುವೆಗಿರುವ ತೊಡಕುಗಳನ್ನೆಲ್ಲ ದಾಟಿ ಸಂಲಗ್ನಗೊಳ್ಳುವುದೂ ಜತೆಗೆ ಇನ್ನೆರಡು ಜೋಡಿ ಮದುವೆಗಳೂ ನಡೆಯುವುದು ಈ ಕತೆಯ ತಿರುಳು. ಈ ಮದುವೆಗಳಿಗೆ ವಿಘ್ನ ಉಂಟಾಗುವುದು ರಾಜಕೀಯ ಕಾರಣದಿಂದ – ಪದ್ಮಾವತಿಯ ರಾಜನು ತನ್ನ ಗೆಳೆಯನಿಗೆ ಮಾಲತಿಯನ್ನು ಮದುವೆ ಮಾಡಿಸಲು ಬಯಸುತ್ತಾನೆ. ಇದರಿಂದ ಮಾಧವ ಹತಾಶನಾಗಿ ನಾಗರಿಕ ಲೋಕ ತೊರೆದು ಸ್ಮಶಾನವಾಸಿಯಾಗುವುದು, ಅಲ್ಲಿ ಕಾಪಾಲಿಕರಿಂದ ನರಬಲಿಗಾಗಿ ಮಾಲತಿಯ ಅಪಹರಣವಾಗಿರುವುದನ್ನು ತಡೆದು ಅವಳನ್ನು ಉಳಿಸುವುದು, ಆಮೇಲೆ ಮತ್ತೊಮ್ಮೆ ಅವಳ ಅಪಹರಣವಾದಾಗ ಮಾಧವ ಕಾಡುಮೇಡು ಅಲೆಯುವುದು, ಅಂತಿಮವಾಗಿ ಸೌದಾಮಿನಿಯೆಂಬ ಬೌದ್ಧ ಸಾಧಕಿ ಆಕೆಯನ್ನು ಉಳಿಸುವುದು ಮತ್ತು ಅಂತಿಮವಾಗಿ ಅವರಿಬ್ಬರ ಸಮಾಗಮ – ಹೀಗೆ ಕಥನ ಸಾಗುತ್ತದೆ. ಇಂಥ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಇಲ್ಲಿ ಕಾಮಂದಕಿ ಎಂಬ ಬೌದ್ಧ ಸನ್ಯಾಸಿನಿ ಮತ್ತವಳ ಶಿಷ್ಯರು ಕಾರಣರಾಗುತ್ತಾರೆ. ವೈರಾಗ್ಯಕ್ಕೆ ಮುಖ ಮಾಡಿರುವ ಸನ್ಯಾಸಿಗಳೇ ಸಂಸಾರಗಳನ್ನು ಕಟ್ಟುವ ಸೂತ್ರಧಾರರಾಗುವುದು ಈ ನಾಟಕದ ಮರ್ಮ. ಆ ಮೂಲಕ ಆಗಬಾರದ ಮದುವೆಗಳು ನಿಂತು ಆಗಬೇಕಾದ ಮದುವೆಗಳು ತಂತಾನೇ ನಡೆಯುವುದು ಈ ಕೃತಿಯ ವಿಶಿಷ್ಟ ನಾಟಕೀಯತೆ.

ʼಅಂಕದ ಪರದೆʼ

ಮರಾಠಿ ಮೂಲ: ಅಭಿರಾಮ ಭಡ್ಕಮಕರ್, ಕನ್ನಡಕ್ಕೆ: ಜಯಂತ ಕಾಯ್ಕಿಣಿ
ನಿರ್ದೇಶನ: ವಿದ್ಯಾನಿಧಿ ವನಾರಸೆ (ಪ್ರಸಾದ್)

ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆಯುತ್ತಿರುವ ಹಿರಿಯ ನಾಗರಿಕರ ಒಂದು ಆಶ್ರಯಧಾಮದೊಳಗೆ ಇದರ ಕಥೆ ನಡೆಯುತ್ತದೆ. ಆದರೆ ಇಲ್ಲಿರುವ ವ್ಯಕ್ತಿಗಳು ಬರಿದೇ ಬದುಕಿನ ಸಂಧ್ಯಾಕಾಲವನ್ನು ನೋವಿನಿಂದ ನೂಕುತ್ತಿರುವ ಹತಾಶರಲ್ಲ, ಹಲವು ಬಗೆಯಲ್ಲಿ ಕ್ರಿಯಾಶೀಲರು. ಪತ್ನಿಯಿಂದಲೇ ಹೀಗಳೆಯಲ್ಪಟ್ಟು ಮಕ್ಕಳಿಂದಲೂ ಬೇರ್ಪಟ್ಟರೂ ಅವರೆಲ್ಲರಿಗೂ ಹಣ ಕಳಿಸುತ್ತಿರುವ ದಿಲ್ಖುಷ್ ಮನುಷ್ಯ ದೇಸಾಯಿ ಇಲ್ಲಿದ್ದಾನೆ. ಹಾಗೇ ಮಗನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ಹಣ ಸಂಪಾದಿಸಿ ತಮ್ಮ ಆಸೆಗಳನ್ನು ಅದುಮಿಟ್ಟು ಬದುಕಿದ ನಾನಾ ಮಾಯಿ ಎಂಬ ಗಂಡಹೆಂಡಿರು ಇಲ್ಲೀಗ ತಮ್ಮ ಹೊಸ ಬದುಕನ್ನು ಆವಿಷ್ಕರಿಸುತ್ತಾರೆ. ಅಂತೆಯೇ ಬದುಕಿನುದ್ದಕ್ಕೂ ಸಮಾಜಮುಖೀ ಚಳುವಳಿಗಾರನಾಗಿ ದುಡಿದ ಭಾಯೀಜಿ ಮತ್ತು ಅವನಿಗಾಗಿಯೇ ತನ್ನ ಬದುಕನ್ನು ಮುಡುಪಿಟ್ಟ ಅವನ ಪತ್ನಿ ಸೇವಾತಾಯಿ ಇಲ್ಲೀಗ ಹಳೆಯ ನೆನಪುಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದಾರೆ. ಹಳೆಯ ರಂಗಭೂಮಿಯ ಕಲಾವಿದ ಜನುಭಾಯಿ ಇಲ್ಲೀಗ ತನ್ನ ಬಣ್ಣದ ಬದುಕಿನ ರೋಮಾಂಚನಗಳನ್ನು ನೆನಪಿಸಿಕೊಳ್ಳುತ್ತಾನೆ. ಇಂಥವರೆಲ್ಲರ ನಡುವೆ ಹರ್ಷನೆಂಬ ಹೊಸಗಾಲದ ಯುವ ರಂಗಕರ್ಮಿಯೊಬ್ಬ ಈ ವಾರ್ಧಕ್ಯದ ತಥ್ಯ ತಿಳಿಯಲಿಕ್ಕೆಂದು, ತನ್ನ ತಂದೆಯ ವೇಷಾಂತರದಲ್ಲಿ ಈ ವೃದ್ಧಾಶ್ರಮಕ್ಕೆ ಸೇರಿಕೊಂಡು ಅವರೊಂದಿಗೆ ರಂಗಭೂಮಿಯ ಪಾಠಗಳನ್ನು ಕಲಿಯತೊಡಗುತ್ತಾನೆ. ಹೀಗೆ ವೃದ್ಧಾಪ್ಯವೆಂಬ ವಾಸ್ತವವು ರಂಗಭೂಮಿಯ ರೂಪಕವಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಮುನ್ನಡೆಯುತ್ತದೆ.

Actor Chetan Ahimsa: ‘ಹಿಂದೂ’ ಪದವನ್ನು ಸಂದರ್ಭೋಚಿತವಾಗಿ ಅರ್ಥ ಮಾಡಿಕೊಳ್ಳಬೇಕು: ನಟ ಚೇತನ್