Friday, 22nd November 2024

Nipah Virus: ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ ಜ್ವರಪೀಡಿತ ಯುವಕ ನಿಫಾ ವೈರಸ್‌ಗೆ ಬಲಿ, ರಾಜ್ಯಕ್ಕೂ ಆತಂಕ

nipah virus kerala news

ಮಲಪ್ಪುರಂ: ಕೇರಳದಲ್ಲಿ (Kerala News) ನಿಫಾ ವೈರಸ್ (Nipah virus) ಪತ್ತೆಯಾಗಿದ್ದು ಮಾತ್ರವಲ್ಲ, 24ರ ಹರೆಯದ ಯುವಕನೊಬ್ಬನನ್ನು ಬಲಿ (Nipah death) ಪಡೆದುಕೊಂಡಿದೆ. ಈತ ಅನಾರೋಗ್ಯಪೀಡಿತನಾದ ಸಂದರ್ಭದಲ್ಲಿ ಬೆಂಗಳೂರಿನಿಂದ (Bangalore news) ಕೇರಳಕ್ಕೆ ತೆರಳಿದ್ದು ಗೊತ್ತಾಗಿದೆ. ಹೀಗಾಗಿ, ಬೆಂಗಳೂರಿನಲ್ಲೂ ನಿಫಾ ವೈರಸ್‌ ಹಬ್ಬಿರಬಹುದೇ ಎಂಬ ಆತಂಕ ಶುರುವಾಗಿದೆ.

ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ನಿಫಾ ವೈರಸ್‌ನಿಂದ ಯುವಕ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಈ ಯುವಕ ಬೆಂಗಳೂರಿನಿಂದ ಕೇರಳದ ಮಲಪ್ಪುರಂಗೆ ತೆರಳಿದ್ದ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇದೀಗ ನಿಫಾ ವೈರಸ್‌ನಿಂದ ಮೃತಪಟ್ಟಿದ್ದಾನೆ. ನಿಫಾ ವೈರಸ್ ಖಚಿತಗೊಳ್ಳುತ್ತಿದ್ದಂತೆ ಇದೀಗ ಕೇರಳ ಮಾತ್ರವಲ್ಲ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಯಾಗಿದೆ.

ಕೇರಳದ ಮಲಪ್ಪುರಂ ನಿವಾಸಿಯಾಗಿರುವ ಈ ಯುವಕ ಆರೋಗ್ಯದ ಕಾರಣದಿಂದ ತವರಿಗೆ ಮರಳಿದ್ದ. ಆಸ್ಪತ್ರೆ ದಾಖಲಾಗಿದ್ದ ಯುವಕನ ಮಾದರಿಗಳನ್ನು ಸಂಗ್ರಹಿಸಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿತ್ತು. ಸೆಪ್ಟೆಂಬರ್ 9ರಂದು ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಯುವಕನ ಸಾವು ವೈದ್ಯರ ತಂಡಕ್ಕೆ ಅನುಮಾನ ಮೂಡಿಸಿತ್ತು. ಮತ್ತೊಮ್ಮೆ ರಕ್ತದ ಮಾದರಿ ಸಂಗ್ರಹಿಸಿ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿತ್ತು.

ಈ ಮಾದರಿಯ ವರದಿ ಬಂದಿದ್ದು, ಯುವಕನಿಗೆ ನಿಫಾ ವೈರಸ್ ಪಾಸಿಟೀವ್ ಎಂದು ದೃಢಪಟ್ಟಿದೆ. ಈ ಮಾಹಿತಿಯಿಂದ ಕೇರಳದಲ್ಲಿ ಆತಂಕ ಸೃಷ್ಟಿಯಾಗಿದೆ. ನಿಫಾ ವೈರಸ್ ಖಚಿತವಾಗುತ್ತಿದ್ದಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ತುರ್ತು ಸಭೆ ಕರೆದು ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.

ನಿಫಾ ವೈರಸ್ ಪ್ರಕರಣದ ಕುರಿತು 16 ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿ ಹಾಗೂ ಅಧಿಕಾರಿಗಳು ಯುವಕನ ನೇರ ಸಂಪರ್ಕಿತರನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನಿಂದ ಕೇರಳದ ವರಗೆ 151 ಮಂದಿ ನೇರ ಸಂಪರ್ಕಿತರನ್ನು ಗುರುತಿಸಲಾಗಿದೆ. ಇದೀಗ ಅವರ ಮಾದರಿ ಸಂಗ್ರಹಿಸಲಾಗುತ್ತಿದೆ. ಇಷ್ಟೇ ಅಲ್ಲ ವರದಿ ಬರುವ ವರೆಗೂ ಎಲ್ಲರನ್ನೂ ಐಸೋಲೇಶನ್ ಮಾಡಲಾಗುತ್ತದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಹಲವರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದೆ. ಈ ಪೈಕಿ ಐವರಲ್ಲಿ ಸಣ್ಣ ಪ್ರಮಾಣದಲ್ಲಿ ಜ್ವರ, ಮೈಕೈನೋವು, ಶೀತ ಕಾಣಿಸಿಕೊಂಡಿದೆ.

ಈ ವರ್ಷ ಕೇರಳದಲ್ಲಿ ನಿಫಾ ವೈರಸ್‌ಗೆ ಬಲಿಯಾಗುತ್ತಿರುವ 2ನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬ ಜುಲೈ 21ರಂದು ನಿಫಾ ವೈರಸ್‌ಗೆ ಬಲಯಾಗಿದ್ದ.

ಇದನ್ನೂ ಓದಿ: ನಿಫಾ ಬಗ್ಗೆ ಇರಲಿ ಎಚ್ಚರ