Sunday, 15th December 2024

Panditaradhya Shivacharya Swamiji: ಲಿಂಗಾಯತ, ಇಸ್ಲಾಂ ಒಂದೇ ಥರ ಎಂದ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ!

sanehalli panditaradhya shivacharya swamiji

ಚಿತ್ರದುರ್ಗ: ಲಿಂಗಾಯತ ಧರ್ಮ (Lingayat) ಮತ್ತು ಇಸ್ಲಾಂಗಳಲ್ಲಿ (Islam) ಒಂದೇ ರೀತಿಯ ಕೆಲವು ಅಂಶಗಳಿವೆ. ಉಭಯ ಧರ್ಮಗಳಲ್ಲಿ ಸಾಮ್ಯತೆಗಳಿವೆ ಎಂದು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧಿಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Sanehalli Panditaradhya Shivacharya Swamiji) ಹೇಳಿದ್ದಾರೆ.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್‌ ವತಿಯಿಂದ ಆಯೋಜಿಸಲಾಗಿದ್ದ ಕುರಾನ್‌ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಬೇರೆ ಬೇರೆಯಾಗಿದ್ದರೂ ಕೆಲವು ಒಂದೇ ರೀತಿಯ ಅಂಶಗಳನ್ನು ಹೊಂದಿವೆ ಎಂದಿದ್ದಾರೆ. ಲಿಂಗಾಯತ ಹಾಗೂ ಇಸ್ಲಾಂ ಕುರಿತ ಸ್ವಾಮೀಜಿ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರಿಂದ ವಿರೋಧವೂ ವ್ಯಕ್ತವಾಗಿದೆ.

ಲಿಂಗಾಯತ ಧರ್ಮ ಬಹು ದೇವರುಗಳ ಆರಾಧನೆ ಮತ್ತು ಮೂರ್ತಿ ಪೂಜೆಯನ್ನು ನಿರಾಕರಿಸುತ್ತದೆ. ಆದರೆ ಅದು ಇಷ್ಟಲಿಂಗ ಪೂಜೆಯನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಕೂಡ ಮೂರ್ತಿ ಪೂಜೆ ಬೇಡವೆಂಬ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಿಗ್ರಹಗಳನ್ನು ಪೂಜಿಸಬೇಡಿ, ಅಲ್ಲಾಗೆ ಮಾತ್ರ ನಡೆದುಕೊಳ್ಳಿ ಎಂದು ಮುಸ್ಲಿಮರನ್ನು ಪೈಗಂಬರ್ ಕೇಳಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಒಬ್ಬನೇ ದೇವರ ಹಲವು ಹೆಸರುಗಳ ಸಿದ್ಧಾಂತವನ್ನು ಅನೇಕರು ಪ್ರಚಾರ ಮಾಡಿದ್ದಾರೆ. ದೇವರು ಒಬ್ಬನೇ. ಆದರೆ ಜನರು ಇನ್ನೂ ತಮ್ಮ ನಡುವೆ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ತಮ್ಮ ಸುತ್ತಲೂ ಬೇಲಿಗಳನ್ನು ರಚಿಸುತ್ತಿದ್ದಾರೆ. ಹಾಗಾಗಿ ವಿಚಾರವಾದಿಗಳು ಇಂತಹ ಗೋಡೆ, ತಡೆಗೋಡೆಗಳನ್ನು ಕೆಡವಿ ಪರಸ್ಪರ ಪ್ರೀತಿಸುವ ಹವ್ಯಾಸ ಬೆಳೆಸಿಕೊಳ್ಳುವಂತೆ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆಯೂ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದಾರೆ. ಹಿಂದೂ ಎಂಬುದು ಧರ್ಮವೇ ಅಲ್ಲ, ಅದೊಂದು ಆನೈತಿಕ ಹಾಗೂ ಅನಾಚಾರ ಎಂದು ಹೇಳುವ ಮೂಲಕ ಅವರು ಹಿಂದೊಮ್ಮೆ ಚರ್ಚೆಗೆ ಗ್ರಾಸವಾಗಿದ್ದರು.

ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಮನೆ ಕಾರ್ಯಕ್ರಮಗಳಲ್ಲಿ ಗಣಪತಿ ಪೂಜೆ ಮಾಡುವುದು ಮೌಢ್ಯದ ಆಚರಣೆ ಎಂದು ಅವರು ಹೇಳಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡುವಾಗ “ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ಗಣಪತಿ ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳವಳಿಯ ಸಂದರ್ಭಕ್ಕೆ ನೆಪಮಾತ್ರಕ್ಕೆ ಹುಟ್ಟಿಕೊಂಡ ದೇವರು. ಬಾಹ್ಯವಸ್ತುಗಳಿಂದ ಮಾಡಿದ ದೇವರು ದೇವರಲ್ಲ” ಎಂದಿದ್ದರು.

ಈ ಸುದ್ದಿ ಓದಿ: ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ‌: ಬಿ.ಕೆ. ಹರಿಪ್ರಸಾದ್