Sunday, 15th December 2024

ಜೂಜಾಟ ಜಾಮೀನು ರಹಿತ ಅಪರಾಧ: ಪೊಲೀಸ್ ಕಾಯ್ದೆಯ ತಿದ್ದುಪಡಿ ವಿಧೇಯಕ ಮಂಡಿಸಿದ ಸಚಿವ ಜ್ಞಾನೇಂದ್ರ

ಬೆಂಗಳೂರು: ಹಣವನ್ನು ಪಣವಾಗಿ ಕಟ್ಟುವ ಆನ್‌ಲೈನ್‌ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕರ್ನಾಟಕದ ಪೊಲೀಸ್ ಕಾಯ್ದೆಯ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು.

ಆನ್‌ಲೈನ್ ಸೇರಿದಂತೆ ಎಲ್ಲಾ ರೀತಿಯ ಜೂಜಾಟ ನಿಷೇಧ ಮಾಡುವ, ಜೂಜಾಟದಲ್ಲಿ ಭಾಗಿಯಾದವರಿಗೆ ವಿಧಿಸುವ ಶಿಕ್ಷೆ ಹಾಗೂ ದಂಡದ ಪ್ರಮಾಣ ಹಲವು ಪಟ್ಟು ಹೆಚ್ಚಳ ಮಾಡುವ ಪ್ರಸ್ತಾಪ ಹೊಂದಿದೆ.

ಆನ್‌ಲೈನ್‌ ಜೂಜಾಟ ನಿಷೇಧ ಮಾಡುವ ಸಂಬಂಧ “ಕರ್ನಾಟಕ ಪೊಲೀಸ್ ಕಾಯ್ದೆ-1963 ಕ್ಕೆ ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇದೀಗ ವಿಧಾನಸಭೆಯಲ್ಲಿ ಗೃಹ ಸಚಿವರು ಮಂಡನೆ ಮಾಡಿದ್ದಾರೆ. ಈ ತಿದ್ದಪಡಿ ಮಸೂದೆ ಎರಡೂ ಸದನದಲ್ಲಿ ಅಂಗೀಕಾರವಾದ ಬಳಿಕ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಗೇಮಿಂಗ್‌ಗೆ ನಗದು ಹಣ ಹೂಡಿಕೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ, ಹಣ ಪಾವತಿ ಮಾಡದ ಟೋಕನ್ ಪಡೆದು ಜೂಜು ಆಡುವುದು, ಡಿಜಿಟಲ್ ಕರೆನ್ಸಿ ಬಳಸಿಕೊಂಡು ಜೂಜಾಟ ಆಡುವುದು ಕೂಡ ನಿಷೇಧಿತ ಜೂಜು ಪರಿವ್ಯಾಪ್ತಿಗೆ ಸೇರಿಸಲಾಗಿದೆ.

ಜೂಜು ಕೇಂದ್ರಕ್ಕೆ ಕಟ್ಟಡ ಬಾಡಿಗೆ ನೀಡುವುದು, ಜೂಜು ಕೇಂದ್ರದ ಮೇಲ್ವಿಚಾರಣೆ, ಜೂಜಾಟಕ್ಕೆ ಸಾಲ ನೀಡುವುದು ಹಾಗೂ ಜೂಜು ಕೇಂದ್ರ ತೆರೆಯುವರಿಗೆ ಮೂರು ವರ್ಷದ ವರೆಗೆ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ನಿಗದಿ ಮಾಡಲಾ ಗಿದೆ.

ಸಾರ್ವಜನಿಕ ಸ್ಥಳದಲ್ಲಿ ಜೂಜು ಆಡುವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಜೂಜಾಡುವವರಿಗೆ ಸಾಲ ನೀಡಿ ನೆರವು ನೀಡುವರಿಗೆ ಮೊದಲ ಅಪರಾಧಕ್ಕೆ ಆರು ತಿಂಗಳ ಜೈಲು ಹಾಗೂ ಹತ್ತು ಸಾವಿರ ದಂಡ ವಿಧಿಸುವ ಪಸ್ತಾಪ ವಿಧೇಯಕ ಹೊಂದಿದೆ. ಅದೇ ರೀತಿ ಎರಡನೇ ಅಪರಾಧಕ್ಕೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ, ಮೂರನೇ ಅಪರಾಧಕ್ಕೆ ಒಂದೂವರೆ ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಆನ್‌ಲೈನ್ ಗೇಮ್ ನ್ನು ನಿಷೇಧ ಮಾಡಿ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು. ಮದ್ರಾಸು ಹೈಕೋರ್ಟ್, ಕೂಡ ಈ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಜೂಜು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವ ವೈರಸ್ ಎಂದು ಅಭಿಪ್ರಾಯಪಟ್ಟಿತ್ತು.

ವಿಧೇಯಕವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದ್ದು, ಕಾಯ್ದೆಯಾಗಿ ಜಾರಿಯಾದರೆ, ಪೊಲೀಸ್ ಠಾಣಾ ಜಾಮೀನು ಪಡೆದು ಜೂಜು ನಡೆಸುತ್ತಿದ್ದವರು ಜೈಲು ಪಾಲಾಗಲಿದ್ದಾರೆ.