ಸಿಂಧನೂರು: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆದ ತಕ್ಷಣದಿಂದಲೇ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ನಗರದ ಬಿಜೆಪಿ ಮುಖಂಡ ಶೇಷಗಿರಿರಾವ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷದ ಚಿಹ್ನೆ ಇಲ್ಲದೆ ಇರುವುದರಿಂದ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಒಟ್ಟು 5808 ಗ್ರಾಮ ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡುತ್ತಾರೆ. ಈಗಾಗಲೇ 6 ತಂಡಗಳು ಮುಖಾಂತರ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮ ಆಯೋಜನೆ ಮಾಡು ತ್ತೇವೆ. ಗ್ರಾಮ ಸ್ವರಾಜ್ ಎಂಬ ಅಡಿಯಲ್ಲಿ ಕಾರ್ಯಕರ್ತರನ್ನು ಸಂಘಟಿಸುತ್ತೇವೆ ಹಾಗೂ ಇನ್ನುಳಿದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಹ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಬೇಕೆಂಬ ಗುರಿ ಇದೆ ಎಂದರು.
ಕಳೆದ ಉಪಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಮುಂಬರುವ ಉಪಚುನಾವಣೆಗಳಲ್ಲೂ ಸಹ ಪಕ್ಷದ ಎಲ್ಲಾ ಅಭ್ಯರ್ಥಿಗಳ ಜಯ ಸಾಧಿಸಿ ಬಿಜೆಪಿ ಪಕ್ಷ ಅಭಿವೃದ್ಧಿ ಪರ, ದೀನದಲಿತ, ಅಲ್ಪಸಂಖ್ಯಾತರ ಪರ ಎಂದು ತೋರಿಸು ತ್ತವೆ ಎಂದರು.
ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಅವರಿಗೆ ಸುಮ್ಮನೆ ಟೀಕೆ-ಟಿಪ್ಪಣಿಗಳು ಮಾಡುವುದು ಮಾತ್ರ ಗೊತ್ತು ಅವರಿಂದ 60 ವರ್ಷಗಳಲ್ಲಿ ತಮ್ಮ ಆಡಳಿತದಲ್ಲಿ ಯಾವ ಅಭಿವೃದ್ಧಿ ಆಗಿದೆ ಅನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಜನಪರವಾದ ಯೋಜನೆಗಳೆ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು ಈ ಸಂದರ್ಭದಲ್ಲಿ ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್ ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿ ರಾವ್ ಇದ್ದರು.