Thursday, 21st November 2024

Physical Abuse: ಮಂಗಳೂರು ರೈಲಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಬುತಾಹಿರ್‌ಗೆ 20 ವರ್ಷ ಜೈಲು

Physical abuse

ಮಂಗಳೂರು: ಮಂಗಳೂರು (Mangaluru news) ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಖಾಲಿ ಬೋಗಿಯಲ್ಲಿ ಬಾಲಕಿಯನ್ನು ಅತ್ಯಾಚಾರ (Physical Abuse) ಮಾಡಿದ ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮದ ಅಬುತಾಹಿರ್ ಅಲಿಯಾಸ್ ಶಾಝಿಲ್‌ ಎಂಬಾತನಿಗೆ ಮಂಗಳೂರಿನ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ (prison sentence) ಮತ್ತು ₹ 50 ಸಾವಿರ ದಂಡ ವಿಧಿಸಿದೆ.

ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಯುವಕನಿಗೆ ಐಪಿಸಿ ಸೆಕ್ಷನ್ 376(3) ಮತ್ತು ಪೊಕ್ಸೊ ಸೆಕ್ಷನ್ 4(2)ರ ಅಡಿ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ₹ 50 ಸಾವಿರ ದಂಡ
ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.

ಪ್ರಕರಣದ ವಿವರ:

ಫೋನ್‌ನಲ್ಲಿ ಯುವತಿಯ ಪರಿಚಯ ಮಾಡಿಕೊಂಡಿದ್ದ ಅಬುತಾಹಿರ್ ಬಾಲಕಿಯ ಸಂಪರ್ಕದಲ್ಲಿದ್ದ. ಆಕೆಯನ್ನು ಪ್ರೀತಿಸುವುದಾಗಿ ಮರಳು ಮಾಡಿದ್ದ. 2023ರ ಜೂನ್ 22ರಂದು ಮನೆಯಿಂದ ಶಾಲೆಗೆ ಹೊರಟಿದ್ದ ಬಾಲಕಿಯನ್ನು ದಾರಿಯಲ್ಲಿ ಭೇಟಿಯಾಗಿ ಪುಸಲಾಯಿಸಿ ಬಲವಂತದಿಂದ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಗೋವಾಕ್ಕೆ ಹೋಗೋಣ ಎಂದು ಆಕೆಯನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದ. ಅಲ್ಲಿ ಪ್ಲಾಟ್ ಫಾರ್ಮ್ ನಂ 3ರಲ್ಲಿ ನಿಂತಿದ್ದ ಮಂಗಳೂರು– ಮಡಗಾಂವ್ ರೈಲಿನ ಬೋಗಿಯೊಂದರ ಸೀಟಿನಲ್ಲಿ ರಾತ್ರಿ 11ರಿಂದ 12 ಗಂಟೆಯ ನಡುವೆ ಆತ್ಯಾಚಾರ ಮಾಡಿದ್ದ.

ಬಾಲಕಿ ಕಾಣೆಯಾದ ಬಗ್ಗೆ ಆಕೆಯ ತಾಯಿ ಪುಂಜಾಲಕಟ್ಟೆ ಠಾಣೆಗೆ ಅಂದೇ ದೂರು ನೀಡಿದ್ದರು. ಬಾಲಕಿಯು ರಾತ್ರಿ 12ರ ಸುಮಾರಿಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ತಾಯಿಗೆ ಕರೆಮಾಡಿ, ವಿಷಯ ತಿಳಿಸಿದ್ದಳು. ತಾಯಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ರೈಲು ನಿಲ್ದಾಣದಲ್ಲಿ ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು.

ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುಂಜಾಲಕಟ್ಟೆ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್‌ ಬಿ. ಮತ್ತು ನಾಗೇಶ್‌ ಕೆ. ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 17 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. 31 ದಾಖಲೆಗಳನ್ನು ಗುರುತಿಸಲಾಗಿತ್ತು. ಅಬುತಾಹೀರ್ ಅಪರಾಧ ಕೃತ್ಯ ನಡೆಸಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: Physical Abuse: ಪೈಶಾಚಿಕ ಕೃತ್ಯ; ಪಿಕ್‌ನಿಕ್‌ಗೆಂದು ಬಂದ ನವವಿವಾಹಿತೆಯ ಮೇಲೆ ಪತಿಯ ಎದುರೇ ಸಾಮೂಹಿಕ ಅತ್ಯಾಚಾರ