Wednesday, 11th December 2024

ಅಳು, ಅವಮಾನಗಳೇ ದಿನಂಪ್ರತಿ-ಕೊನೆಗೆ ಪದ್ಮಶ್ರೀ ಪಡೆದ ಜೋಗತಿ

ಅಂಕಣ:  ವಾರದ ತಾರೆ

ವಿಶೇಷ ಲೇಖನ: ವಿರಾಜ್.ಕೆ.ಅಣಜಿ

ಒಳಗೆ ಸುಳಿವ ಆತ್ಮಕೆ ಗಂಡು ಹೆಣ್ಣೆೆಂಬ ಸುಳಿವಿಲ್ಲ ಎಂಬ ಮಾತಿದೆ. ಆದರೆ ಗಂಡಾಗಿ ಹುಟ್ಟಿ ಹೆಣ್ಣುತನಕ್ಕೆ ಬದಲಾಗುವ ಸ್ಥಿತಿ ಯನ್ನೊಮ್ಮೆ ಸಾಮಾನ್ಯರಿಗೆ ಊಹಿಸಲೂ ಅಸಾಧ್ಯ. ಮಂಜುನಾಥನಾಗಿ ಹುಟ್ಟಿ, ಮಂಜಮ್ಮನಾಗಿ ಬೆಳೆದು, ಜೋಗತಿ ಪದ ಗಳಲ್ಲೇ ಬದುಕು ಕಂಡು, ನೋವು ಅವಮಾನಗಳನ್ನೇ ಉಂಡು, ಬದುಕಿಗೆ ಸಾರ್ಥಕತೆ ತಂದುಕೊಂಡವರು ಜೋಗತಿ ಮಂಜಮ್ಮ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ, ಒಂದರ್ಥದಲ್ಲಿ ಪ್ರಶಸ್ತಿಯ ಹಿರಿಮೆ ಹೆಚ್ಚಿದೆ.

ಗಂಡಾಗಿದ್ದರೆ ಮದುವೆ ಮಾಡಿ ಇನ್ನೊಂದು ಮನೆಯಲ್ಲಿ ಬದುಕುವಂತೆ ದಾರಿ ತೋರಿಸುತ್ತಿದ್ದೆವು. ಹೆಣ್ಣಾಗಿದ್ದರೆ ಮದುವೆ ಮಾಡಿ ಕೊಟ್ಟು, ಬಾಣಂತನವನ್ನು ಮಾಡಿ ಮುಗಿಸುತ್ತಿದ್ದೆವು. ಕುರುಡನೋ, ಕಿವುಡಿಯೋ, ಕುಂಟುತನವೋ ಇದ್ದಿದ್ದರೆ ಕೂರಿಸಿ ಊಟ ಹಾಕುತ್ತಿದ್ದೆವು. ಆದರೆ, ಇವನು ಎಲ್ಲದಕ್ಕೂ ತಪ್ಪಿದವನು. ಇವನು ನಮ್ಮ ಮನೆಯಲ್ಲಿರುವುದು ಬೇಡ’ ಹೀಗಂದಿದ್ದು ಹೆತ್ತ ತಂದೆ-ತಾಯಿ.

ಬರೋಬ್ಬರಿ ಇಪ್ಪತ್ತೊಂದು ಮಕ್ಕಳ ತುಂಬು ಬಡ ಕುಟುಂಬವದು. ಅದರಲ್ಲಿ ಮಂಜುನಾಥ ತುಂಟ ಬಾಲಕ, ಅಮ್ಮನಿಗೆ ಗೊತ್ತಾಗ ದಂತೆ ಎಲ್ಲ ಕೀಟಲೆ ಮಾಡಿಕೊಂಡು ಹಾಯಾಗಿದ್ದ ಹುಡುಗ. ಆದರೆ, ಹನ್ನೆರಡನೇ ವಯಸ್ಸಿಗೆ ಬಂದಾಗ, ಕ್ರಮೇಣ ದೇಹದಲ್ಲಿ ಹೆಣ್ಣಿನ ಭಾವನೆಗಳು ಟಿಸಿಲೊಡೆದವು. ಹುಡುಗಿಯಂತೆ ಶೃಂಗಾರ, ನಡವಳಿಕೆ ಬಗ್ಗೆ ಮನೆಯಲ್ಲೂ ದಿನೇದಿನೇ ಅಸಮಾಧಾನಗಳು ಪ್ರಾರಂಭವಾದವು. ದೇಹದಲ್ಲಾಗುತ್ತಿರುವ ಬೆಳವಣಿಗೆಗೆ ಈ ಹುಡುಗನಾದರೂ ಏನು ಮಾಡಿಯಾನು? ಆದರೆ, ಸಮಾಜಕ್ಕೆ ಅಂಜಿ ಬದುಕಲೇಬೇಕಲ್ಲ.

ತನ್ನ ಕೈಮೀರಿ ದೇಹ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಆ ಹುಡುಗನಾದರೂ ಏನು ಮಾಡಿಯಾನು? ಆಸ್ಪತ್ರೆಗೆ ಹೋಗಿ ತೋರಿಸಿದ್ದಾಯಿತು. ವೈದ್ಯರು ಹೇಳಿದ್ದೂ ಅದೇ, ಇದು ಚಿಕಿತ್ಸೆ ಮಾಡಲಾಗದ್ದು, ಅವನನ್ನು ಅವಳಂತೆ ಬಾಳಲು ಬಿಟ್ಟು ಬಿಡಿ. ಆದರೂ ಮತ್ತೆ ಪ್ರಯತ್ನ. ಮುಕ್ತಿ ಮಂದಿರದ ಸ್ವಾಮಿಗಳ ಬಳಿಗೆ ಕರೆದೊಯ್ದಾಗಲೂ ಅದೇ ಮಾತು. ಅನಿಷ್ಟಕ್ಕೆಲ್ಲ ಶನೇ ಶ್ಚರನೇ ಕಾರಣ ಎಂಬಂತೆ, ಮನೆಯಲ್ಲಾಗುವ ಎಲ್ಲ ಅಪಸವ್ಯಗಳ ಹೊಣೆಯೂ ಮಂಜುನಾಥನಿಗೇ ಸುತ್ತಿಕೊಳ್ಳುತ್ತಿತ್ತು.

ಕೊನೆಗೆಲ್ಲ ಪ್ರಯತ್ನಗಳೂ ವಿಫಲವಾದಾಗ ಅಂತಿಮವಾಗಿ ತಂದೆ-ತಾಯಿಯೇ ಬಂದು ಹುಲುಗಿ ದೇವಾಲಯಕ್ಕೆ ಕರೆದೊಯ್ದು ಅಲ್ಲಿ ಮುತ್ತು ಕಟ್ಟಿಸಲಾಯಿತು. ಗಂಡು ಮಕ್ಕಳಿಗೆ ಕಟ್ಟಿರುವ ಉಡುದಾರ ಕತ್ತರಿಸಿ ಜೋಗತಿ ದೀಕ್ಷೆ ಕೊಡಿಸಲಾಯಿತು. ಆ ಕ್ಷಣ ಮಂಜುನಾಥನ ಮನಸ್ಸು ಎಷ್ಟು ನೊಂದಿರಬೇಡ? ಆತನ ಹಡೆದ ತಾಯಿಗೆ ಎಂಥ ಸಂಕಟವಾಗಿರಬೇಡ? ಆದರೂ ವಿಧಿ ತಾನಂದುಕೊಂಡದ್ದನ್ನು ಮಾಡಿ ಮುಗಿಸಿತ್ತು.

ಅಲ್ಲಿಂದ ಮಂಜಮ್ಮನ ಭಿಕ್ಷಾಟನೆಯ ಜೀವನ ಶುರುವಾಗಿತ್ತು. ಆದರೆ, ತಂದೆಯೇ ಮಂಜಮ್ಮನನ್ನು ಸಹಿಸದಂತಾದರು. ಮಗ ಹೀಗಾದನಲ್ಲ ಎಂಬ ನೋವು ಅವರಿಂದ ಚುಚ್ಚು ಮಾತುಗಳನ್ನಾಡಿಸುತ್ತಿತ್ತು. ಇದರಿಂದ ನೊಂದು ಬೆಂದ ಮಂಜಮ್ಮ, ಭಿಕ್ಷಾ ಟನೆಯ ದುಡ್ಡಿನಿಂದ ವಿಷ ಖರೀದಿಸಿ ಕುಡಿದಿದ್ದರು. ಆದರೆ ಜೀವ ಗಟ್ಟಿಯಿತ್ತು. ಹದಿನೈದು ದಿನಕ್ಕೂ ಹೆಚ್ಚಿನ ಹೋರಾಟದ ನಂತರ ಮಂಜಮ್ಮ ಬದುಕಿ ಬಂದರು. ತಾನು ಮನೆಗೂ ಹೊರೆ ಆಗುವುದು ಬೇಡ, ದೈವ ಕೊಟ್ಟ ಜೀವನಕ್ಕೆ ಕೊಳ್ಳಿ ಇಡುವುದೂ ಬೇಡ ಎಂದು ಗಟ್ಟಿ ಮನಸ್ಸು ಮಾಡಿಕೊಂಡರು.

ಅಲ್ಲಿಂದ ಅವರು ಬದುಕು ಒಂಟಿಯಾಯಿತು. ಅಲ್ಲಿಯೂ ವಿಧಿ ತನ್ನ ಕ್ರೂರತನ ತೋರಿಸಿತ್ತು. ತನ್ನ ಪಾಡಿಗೆ ತಾನಿದ್ದ ಮಂಜಮ್ಮನ ಮೇಲೆ ನಾಲ್ಕೈದು ಜನ ಕಾಮ ಪಿಪಾಸುಗಳು ಮೇಲೆರಗಿದ್ದರು. ಹರಿದ ಸೀರೆ, ಕದಡಿದ ತಲೆಕೂದಲಲ್ಲೇ ಮಂಜಮ್ಮ ಅತ್ತತ್ತು ಸುಮ್ಮನಾಗಿದ್ದರು. ಆಗ ಬದುಕಿಗೆ ಜತೆಯಾಗಿದ್ದೇ ಜೋಗತಿ ಪದಗಳು. ದಾರಿ ಬದಿ ಜೋಗತಿ ಹಾಡುತ್ತಿದ್ದವರನ್ನೇ ‘ಅಪ್ಪಾ, ನನಗೂ ಜೋಗತಿ ಕಲಿಸಿ ಕೊಡಿ’ ಎಂದ ಮಂಜಮ್ಮನನ್ನು ಅಲ್ಲಿಂದ ಬದುಕು ಆಲಂಗಿಸಿಕೊಂಡಿತು. ಹಾಡು, ನೃತ್ಯ ಮಾಡಿ ಕೊಂಡು ಹಳ್ಳಿ, ಹಳ್ಳಿಯಲ್ಲಿ ಪ್ರದರ್ಶನ ಕೊಡಲಾರಂಭಿಸಿದರು.

ನೋಡಿ ನಗುತ್ತಿದ್ದ ಜನ, ಕೈಯೆತ್ತಿ ಚಪ್ಪಾಳೆ ಹೊಡೆದರು. ಕಲಾ ಸರಸ್ವತಿ ಮಂಜಮ್ಮನನ್ನು ಹರಸಿದ್ದಳು. ಬದುಕಿನ ಅತ್ಯಂತ ಕಠಿಣ ನೋವು, ಅವಮಾನ ಕಂಡಿದ್ದ ಮಂಜಮ್ಮನಿಗೆ ಗೌರವಗಳು ಅರಸಿ ಬಂದವು. ಅವರ ಕಲಾ ಸೇವೆ, ಕೆಚ್ಚೆೆದೆಯ ಬದುಕಿಗೆ ಮನ ಸೋತು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ್ಯ ಸ್ಥಾನವೇ ಅರಸಿ ಬಂದಿತ್ತು. ಈಗ ಪದ್ಮ ಶ್ರೀ ಪ್ರಶಸ್ತಿಯೂ ಕೂಡ ಅವರ ಜೋಗತಿ ಮುಡಿಗೆ ಬಂದಿದೆ.

ನಾನು ಜಾನಪದ ಸೇವೆ ಮಾಡಿದೆ ಎಂಬುದೆಲ್ಲ ದೊಡ್ಡ ಮಾತು. ನನಗದು ಹೊಟ್ಟೆ ಪಾಡು ಅಷ್ಟೆ. ಬದುಕಿನಲ್ಲಿ ಏನಾದರೂ ಮಾಡಬೇಕು ಎಂದು ಅರಿತಾಗ ನನಗೆ ಅಂತಿಮವಾಗಿ ಸಿಕ್ಕಿದ್ದೇ ಜೋಗತಿ ಪದ. ಅದನ್ನೇ ನಂಬಿದ್ದೇನೆ, ಆರಾಧಿಸಿದ್ದೇನೆ. ಹಾಡುತ್ತ, ಕುಣಿಯುತ್ತ ಬದುಕು ನಡೆಸಿದ್ದ ನನಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ನನ್ನ ಪುಣ್ಯ, ದೇವರೇ ನೀಡಿದ ಭಿಕ್ಷೆ ಎಂಬುದು ಮಂಜಮ್ಮ ಅವರ ಅತ್ಯಂತ ವಿನಮ್ರ ಮಾತು.

ಸಾಮಾನ್ಯರಾದ ನಮಗೆ ಹೆಣ್ಣೋ, ಗಂಡೋ ಎಂಬಷ್ಟರ ಮಟ್ಟಿಗೆ ಅವಮಾನಗಳು ಆಗುವುದಿಲ್ಲ. ಅಂತಹದರಲ್ಲಿ, ಸಾಧನೆ ದೂರದ ಮಾತು. ತನ್ನ ಪಾಡಿಗೆ ತಾನು ಬದುಕಲೂ ಬಿಡದಂತ ಈ ಸಮಾಜದಲ್ಲಿ ಗಂಡಿನ ಹಟ, ಹೆಣ್ಣಿನ ಛಲ ಎರಡನ್ನೂ ಹೊಂದಿ ಬಾಳಿದವರು ಮಂಜಮ್ಮ. ನಮ್ಮಿಂದಾಗದು ಎಂದು ಜೀವನವನ್ನೇ ಕೈಚೆಲ್ಲುವವರಿಗೆ, ಕೊನೆಗಾಣಿಸಿಕೊಳ್ಳುವವರಿಗೆ ಜೋಗತಿ ಮಂಜಮ್ಮ ಅವರು ಜೀವನವೇ ಸ್ಪೂರ್ತಿ. ಬದುಕು ನಾವಂದುಕೊಂಡಷ್ಟು ನಿಕೃಷ್ಟವಲ್ಲ. ಆತ್ಮವಿಶ್ವಾಸದಿಂದ ಬದುಕೋಣ, ಬದುಕಿಗೊಂದು ಗೌರವ ತಂದು ಕೊಳ್ಳೋಣ.