ಬೆಂಗಳೂರು: ಈದ್‌ಮಿಲಾದ್ (Eid Milad) ಹಬ್ಬದ ಪ್ರಯುಕ್ತ ಬೆಂಗಳೂರು ನಗರ (Bangalore news) ಪೊಲೀಸರು (Bangalore Police) ಕೆಲ ಸೂಚನೆಗಳನ್ನು ಹೊರಡಿಸಿದ್ದಾರೆ. ಅದರಂತೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್ (DJ Music) ಬಳಸುವಂತಿಲ್ಲ. ಹರಿತವಾದ ಆಯುಧ (Sharp objects) ಇಟ್ಟುಕೊಳ್ಳುವಂತಿಲ್ಲ. ಸ್ತಬ್ಧ ಚಿತ್ರ ಇರುವಂತಿಲ್ಲ.
ಈದ್‌ಮಿಲಾದ್ ಹಬ್ಬದ ದಿನಗಳಾದ ಸೆ.15 ಹಾಗೂ 16ರಂದು ಮುಸ್ಲಿಮರು ನಗರದಲ್ಲಿ ಮೆರವಣಿಗೆ ನಡೆಸಲಿದ್ದಾರೆ. ವೈಎಂಸಿಎ ಮೈದಾನ, ಮಿಲ್ಲರ್ ರಸ್ತೆ, ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನ ಮತ್ತಿತರ ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಸಂಬಂಧ ಹಬ್ಬದ ದಿನದಂದು ಕೆಲವು ಸೂಚನೆಗಳನ್ನು ಪಾಲಿಸುವಂತೆ ಬೆಂಗಳೂರು ಪೊಲೀಸ್ ಆದೇಶ ಹೊರಡಿಸಿದೆ.
ಪೊಲೀಸ್ ಸೂಚನೆಗಳು
- ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
- ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು.
- ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು.
- ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
- ಮೆರವಣಿಗೆಯ ಸಮಯದಲ್ಲಿ ಆಯೋಜಕರು ವಿದ್ಯುತ್ (ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯವರನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
- ಮೆರವಣಿಗೆಯ ಸಂದರ್ಭದಲ್ಲಿ ಆಯೋಜಕರು ಬೆಂಕಿ ನಂದಿಸುವ ಸಾಮಗ್ರಿಯನ್ನು ಇಟ್ಟುಕೊಳ್ಳಬೇಕು.
- ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚಾಗಿ ದ್ವಿ-ಚಕ್ರ ವಾಹನವನ್ನು ಚಲಿಸಬಾರದು.
- ಹಿರಿಯ ನಾಗಕರಿಕರಿಗೆ ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಳಸಿಕೊಳ್ಳಬೇಕು.
- ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗಿ ಪಡೆದುಕೊಳ್ಳಬೇಕು
ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಹಾಗೂ ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Eid Mehandi Trend: ಈದ್ ಮಿಲಾದ್ ಸಂಭ್ರಮಕ್ಕೆ ಸಾಥ್ ನೀಡುವ 3 ಟ್ರೆಂಡಿ ಮೆಹಂದಿ ಡಿಸೈನ್ಸ್!