Sunday, 15th December 2024

ಮದಿರೆ, ಆಸ್ತಿಗಳ ಮಾರಾಟ ಇಳಿಕೆಯಿಂದ ಆದಾಯ ಖೋತಾ

ಕಿಕ್ ಇಲ್ಲದ ಎಣ್ಣೆ, ಸದ್ದು ಮಾಡದ ವಾಹನಗಳಿಂದ ತೆರಿಗೆ ಕುಸಿತ ಬಜೆಟ್‌ನ ಘೋಷಣೆಗಳು ದೂರ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಆಸ್ತಿ ಖರೀದಿಸುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊಂಚ ತಲೆನೋವು ತಂದಿದೆ!

ಹೌದು. ರಾಜ್ಯದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದ್ದರೂ ಮದ್ಯಪ್ರಿಯರು ಕುಡಿಯುವ ಪ್ರಮಾಣ ಕಡಿಮೆಯಾಗಿದೆ. ಹಾಗೆಯೇ ಆಸ್ತಿಗಳ ಸಂಖ್ಯೆ ಹೆಚ್ಚಾಗಿದ್ದರೂ ಅವುಗಳ ಮಾರಾಟ ಮತ್ತು ಖರೀದಿಸುವವರ ಸಂಖ್ಯೆ ಕುಸಿದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಂಡು
ಬಂದಿರುವ ಕುಸಿತ ಪ್ರಸಕ್ತ ಸಾಲಿನ ಬಜೆಟ್ ಸಿದ್ಧಪಡಿಸುತ್ತಿರುವ ಸರಕಾರವನ್ನು ಕಷ್ಟಕ್ಕೆ ನೂಕಿದೆ.

ಸರಕಾರ ಮಂಡಿಸುವ ಆಯವ್ಯಯದಲ್ಲಿ ರಾಜ್ಯದ ಸ್ವಂತ ತೆರಿಗೆಯಾದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆಯಾಗಿದ್ದು, ಇದು ಬಜೆಟ್ ರೂಪಿಸಲು ವರದಾನವಾಗಿದೆ. ಆದರೆ ಅಬಕಾರಿ, ಆಸ್ತಿಗಳ ನೋಂದಣಿ ಮತ್ತು ಮೋಟಾರ್ ವಾಹನಗಳ ಮೇಲಿನ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಕುಸಿತ ಕಂಡಿದ್ದು, ಇದರಿಂದ ಬಜೆಟ್‌ನಲ್ಲಿ ಉಚಿತ ಅಕ್ಕಿ, ಸಾಲಮನ್ನಾದಂತಹ ಜನಪರ ಹಾಗೂ ಆಕರ್ಷಕ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಎಂಗೆ ಎಣ್ಣೆ ಕೈ ಕೊಟ್ಟಿದ್ದೇಕೆ? ರಾಜ್ಯದಲ್ಲಿ ಮದ್ಯಪ್ರಿಯ ಸಂಖ್ಯೆ ಪ್ರತಿ ವರ್ಷ ಶೇ.3ರಿಂದ 5ರಷ್ಟು ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಮದ್ಯ ಮಾರಾಟವೂ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯಪ್ರಿಯರು ಹೆಚ್ಚಾಗಿದ್ದರೂ ಅವರು ಸೇವಿಸುವ ಮದ್ಯದ ಪ್ರಮಾಣ. ಅಂದರೆ ಮದ್ಯ ಮಾರಾಟ ಕಡಿಮೆಯಾಗಿದೆ.

2019-20ರಲ್ಲಿ ರಾಜ್ಯದಲ್ಲಿ 6 ಲಕ್ಷ ಬಾಕ್ಸ್ ಗಳ (ಒಂದು ಬಾಕ್ಸ್‌ ನಲ್ಲಿ 8.64 ಲೀ. ಮದ್ಯ ಇರುತ್ತದೆ ) ದೇಶಿಯ ಮದ್ಯ ಮಾರಾಟ ವಾಗಿತ್ತು. ಆದರೆ 2020-21ನೇ ಸಾಲಿನಲ್ಲಿ ಕೇವಲ 5 ಲಕ್ಷ ಬಾಕ್ಸ್‌‌‌ಗಳ ಮಾರಾಟವಾಗಿದೆ. ಇದಕ್ಕೆ ಕಾರಣ ಮದ್ಯ ದರ ದಿಢೀರ್ ಏರಿಕೆ ಕಂಡಿದ್ದು. ಕಳೆದ ಏಪ್ರಿಲ್ ಮತ್ತು ಮೇ ನಲ್ಲಿ ಲಾಕ್ ಡೌನ್ ನಿಂದಾಗಿ ಅಂಗಡಿಗಳು ಬಂದ್ ಆಗಿದ್ದವು. ಆನಂತರ ನವೆಂಬರ್‌ನಲ್ಲಿ ಮಾರಾಟ ಹೆಚಾಗುತ್ತಾ ಹೋಯಿತು.

ಆಷ್ಟೊತ್ತಿಗಾಗಲೇ ಸರಕಾರ ಹಿಂದಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ದರ ಹೆಚ್ಚಿಸಿತ್ತು. ಮೇ ತಿಂಗಳಲ್ಲಿ ಶೇ.17ರಷ್ಟು ದರ ಹೆಚ್ಚು ಮಾಡಿತ್ತು. ಇದರಿಂದ ಕಳೆದ ವರ್ಷ 21,600 ಕೋಟಿ ರು. ವರೆಗೂ ಸಂಗ್ರಹವಾಗಿದ್ದ ಆದಾಯ 2020-21ರ ಸಾಲಿಗೆ 21,000 ಕೋಟಿ ರು. ಗೆ ಇಳಿಯಿತು. ಇದರಿಂದ ಇಲಾಖೆಗೆ ನೀಡಿದ್ದ ವಾರ್ಷಿಕ 22,700ಕೋಟಿ ರು.ಗಳ ಗುರಿ ದೂರವಾಯಿತು.

ಆಸ್ತಿಗಳು ಆಸರೆಯಾಗಲಿಲ್ಲ ಏಕೆ
ಕರೋನಾ ಹಾಗೂ ಲಾಕ್ ಡೌನ್ ಪರಿಣಾಮ ರಾಜ್ಯದಲ್ಲಿ ಆಸ್ತಿಗಳ ಖರೀದಿ, ಮಾರಾಟಕ್ಕೆ ಜನರು ಮುಂದಾಗದೆ ನೋಂದಣಿ ಪ್ರಮಾಣವೇ ನೆಲ ಕಚ್ಚಿತ್ತು. ಈ ಕ್ಷೇತ್ರ 2020 ನವೆಂಬರ್ ನಂತರ ಚೇತರಿಸಿಕೊಂಡ ಫಲವಾಗಿ 2020-21ನೇ ಸಾಲಿನ 12,655 ಕೋಟಿಗಳ ಗುರಿಗೆ ಕೇವಲ 90,000 ಕೋಟಿ ರು. ಸಂಗ್ರಹಿಸುವಂತಾಗಿದೆ. ಇದನ್ನು ಹಿಂದಿನ ವರ್ಷದ ಸಾಧನೆ 10,300ಕೋಟಿ ರು.ಗಳಿಗೆ ಹೋಲಿಸಿದರೂ ತೀರಾ ಕಡಿಮೆ ಎಂದೇ ಹೇಳಬೇಕಿದೆ. ಇನ್ನು ಮೋಟಾರು ವಾಹಗಳ ನೋಂದಣಿ ಮತ್ತು ದಂಡಗಳಿಂದ ಸಂಗ್ರಹವಾಗಬೇಕಿದ್ದ 7,115 ಕೋಟಿ ರು.ಗಳಿಗೆ ಕೇವಲ 4,914 ಕೋಟಿ ಸಂಗ್ರಹವಾಗಿದೆ. ಅಂದರೆ 2021-21ನೇ ಸಾಲಿನಲ್ಲಿ ಮೋಟಾರ್ ವಾಹನಗಳಿಂದ ಬರುವ ತೆರಿಗೆಯಲ್ಲಿ ಸುಮಾರು 2,201 ಕೋಟಿ ಕೊರತೆ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುವುದಕ್ಕೆ ಹಾಗೂ ಜನರು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಪಡೆಯುವುದಕ್ಕೆ ಹಿಂದೇಟು
ಹಾಕಿದ್ದರಿಂದಲೂ ಆಸ್ತಿಗಳ ನೋಂದಣಿ ಮತ್ತು ಮೋಟಾರು ವಾಹನಗಳ ನೋಂದಣಿ ಕಡಿಮೆಯಾಗಿರಬಹುದು. ಮುಂದೆ ಇದು
ಚೇತರಿಸಿಕೊಳ್ಳುತ್ತದೆ.

ಬಿ.ಟಿ. ಮನೋಹರ್ ತೆರಿಗೆ ತಜ್ಞರು