Wednesday, 11th December 2024

ಬಿಜೆಪಿಗೂ ಯತ್ನಾಳ್’ಗೂ ಸಂಬಂಧವೇ ಇಲ್ಲ

ಅರುಣ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ

ವಿಶ್ವವಾಣಿ ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ ಬೆಂಗಳೂರು

‘ಸರಕಾರದ ನಾಯಕತ್ವ ಹಾಗೂ ಪಕ್ಷದ ವಿರುದ್ಧ ನಿರಂತರವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ್ ಎನ್ನುವುದು ಒಂದು ಗಾನ್ ಕೇಸ್. ಆವರಿಗೂ ಬಿಜೆಪಿಗೂ ಈಗ ಸಂಬಂಧವೇ ಇಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಯಲ್ಲಿ ಕಾರ್ಯತಂತ್ರ ರೂಪಿಸಲು ಶುಕ್ರವಾರ ಬೆಂಗಳೂರಿಗೆ ಆಗಮಿಸಿರುವ ಅರುಣ್ ಸಿಂಗ್ ಅವರು ವಿಶ್ವವಾಣಿಗೆ ವಿಶೇಷ ಸಂದರ್ಶನ ನೀಡಿದರು. ಈ ಸಂದರ್ಭದಲ್ಲಿ ಅವರು ಪಂಚ ರಾಜ್ಯಗಳ ಚುನಾವಣೆ ಹಾಗೂ ರಾಜ್ಯ ಉಪ ಚುನಾವಣೆ ಮತ್ತು ಬಿಜೆಪಿ ಸಮಸ್ಯೆ ಮತ್ತು ಸವಾಲು ಗಳ ಬಗ್ಗೆ ವಿವರಿಸಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ಸರಕಾರದ ವಿರುದ್ಧ ಯತ್ನಾಳ್ ಸಮರ ನಿಲ್ಲುತ್ತಿಲ್ಲ. ಪಕ್ಷದ ಶಿಸ್ತಿಗೆ ಇದು ಧಕ್ಕೆಯಲ್ಲವೇ?
ಯತ್ನಾಳ್ ಎಂಬುದು ಒಂದು ಗಾನ್ ಕೇಸ್. ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಅವರು ಯಾವುದೇ ರೀತಿಯಲ್ಲೂ
ಪಕ್ಷದ ಭಾಗವಾಗಿ ಉಳಿದಿಲ್ಲ. ಪಕ್ಷದ ವಿರುದ್ಧ ಮತ್ತು ನಾಯಕತ್ವದ ವಿರುದ್ಧ ಮಾತನಾಡುತ್ತಾರೆ ಎಂದರೆ ಆ ವ್ಯಕ್ತಿ ಪಕ್ಷಕ್ಕೆ ಸಂಬಂಧಿಸಿದವರೇ ಅಲ್ಲ ಎಂದು ತೀರ್ಮಾನಿಸಲಾಗಿದೆ. ಇದರಿಂದ ಪಕ್ಷಕ್ಕಾಗಲಿ, ಸರಕಾರಕ್ಕಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಸರಕಾರದ ಮೀಸಲಾತಿ ವಿಚಾರಗಳಿಗೂ ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದ್ದರಿಂದ
ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಕಸರತ್ತು ಹೇಗಿದೆ ?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಸಿಗುತ್ತದೆ. ಅಲ್ಲಿ ಮಮತಾ ಸರಕಾರದ ದುರಾಡಳಿತವೇ ನಮಗೆ ಲಾಭ. ಅಸ್ಸಾಂನಲ್ಲಿ  ಬಿಜೆಪಿ ಸರಕಾರ ಮುಂದುವರಿಯುತ್ತದೆ. ಕೇರಳದಲ್ಲಿ ಕಾಂಗ್ರೆಸ್ ಸುಳ್ಳು ಕಾರ್ಯತಂತ್ರದ ನಡುವೆಯೂ ಬಿಜೆಪಿಗೆ ಲಾಭವಾಗಲಿದೆ. ಅದರಲ್ಲೂ ತಮಿಳುನಾಡಿನಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವುದು ಖಚಿತ.

ಸಿಡಿ ಪ್ರಕರಣದಿಂದ ಸರಕಾರಕ್ಕೆ ಮತ್ತು ಬಿಜೆಪಿಗೆ ನಷ್ಟವಲ್ಲವೇ? ಇದನ್ನು ಹೇಗೆ ಸರಿಪಡಿಸುತ್ತೀರಿ?
ಸಿಡಿ ಪ್ರಕರಣ ಸಂಪೂರ್ಣ ಕಾಂಗ್ರೆಸ್‌ನ ಷಡ್ಯಂತ್ರ ಎಂದು ಎಲ್ಲರಿಗೂ ಗೊತ್ತಿದೆ. ಆ ಷಡ್ಯಂತ್ರ ಮಾಡಿದವರು ಯಾರು ಎನ್ನುವುದೂ ಗೊತ್ತಿದೆ. ಆದ್ದರಿಂದ ಇದರಿಂದ ಬಿಜೆಪಿಗೆ ಯಾವುದೇ ತೊಂದರೆಯಾಗುವುದಿಲ್ಲ. ಏಕೆಂದರೆ, ಆರೋಪ ಬರುತ್ತಿದ್ದಂತೆ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿದ್ದಾರೆ. ತನಿಖೆಯೂ ನಡೆಯುತ್ತಿದೆ.

ರಮೇಶ್ ರಾಜೀನಾಮೆಗೆ ಹೈಕಮಾಂಡ್ ಸೂಚನೆ ಇತ್ತೇ?
ಯಾವುದೇ ಉನ್ನತ ಸ್ಥಾನದ ವ್ಯಕ್ತಿ ವಿರುದ್ಧ ಆರೋಪ ಬಂದಾಗ 24 ಗಂಟೆಗಳಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು. ಈ ನಿಯಮ ಬಿಜೆಪಿಯಲ್ಲಿ ಮಾತ್ರ ಇದೆ. ಕಾಂಗ್ರೆೆಸ್‌ನಲ್ಲಿ ಇಂಥ ಶಿಸ್ತನ್ನು ನಿರೀಕ್ಷಿಲಾಗದು.

ರಮೇಶ್ ಬದಲು ಬಾಲಚಂದ್ರ ಚಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆಯೇ ?
ಅಂಥ ಯಾವುದೇ ಪ್ರಯತ್ನವೂ ಇಲ್ಲ. ಚಿಂತನೆಯೂ ಇಲ್ಲ. ಸಚಿವ ಸ್ಥಾನ ನೀಡಿ ಬೆಳಗಾವಿ ಚುನಾವಣೆಗೆ ಹೋಗುವ
ಅಗತ್ಯವೂ ಕಾಣುತ್ತಿಲ್ಲ.

ನಾಯಕತ್ವ ಬದಲಾವಣೆ ಬಗ್ಗೆ ಆಗಾಗ ಚರ್ಚೆ ಏಕೆ? ಇದರ ಹಿಂದೆ ಯಾರಿದ್ದಾರೆ?
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಸಾವಿರ ಬಾರಿ ಹೇಳಿದ್ದಾರೆ. ಅದನ್ನೇ ನಾನು
ಹೇಳುತ್ತಿದ್ದೇನೆ. ಇದು ಕೂಡ ಒಂದು ಷಡ್ಯಂತ್ರವಾಗಿದ್ದು, ಇದನ್ನು ಕಾಂಗ್ರೆಸ್ ನಾಯಕರೇ ಮಾಡುತ್ತಿದ್ದಾರೆ. ಇದಕ್ಕೆ ಮಾಧ್ಯಮ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಎಸ್‌ವೈ ವಿರುದ್ಧ ಶಾಸಕರಿಗೆ ಯಾವುದೇ ಅಸಮಾಧಾನವಿಲ್ಲ. ಅವರ್ಯಾರೂ ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಕೇಳಿಲ್ಲ. ಅದರ ಅಗತ್ಯವೂ ಇಲ್ಲ.

ಬೆಳಗಾವಿ ಕ್ಷೇತ್ರದಲ್ಲಿ ಮೃತರ ಕುಟುಂಬಕ್ಕೆ ಅವಕಾಶವೇ ಅಥವಾ ಅಚ್ಚರಿ ಅಭ್ಯರ್ಥಿ ಬರುವರೇ?
ಈ ಬಗ್ಗೆ ನಾನು ಹೇಳುವುದು ಕಷ್ಟ. ಇದಕ್ಕೆ ಸಂಬಂಧಿಸಿದ ರಾಜ್ಯ ಸಮಿತಿಯಲ್ಲಿ ಚರ್ಚಿಸಲಾಗುತ್ತದೆ. ನಂತರ ಕೇಂದ್ರ
ಚುನಾವಣೆ ಸಮಿತಿಯಲ್ಲಿಯೂ ಚರ್ಚಿಸಿ ತೀರ್ಮಾನ ಮಾಡಲಾಗುವುದು.

ಮಸ್ಕಿ ಕ್ಷೇತ್ರದಲ್ಲಿ ಆರ್.ಆರ್.ನಗರ ಮಾದರಿಯಲ್ಲಿ ಸಚಿವ ಸ್ಥಾನ ಭರವಸೆ ಅಸ್ತ್ರವಾಗುವುದೇ?
ನೋಡೋಣ, ಯಾವ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಮಾಡಬೇಕು ಎನ್ನುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇವೆ. ಇಂಥ ವಿಷಯಗಳನ್ನೆಲ್ಲಾ ಚುನಾವಣೆ ಕಾರ್ಯತಂತ್ರದಲ್ಲಿ ಚರ್ಚಿಸುತ್ತೇವೆ.

ರಾಜ್ಯ ಉಸ್ತುವಾರಿಯಾಗಿ ಎದುರಿಸುತ್ತಿರುವ ಸವಾಲುಗಳೇನು, ಹೊಸ ಚಿಂತನೆ ಏನಿದೆ?
ಹಳೇ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲವಾಗಿದೆ. ಇದನ್ನು ಗಟ್ಟಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ ಬಗ್ಗೆ ಜಾಗೃತಿ ಮೂಡಿಸಿ ಸಂಘಟಿಸಬೇಕಿದೆ. ಇದಕ್ಕೆ ಪಕ್ಷದ ಎಲ್ಲ ನಾಯಕರನ್ನು ಬಳಸಿಕೊಳ್ಳಬೇಕಿದೆ. ಇದೆಲ್ಲವನ್ನೂ ಕೋರ್ ಸಮಿತಿಯಲ್ಲಿ ಚರ್ಚಿಸಲಾಗುವುದು.