Saturday, 14th September 2024

Pavithra Gowda: ಪವಿತ್ರಾಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್;‌ ಸದ್ಯಕ್ಕೆ ಜೈಲೇ ಗತಿ

Pavithra Gowda

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಪವಿತ್ರಾ ಗೌಡ (Pavitra Gowda) ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ನಗರದ 57ನೇ ಸಿಸಿಎಚ್‌ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರ್‌ ಆದೇಶ ಹೊರಡಿಸಿದ್ದು, ಇದರಿಂದ ಸದ್ಯಕ್ಕೆ ಪವಿತ್ರಾಗೌಡಗೆ ಜೈಲೇ ಗತಿಯಾಗಿದೆ. ಇದೇ ವೇಳೆ ಪ್ರಕರಣದ 7ನೇ ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ.

ಆ.28ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ಆದೇಶವನ್ನು ಇಂದಿಗೆ (ಶನಿವಾರ) ಕಾಯ್ದಿರಿಸಿತ್ತು. ಇದೀಗ ಪವಿತ್ರಾ ಗೌಡಗೆ ಜಾಮೀನು ನೀಡಲು ಕೋರ್ಟ್‌ ನಿರಾಕರಿಸಿದೆ. ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸೆಬಾಸ್ಟಿಯನ್, ಪವಿತ್ರಾಗೌಡ ಹಾಗೂ ದರ್ಶನ್​ಗೆ ಒಂದು ರೀತಿಯ ಸಂಬಂಧ ಇರಬಹುದು. ಆದರೆ ರೇಣುಕಾಸ್ವಾಮಿ ಕೊಲೆಯಲ್ಲಿ ‌ಪವಿತ್ರಾಗೌಡರದ್ದು ಯಾವುದೇ ಪಾತ್ರವಿಲ್ಲ. ಮಹಿಳೆಯಾದ ಕಾರಣಕ್ಕೆ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಆರೋಪಿಗಳು 2 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಎ2 ದರ್ಶನ್‌ ಅವರನ್ನು ಇತ್ತೀಚೆಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು.

ಸೆ.9ರವರೆಗೆ ನ್ಯಾಯಾಂಗ ಬಂಧನ

ದರ್ಶನ್‌ ಮತ್ತು ಗ್ಯಾಂಗ್‌ಗೆ ನ್ಯಾಯಾಂಗ ಬಂಧನದ ಅವಧಿಯನ್ನು ಆ.28ರಂದು ಕೋರ್ಟ್ ಮತ್ತೆ 13 ದಿನಗಳ ಕಾಲ ವಿಸ್ತರಿಸಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದು, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟಂಬರ್ 9ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿತ್ತು.

ರಾಜಾತಿಥ್ಯ ನೀಡಿದ್ದಕ್ಕೆ 7 ಅಧಿಕಾರಿಗಳ ಅಮಾನತು

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ದಲ್ಲಿ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಗೃಹ ಇಲಾಖೆಯಿಂದ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ದರ್ಶನ್‌ಗೆ ರಾಜ್ಯಾತಿಥ್ಯ ನೀಡಿರುವ ಸಂಬಂಧ ಫೋಟೋ ವೈರಲ್ ಆದ ಬೆನ್ನಲ್ಲೇ ಎಲ್ಲೆಡೆ ಪೊಲೀಸ್ ಇಲಾಖೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಘಟನೆ ಸಂಬಂಧ 7 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಏಳು ಜನ ಅಧಿಕಾರಿಗಳನ್ನು ಸಸ್ಪೆಂಟ್ ಮಾಡಿದ್ದೇವೆ. ಶರವಣ, ಶರಣಬಸವ, ಪ್ರಭು ಎಸ್, ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡನ್ ವೆಂಕಪ್ಪ, ಸಂತೋಷ್ ಕುಮಾ‌ರ್ ನರಸಪ್ಪ ಅವರನ್ನು ಅಮಾನತು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *