Saturday, 9th November 2024

Organ Donor: ಬೇರೊಬ್ಬರ ಜೀವ ಉಳಿಸಲು ಹೋಗಿ ತಾನೇ ಪ್ರಾಣ ತೆತ್ತ ಉಪನ್ಯಾಸಕಿ; ಅಂಗ ದಾನದ ವೇಳೆ ಎಡವಟ್ಟು

organ donor archana kamat

ಮಂಗಳೂರು: ಉಪನ್ಯಾಸಕಿಯೊಬ್ಬರು ಬೇರೊಬ್ಬರ ಜೀವ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ (Mangalore news) ನಡೆದಿದೆ. ಇವರು ಅಂಗ ದಾನಕ್ಕೆ (Organ Donor) ಮುಂದಾಗಿದ್ದರು. ಈ ಪ್ರಕ್ರಿಯೆಯ ಸಂದರ್ಭ ನಡೆದ ಎಡವಟ್ಟಿನಿಂದ ಉಪನ್ಯಾಸಕಿ (Lecturer) ಅರ್ಚನಾ ಕಾಮತ್‌ (33) ಜೀವ ಹೋಗಿದೆ.

ಮಂಗಳೂರು ನಗರದ ಕರಂಗಲ್ಪಾಡಿ ನಿವಾಸಿ, ಮಂಗಳೂರಿನ ಪ್ರಸಿದ್ದ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ, ವೃತ್ತಿಯಲ್ಲಿ ಉಪನ್ಯಾಸಕಿಯಾದ ಅರ್ಚನಾ ಕಾಮತ್ ಮೃತ ದುರ್ದೈವಿ. ಅವರ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ. ಯಕೃತ್ತಿಗೆ (liver) ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರೊಬ್ಬರಿಗೆ ಯಕೃತ್ತಿನ ಕಸಿಗೆ ತಮ್ಮ ಯಕೃತ್ತನ್ನು ದಾನ ಮಾಡಿದ್ದರು. ಈ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಸೋಂಕಿಗೆ ತುತ್ತಾಗಿದ್ದರು ಎಂದು ಹೇಳಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್‌ ಸಕ್ರಿಯವಾಗಿದ್ದು ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಸುದ್ದಿ ಸಮಾಜವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸಂಬಂಧಿಕರು, ಆತ್ಮೀಯರು ಆಘಾತಕಾರಿ ಸುದ್ದಿ ತಿಳಿದು ಕಂಬನಿ ಮಿಡಿದಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ. ಅರ್ಚನಾ ಕಾಮತ್ ಅವರ ಸಾವಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

ಮೃತದೇಹವನ್ನು ಕರಂಗಲ್ಪಾಡಿಯಯ ನಿವಾಸಕ್ಕೆ ತಂದು ವಿಧಿ ವಿಧಾನ ನೆರವೇರಿಸಿದ ಬಳಿಕ ಕುಂದಾಪುರದ ಕೋಟೇಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಚನಾ ಮೂಲತಃ ಕುಂದಾಪುರದವರಾಗಿದ್ದು ಮಂಗಳೂರಿಗೆ ಮದುವೆಯಾಗಿ ಬಂದಿದ್ದರು.

“ಬಾಳಿಗೊಂದು ಅರ್ಥಪೂರ್ಣವಾದ ನಿಯಮ ಇರಬೇಕು ಎನ್ನುತ್ತಾ ಸದಾ ಎಲ್ಲರಲ್ಲೂ ಪ್ರೇರಣಾಸ್ಫೂರ್ತಿಯಾಗಿದ್ದ ಸೋದರಿ ಶ್ರೀಮತಿ ಅರ್ಚನಾ ಕಾಮತ್ ಅವರು ಮತ್ತೊಂದು ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ತನ್ನ ಉಸಿರನ್ನೇ ನಿಲ್ಲಿಸಿರುವುದು ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ನನ್ನ ಆತ್ಮೀಯರಾದ ಶ್ರೀ ಸಿ.ಎ ಚೇತನ್ ಕಾಮತ್ ರವರ ಕುಟುಂಬ ವರ್ಗಕ್ಕೆ ಹಾಗೂ ಸೋದರಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಎಲ್ಲಾ ವೃಂದಕ್ಕೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ” ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Mangalore News: ಮಂಗಳೂರು ಆಯುಷ್ ಆಸ್ಪತ್ರೆಗೆ ಉಪಕರಣ ಖರೀದಿ ಅಕ್ರಮ; ತನಿಖೆಗೆ ಆದೇಶಿಸಿದ ಸಚಿವ ದಿನೇಶ್‌ ಗುಂಡೂರಾವ್‌