Friday, 20th September 2024

Menstrual Leave: ವರ್ಷಕ್ಕೆ 6 ದಿನ ಮುಟ್ಟಿನ ರಜೆ ನೀಡಲು ಮುಂದಾದ ಕರ್ನಾಟಕ ಸರ್ಕಾರ

menstrual leave

ಬೆಂಗಳೂರು: ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ದಿನದ ರಜೆಯನ್ನು (Menstrual Leave, Periods Leave) ನೀಡಲು ಕರ್ನಾಟಕ ಸರಕಾರ (Karnataka government) ನಿರ್ಧರಿಸಿದೆ. ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದ್ದು, ಇದನ್ನು ಪರಿಶೀಲಿಸಲು ರಚಿಸಲಾದ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

“ಈ ಕುರಿತು ವರದಿ ನೀಡಲು ಡಾ. ಸಪ್ನಾ ಮುಖರ್ಜಿ ನೇತೃತ್ವದ ಸಮಿತಿ ರಚಿಸಲಾಗಿದೆ. ಅದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಈ ಕುರಿತು ಚರ್ಚೆ ನಡೆಸುತ್ತೇವೆ. ಒಪ್ಪಿಗೆಗಾಗಿ ಅದನ್ನು ಶಾಸಕಾಂಗದ ಮುಂದೆ ಇಡಲಾಗುವುದು” ಎಂದು ಕಾರ್ಮಿಕ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾರೆ.

ಸರಕಾರ ಈ ಕ್ರಮವನ್ನು ಮೊದಲು ಖಾಸಗಿ ವಲಯಕ್ಕೆ ಪರಿಚಯಿಸಲು ಯೋಜಿಸಿದೆ. ಈ ಕುರಿತು ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಯೋಜಿಸಿದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಒಂದು ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಈ ವರ್ಷದ ಜುಲೈನಲ್ಲಿ, ಮಹಿಳಾ ಸಿಬ್ಬಂದಿಗೆ ಪೀರಿಯೆಡ್ಸ್‌ ರಜೆಯ ಬಗ್ಗೆ ಮಾದರಿ ನೀತಿಯನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿತ್ತು. ಉದ್ಯೋಗದಾತರು ಮುಟ್ಟಿನ ರಜೆ ನೀಡುವುದನ್ನು ಕಡ್ಡಾಯಗೊಳಿಸುವುದು ಮಹಿಳೆಯರಿಗೆ ಮತ್ತು ಉದ್ಯೋಗಗಳಲ್ಲಿ ಅವರ ಭಾಗವಹಿಸುವಿಕೆಗೆ ಪ್ರತಿಕೂಲವಾಗಬಹುದು ಎಂದು ಅದು ಹೇಳಿತ್ತು.

ಕರ್ನಾಟಕದಲ್ಲಿ ಮುಟ್ಟಿನ ರಜೆಯನ್ನು ಪರಿಚಯಿಸುವ ಪ್ರಸ್ತಾಪದ ಬಗ್ಗೆ ಇತ್ತೀಚೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೂಡ ಮಾತನಾಡಿದ್ದರು.

ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಪ್ರಸ್ತಾವನೆ ಚರ್ಚೆಯ ಹಂತದಲ್ಲಿದೆ. ಸಚಿವರು ಅದನ್ನು ತರಲು ಯೋಜಿಸಿದ್ದರು. ಆದರೆ ಅದನ್ನು ಮೊದಲು ಕಾರ್ಮಿಕ ಇಲಾಖೆಯು ಪರಿಶೀಲಿಸಲಿದೆ. ನಂತರ ಇದು ಇಲಾಖೆ ಮತ್ತು ಸರ್ಕಾರಿ ಹಂತಗಳಿಗೆ ಹೋಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, IT-BT, ಆರೋಗ್ಯ, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಗಳು ಮತ್ತು ಇತರ ಸಂಬಂಧಿತ ವಲಯಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ ಎಂದಿದ್ದಾರೆ.

“ಮಹಿಳೆಯರು ನಮ್ಮ ಉದ್ಯೋಗಿಗಳಲ್ಲಿ ಗಮನಾರ್ಹ ಸಂಖ್ಯೆಯ ಭಾಗ. ಅವರ ಅಗತ್ಯಗಳು ಪುರುಷರಿಗಿಂತ ಭಿನ್ನವಾಗಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಅಗತ್ಯಗಳಿಗೆ ಸರ್ಕಾರ ಸಂವೇದನಾಶೀಲವಾಗಿದೆ. ನಾವು ಈ ಸಮಸ್ಯೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳುತ್ತಿದ್ದೇವೆ. ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಬಿಹಾರ 1992ರಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿದೆ. ಇಲ್ಲಿ ಪ್ರತಿ ತಿಂಗಳು ಎರಡು ದಿನಗಳ ರಜೆಯನ್ನು ಒದಗಿಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರಗಳು ಮಹಿಳೆಯರಿಗೆ ಕೆಲವು ರೀತಿಯ ಮುಟ್ಟಿನ ರಜೆಯನ್ನು ಹೊಂದಿವೆ. ಜಾಗತಿಕವಾಗಿ ಸ್ವೀಡನ್, ಇಟಲಿ, ದಕ್ಷಿಣ ಕೊರಿಯಾ, ತೈವಾನ್ ಮತ್ತು ಜಪಾನ್ ಮಹಿಳೆಯರಿಗೆ ಪೀರಿಯೆಡ್ಸ್‌ ರಜೆಗಳನ್ನು ನೀಡುತ್ತವೆ.

ಇದನ್ನೂ ಓದಿ: ಮುಟ್ಟಿನ ಕಪ್; ಜಾಗೃತಿ ಅಗತ್ಯ