Tuesday, 5th November 2024

ಆತ್ಮತೃಪ್ತಿಯಾಗುವಂತೆ ಕೆಲಸ ಮಾಡುವಂತೆ ಆಸ್ತಿಕತೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 24

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

*ಎಮ್ಮೆರ್ಜೆನ್ಸಿ ವಿರೋಧಿಸಿದೆ. ಒಂದು ದಿನ ಪೊಲೀಸರು ಬಂಧಿಸಿದರು.
*ಮೂರು ಸಾವಿರ ಖರ್ಚು ಮಾಡಿ ತಾಲೂಕು ಪಂಚಾಯಿತಿ ಸದಸ್ಯನಾಗಿದ್ದೆ
*77 ರಲ್ಲಿ ಮೇ. 15 ರಂದು ಮದುವೆ, ಬೆಂಗಳೂರಿನ ಪರಿಚಯಸ್ಥರ ಮನೆಯಲ್ಲಿ ಮದುವೆ.

ಬೆಂಗಳೂರು: ನಾನು ನಾಸ್ತಿಕನಲ್ಲ, ಆಸ್ತಿಕ. ದೇವರ ಬಗ್ಗೆ ನಂಬಿಕೆ ಇದೆ, ಸ್ವಾಮಿಜಿಗಳ ಬಗ್ಗೆ ಗೌರವ ಇದೆ. ನಮ್ಮ ಆತ್ಮಕ್ಕೆ ತೃಪ್ತಿಯಾಗುವಂತೆ ಕೆಲಸ ಮಾಡುವುದೇ ಆಸ್ತಿಕತೆ, ಇನ್ನೊಬ್ಬರಿಗೆ ಸಹಾಯ ಮಾಡುವುದೇ ಆಸ್ತಿಕತೆ ಎಂದು ನಾನು ನಂಬಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತನಾಡಿದ ಅವರು, ತಾವು ನಡೆದುಬಂದ ಸುದೀರ್ಘ ದಾರಿಯನ್ನು ವಿವರಿಸಿದರು. ನಾನು ಗುಡಿಗೆ ಹೋಗುತ್ತೇನೆ. ಪ್ರಸಾದ ಸ್ವೀಕಾರ ಮಾಡುತ್ತೇನೆ. ದೇವರ ಬಗ್ಗೆ ನಂಬಿಕೆ ಇದೆ. ಸ್ವಾಮಿಜಿಗಳ ಬಗ್ಗೆ ಗೌರವ ಇದೆ. ನನ್ನನ್ನು ಅನೇಕರು ದುರಹಂಕಾರಿ ಎನ್ನುತ್ತಾರೆ. ನೇರವಾಗಿ ಮಾತನಾಡು ವವರನ್ನು, ಇದ್ದುದನ್ನು ಇದ್ದಹಾಗೆ ಮಾತನಾಡುವವರನ್ನು ದುರಹಂಕಾರಿ ಎನ್ನುತ್ತಾರೆ ಎಂದು ವಿಷಾದಿಸಿದರು.

ನಾನು ಮೌಢ್ಯ, ಕಂದಾಚಾರಗಳ ವಿರೋಧಿ. ಹಾಗಾಗಿ ಮೌಢ್ಯವಿರೋಧಿ ಕಾನೂನು ಜಾರಿಗೆ ತಂದಿದ್ದೇನೆ. ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಸಂವಿಧಾನದ ಪ್ರಕಾರ ಕೆಲಸ ಮಾಡಬೇಕೆನ್ನುವವನು ನಾನು. ಕೋಮುವಾದದ ಜತೆ ಎಂದಿಗೂ ನನ್ನ ರಾಜಿ ಇಲ್ಲ. ಧರ್ಮ ಒಡೆಯುವವರ ಜತೆ ರಾಜಿ ಇಲ್ಲ. ಧರ್ಮ ಸಹಿಷ್ಣುತೆ ಇರಬೇಕು. ನಮ್ಮ ಧರ್ಮದ ಬಗ್ಗೆ ನಂಬಿಕೆ, ಪರ ಧರ್ಮದ ಬಗ್ಗೆ ಗೌರವ ಇರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಅಧಿಕಾರಕ್ಕಾಗಿ ಸಿದ್ಧಾಂತ ಮತ್ತು ನಂಬಿಕೆ ಬದಲಾಯಿಸುವುದಿಲ್ಲ. ಆರೋಗ್ಯ ಸರಿ ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಇದೇ ದಾರಿಯಲ್ಲಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬಾಲ್ಯ ಜೀವನ ಮೆಲುಕು: ನಾನು ಸಿದ್ದರಾಮನ ಹುಂಡಿಯ, ಸಿದ್ದರಾಮೇಗೌಡ ಅವರ ಮಗನಾಗಿ ಜನಿಸಿದೆ. ಆರು ಜನ ಮಕ್ಕಳು, ತಂದೆ ತಾಯಿ ಅವಿದ್ಯಾ ವಂತರು, ಹೀಗಾಗಿ, ವಿದ್ಯೆ ಕಲಿಯಲಿಲ್ಲ. ಇಬ್ಬರೂ ಅಕ್ಕಂದಿರು ಶಾಲೆಗೆ ಹೋಗಲಿಲ್ಲ. ಅಣ್ಣ ಪ್ರಾಥಮಿಕ ಶಾಲೆಯಷ್ಟೇ ಓದಿದರು. ತಮ್ಮಂದಿರು ಶಾಲೆಗೆ ಸೇರಿದರು. ಆದರೆ, ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಸಿದ್ದರಾಮೇಶ್ವರ ನಮ್ಮ ಮನೆ ದೇವ್ರು. ಆ ದೇವ್ರ ಒಕ್ಕಲು ವೀರ ಮಕ್ಕಳ ಕುಣಿತಕ್ಕೆ ಸೇರಿಸುವುದು ಸಂಪ್ರದಾಯ.

ಅದರಂತೆ ನನ್ನನ್ನು ಸೇರಿಸಿದರು. ಅದನ್ನು ಕಲಿಸುತ್ತಿದ ನಂಜೇಗೌಡ ನನಗೆ ಅಕ್ಷರವನ್ನು ಕಲಿಸಿದರು. ಆಗ ನನ್ನ ಜತೆಯಿದ್ದ 26 ಜನ ನನ್ನ ಸಂಗಡಿಗರು ಎರಡು ವರ್ಷದಲ್ಲಿ ಕನ್ನಡ, ಕಾಗುಣಿತ, ಲೆಕ್ಕವನ್ನೆಲ್ಲ ಕಲಿತಿದ್ದೆವು. ನಂತರ ವೀರ ಮಕ್ಕಳ ಕುಣಿತ ಕಲಿಸುವುದು ನಿಂತಿತು. ಆಮೇಲೆ ಒಂದು ವರ್ಷ ಎಮ್ಮೆ ಮೇಯಿಸಿದ್ದೆ.
ರಾಜಪ್ಪ ಅಂತ ಸಕಲೇಶಪುರದಿಂದ ಬಂದಿದ್ದ ಹೆಡ್ ಮಾಸ್ಟರ್ ಮನೆಮನೆಗೆ ಬಂದು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವೊಲಿಸುತ್ತಿದ್ದರು. ಆಗ ನಮ್ಮ ತಂದೆ ಇವನು ಶಾಲೆಗೆ ಹೋಗಿಲ್ಲ, ವೀರ ಮಕ್ಕಳ ಕುಣಿತಕ್ಕೆ ಸೇರಿಸಿದ್ದೇವೆ, ಅಲ್ಲಿ ಒಂದಷ್ಟು ಕಲಿತಿದ್ದೇನೆ ಎಂದರು. ಶಾಲೆಯಲ್ಲಿ ನಾವು ಬರೆದಿದ್ದನ್ನು ನೋಡಿ ನೇರವಾಗಿ ಐದನೇ ತರಗತಿಗೆ ಸೇರಿಸಿದರು.

ಪ್ರೊ. ನಂಜುಂಡಸ್ವಾಮಿ ಅವರಿಂದ ರಾಜಕೀಯ ಆಸಕ್ತಿ: ಶಾರದಾ ವಿಲಾಸ್ ಲಾ ಕಾಲೇಜು, ಪ್ರೊ.ನಂಜುಂಡಸ್ವಾಮಿ ರೈತ ಸಂಘದಲ್ಲಿದ್ದರು. ಎಮ್ಮೆಯಾಗಿದ್ದರು. ಅವರ ಸಂಪರ್ಕ ಬೆಳೆಯಿತು. ಅನಂತರ ಸಮಾಜವಾದಿ ತತ್ವದಿಂದಾಗಿ ರಾಜಕೀಯ ಆಸಕ್ತಿ ಬೆಳೆಯಿತು. ಹತ್ತನ್ನೆರಡು ಜನ ಅವರ ಜತೆ ಟೀ ಕುಡಿಯುವಾಗ
ರಾಜಕೀಯ ಚರ್ಚೆ ನಡೆಯಿತ್ತಿತ್ತು. ಇದು ರಾಜಕೀಯ ಸೇರ್ಪಡೆಗೆ ಕಾರಣವಾಯ್ತು. ನಂಜುಡಸ್ವಾಮಿ ಪ್ರಭಾವದಿಂದ ಯೂನಿಯನ್ ಚಟುವಟಿಕೆಗಳಲ್ಲಿ ಭಾಗವಹಿಸಿ ದ್ದೆವು. ಕಾಂಗ್ರೆಸ್ ವಿರುದ್ಧ ಡಾ.ತಿಮ್ಮೇಗೌಡ ಪರ ಕ್ಯಾನ್ವಾಸ್ ಮಾಡಿದೆ, ಸಂಸ್ಥಾ ಕಾಂಗ್ರೆಸ್‌ನಿಂದ ರಾಜಶೇಖರ್ ಮೂರ್ತಿ ಪರ ಕೆಲಸ ಮಾಡಿದೆ.

ಮೂರು ಬಾರಿ ಸಿಎಂ ಆಗುವ ಅವಕಾಶ ಕೈತಪ್ಪಿತು: ನಾನು ಜನತಾ ಪಕ್ಷದಲ್ಲಿ ಸಕ್ರಿಯವಾಗಿದ್ದುಕೊಂಡು, ಮೂರು ಬಾರಿ ಸಿಎಂ ಆಗುವ ಅವಕಾಶವಿತ್ತು. ಆದರೆ, ಅದೆಲ್ಲವೂ ಕಾರಣಾಂತರದಿಂದ ತಪ್ಪಿತು. ಮೊದಲಿಗೆ 1994ರಲ್ಲಿ ದೇವೇಗೌಡರು ಕೇಂದ್ರದ ರಾಜಕಾರಣಕ್ಕೆ ಹೋಗಿ, ಅವರ ಸ್ಥಾನಕ್ಕೆ ನಾನು ಬರಬೇಕು ಎಂಬ ಚರ್ಚೆ ನಡೆಯಿತು. ಆದರೆ, ಆಗ ಜೆ.ಎಚ್.ಪಟೇಲರು ಸಿಎಂ ಆದರು. ನನ್ನನ್ನು ಡಿಸಿಎಂ ಮಾಡಲಾಯಿತು.

ನಂತರ 2004ರಲ್ಲಿ ಬಂಗಾರಪ್ಪ ಬಿಜೆಪಿಗೆ ಹೋದರು. ಆಗ ಬಿಜೆಪಿ 79, ಜೆಡಿಎಸ್ 59 ಸ್ಥಾನ ಗಳಿಸಿತ್ತು. ಕಾಂಗ್ರೆಸ್ ಬೆಂಬಲದಿಂದ ಸಮ್ಮಿಶ್ರ ಸರಕಾರ ರಚನೆಯಾಯಿತು. ನಾನು ಸಿಎಂ ಆಗಬೇಕಿತ್ತು. ಆದರೆ, ಕಾಂಗ್ರೆಸ್‌ನವರು ಒಪ್ಪಲಿಲ್ಲ ಎಂದು ದೇವೇಗೌಡರು ಹೇಳಿದರು. ಧರ್ಮಸಿಂಗ್ ಸಿಎಂ ಆದರು. ನಾನು ಹಣಕಾಸು ಮಂತ್ರಿ ಮತ್ತು ಡಿಸಿಎಂ ಆದೆ.

ಕೇಂದ್ರ ರಾಜಕಾರಣದತ್ತ ಆಸಕ್ತಿ ಇಲ್ಲ
ಕೇಂದ್ರ ರಾಜಕಾರಣಕ್ಕೆ ತೆರಳುವ ಮನಸ್ಸಿಲ್ಲ, ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರಿಯಲು ಬಯಸುತ್ತೇನೆ. ಇಲ್ಲಿಯೇ ಮಾಡಲು ಬೇಕಾದಷ್ಟು ಕೆಲಸ ಗಳಿವೆ. ಹೀಗಾಗಿ, ಕೇಂದ್ರ ರಾಜಕಾರಣದ ಕಡೆಗೆ ಗಮನ ನೀಡುವುದಿಲ್ಲ. ರಾಜ್ಯ ರಾಜಕಾರಣದ ಮೇಲೆಯೇ ಕೇಂದ್ರೀಕರಣ ಮಾಡಿ ನಾನು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇನೆ. ರಾಜ್ಯ ಸರಕಾರ ಕೋವಿಡ್ ನಿರ್ವಹಣೆ ಸೇರಿದಂತೆ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನಾನು ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ಕೊನೆಗಾಣಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

ಓದು, ಸಿನಿಮಾ ಆಸಕ್ತಿ ಇದೆ

ರಾಜಕಾರಣಿಗಳಿಗೆ ಸಿನಿಮಾ, ಓದಿನ ಆಸಕ್ತಿ ಇರಬೇಕು. ನಾನೂ ಪುಸ್ತಕಗಳನ್ನು ಓದುತ್ತೇನೆ. ಸಿನಿಮಾಗಳನ್ನೂ ನೋಡುತ್ತೇನೆ. ಹೆಚ್ಚಾಗಿ ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿನಿತ್ಯ ಸಿನಿಮಾ ನೋಡಿದ್ದೇನೆ. ಇವತ್ತೇ ಕೋತಿಗಳು ಸಾರ್ ಕೋತಿಗಳು ಸಿನಿಮಾ ನೋಡಿದ್ದೇನೆ. ಕ್ರಿಕೆಟ್, ಟೆನಿಸ್ ಮ್ಯಾಚ್‌ಗಳನ್ನೂ ನೋಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.