Wednesday, 23rd October 2024

Ovarian Cancer: ಅಂಡಾಶಯದ ಕ್ಯಾನ್ಸರ್‌; 65 ವರ್ಷದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

Ovarian Cancer

ಬೆಂಗಳೂರು: ಅಂಡಾಶಯದ ಕ್ಯಾನ್ಸರ್‌ನಿಂದ (Ovarian Cancer) ಬಳಲುತ್ತಿದ್ದ 65 ವರ್ಷದ ಮಹಿಳೆಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೊಂದು ಸಂಕೀರ್ಣ ಪ್ರಕರಣವಾಗಿದ್ದು, ವೈದ್ಯರ ಸಮಯೋಚಿತ ನಿರ್ಧಾರ ಹಾಗೂ ವಿಶಿಷ್ಟ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ರೋಗಿಯನ್ನು ಅಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ | Autoimmune Disorder : ಕೊರೊನಾ ಬಳಿಕ ರೋಗ ನಿರೋಧಕ ಶಕ್ತಿಯಲ್ಲಿ ಗಣನೀಯ ಇಳಿಕೆ; ಸಂಶೋಧನೆ ವರದಿ

ಋತುಬಂಧಕ್ಕೊಳಗಾದ ಮಹಿಳೆ ಅಗಾಧವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರ ಬಳಿ ಚಿಕಿತ್ಸೆಗೆ ಮುಂದಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ನಂತರ ಮಹಿಳೆಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಮಹಿಳೆಯ ಅಂಡಾಶಯದಲ್ಲಿ ದೊಡ್ಡ ಗಡ್ಡೆ ಇರುವುದು ಕಂಡುಬಂದಿದ್ದು, ಕ್ಯಾನ್ಸರ್ 3ಸಿ ಹಂತದಲ್ಲಿರುವುದನ್ನು ಖಚಿತಪಡಿಸಿಕೊಂಡ ಹಿನ್ನೆಲೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವಾಸವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ನಿಶಾ ಬುಚಾಡೆ ʼಮಹಿಳೆಯ ಕಿಬ್ಬೊಟ್ಟೆಯ ದ್ರವವನ್ನು ಪರೀಕ್ಷಿಸಿದಾಗ ಕ್ಯಾನ್ಸರ್ ಕೋಶಗಳು ಇರುವುದು ಕಂಡುಬಂದಿತು. ಬಳಿಕ ಕಾರ್ಬೋಪ್ಲಾಟಿನ್ ಮತ್ತು ಪ್ಯಾಕ್ಲಿಟಾಕ್ಸೆಲ್ ಸಂಯೋಜನೆಯನ್ನು ಬಳಸಿಕೊಂಡು ಕೀಮೋಥೆರಪಿಯನ್ನು ಪ್ರಾರಂಭಿಸಿದೆವು. ಮೂರು ಹಂತಗಳಲ್ಲಿ ಕೀಮೋಥೆರಪಿಯನ್ನು ಮಾಡಿದ ಬಳಿಕ ಅಂಡಾಶಯ ಮತ್ತು ಕಿಬ್ಬೊಟ್ಟೆಯ ಪಿಇಟಿ-ಸಿಟಿ ಸ್ಕ್ಯಾನ್ ಮಾಡಲಾಯಿತು. ಆಗ ಬಹಳಷ್ಟು ಸುಧಾರಣೆ ಕಂಡುಬಂದ ಹಿನ್ನೆಲೆ ನಮ್ಮಲ್ಲಿ ಆಶಾಭಾವನೆ ಮೂಡಿತು. ಬಳಿಕ ರೋಗಿಯನ್ನು ಸೈಟೋರೆಡಕ್ಟಿವ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ಈ ಚಿಕಿತ್ಸೆಯು ಕಿಬ್ಬೊಟ್ಟೆಯೊಳಗೆ ಹರಡಿರುವ ಕ್ಯಾನ್ಸರ್ ಅಂಶಗಳನ್ನು ತೆಗೆದುಹಾಕುವ ವಿಧಾನವಾಗಿದೆ. ಇದೊಂದು ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿ (HIPEC) ಯೊಂದಿಗೆ ಸಂಯೋಜಿಸಲ್ಪಟ್ಟ ಚಿಕಿತ್ಸಾ ವಿಧಾನವಾಗಿದ್ದು, ಕಿಬ್ಬೊಟ್ಟೆಯ ಕ್ಯಾನ್ಸರ್‌ಗಳಿಗೆ ಈ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಕಿಬ್ಬೊಟ್ಟೆಯ ಒಳಪದರ, ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಓಮೆಂಟ್ ಹಾಗೂ ಉಳಿದ ಕ್ಯಾನ್ಸರ್ ಅಂಶವನ್ನು ಪರೀಕ್ಷಿಸಲಾಗುವ ಗ್ರಂಥಿಗಳ ಮೇಲೆ ಪ್ರಭಾವ ಬೀರಿದ್ದ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಕಿಬ್ಬೊಟ್ಟೆಯ ಕುಹರಕ್ಕೆ ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿ (HIPEC) ಚಿಕಿತ್ಸೆಯ ಮೂಲಕ 42 ಡಿಗ್ರಿ ಉಷ್ಣಾಂಶದಲ್ಲಿ ಕಿಮೊಥೆರಪಿ ಔಷಧಗಳನ್ನು ನೇರವಾಗಿ ನೀಡಲಾಯಿತು. ಈ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕಲು ಅನುಕೂಲವಾಯಿತು ಎಂದು ವೈದ್ಯೆ ಡಾ. ನಿಶಾ ಬುಚಾಡೆ ಹೇಳುತ್ತಾರೆ.

ಶಸ್ತ್ರಚಿಕಿತ್ಸೆ ನಡೆದ 17 ದಿನಗಳ ಬಳಿಕ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತದನಂತರ ಮೂರು ಹಂತದಲ್ಲಿ ಕೀಮೋಥೆರಪಿಯನ್ನು ನಡೆಸಿ, ಸಿಟಿ ಸ್ಕ್ಯಾನ್ ಮತ್ತು ಸಿಎ-125 ರಕ್ತ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಿ ರೋಗಿಯ ಚೇತರಿಕೆಯನ್ನು ಖಾತರಿಪಡಿಸಿಕೊಳ್ಳಲಾಯಿತು.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಸೈಟೋರೆಡಕ್ಟಿವ್ ಶಸ್ತ್ರಚಿಕಿತ್ಸೆಯೊಂದಿಗೆ ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿ (HIPEC) ಯು ಅಂಡಾಶಯದ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಸಂಯೋಜಿತ ಚಿಕಿತ್ಸಾ ವಿಧಾನವಾಗಿದೆ. ಈ ಚಿಕಿತ್ಸೆಯ ಮೂಲಕ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು. HIPEC ಚಿಕಿತ್ಸೆಯ ವೇಳೆ ಶಾಖದಿಂದ ಕೂಡಿದ ಔಷಧದ ಬಳಕೆಯು ಫಲಿತಾಂಶದ ನಿಖರತೆಯನ್ನು ಇನ್ನಷ್ಟು ಸುಧಾರಿಸುತ್ತದೆ. ಈ ಚಿಕಿತ್ಸಾ ವಿಧಾನವು ಮುಂದಿನ ದಿನಗಳಲ್ಲಿ ಭರವಸೆಯ ದಾರಿಯಾಗಿದೆ ಎಂದು ಡಾ. ನಿಶಾ ಬುಚಾಡೆ ಅಭಿಪ್ರಾಯಪಟ್ಟರು.