Friday, 22nd November 2024

Pralhad Joshi: ಪಿಎಂ ಕಿಸಾನ್ ಸಮ್ಮಾನ್; ರಾಜ್ಯದ 47.12 ಲಕ್ಷ ರೈತರಿಗೆ 942 ಕೋಟಿ ರೂ.

pralhad joshi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜಾರಿಗೊಳಿಸಿದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಂಜೀವಿನಿ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ 18ನೇ ಕಂತಿನ ನಿಧಿ (PM Kisan Samman Nidhi) ರೈತರ ಖಾತೆಗೆ ನೇರ ವರ್ಗಾವಣೆಯಾದ ಬಳಿಕ ಪ್ರತಿಕ್ರಿಯಿಸಿರುವ ಸಚಿವರು, ಈ ಯೋಜನೆ ರೈತರಿಗೆ ಉತ್ತೇಜನ ನೀಡಿದೆ ಎಂದಿದ್ದಾರೆ ಎಂದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 6000 ರೂ. ಧನಸಹಾಯ ನೀಡುವ ಮೂಲಕ ದೇಶದ 11 ಕೋಟಿ ರೈತರಿಗೆ ಸಂಜೀವಿನಿಯಾಗಿದೆ ಎಂದು ತಿಳಿಸಿರುವ ಅವರು, ಈ ಯೋಜನೆಯಿಂದಾಗಿ ದೇಶದಲ್ಲಿ ಕೃಷಿಗೆ ಅಪೂರ್ವ ಉತ್ತೇಜನ ದೊರಕಿದೆ. ರೈತರ ಸಾಲವನ್ನು ಕಡಿಮೆ ಮಾಡಿದೆ. ಅಲ್ಲದೇ, ಗ್ರಾಮೀಣ ಪ್ರದೇಶದ ಸಮುದಾಯಗಳನ್ನು ಸಶಕ್ತರನ್ನಾಗಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Jollywood: ಜಾಲಿವುಡ್ ಸ್ಟುಡಿಯೋ, ಅಡ್ವೆಂಚರ್ಸ್‌ಗೆ ಮೊದಲ ವಾರ್ಷಿಕೋತ್ಸವದ ಸಂಭ್ರಮ

ಕೃಷಿ ಸಮ್ಮಾನ್ ಯೋಜನೆ ಭಾರತದ ಕೃಷಿಕರನ್ನು ಮಾತ್ರವಲ್ಲ ದೇಶವನ್ನೇ ಸ್ವಾವಲಂಬಿ ಮಾಡುವತ್ತ ಒಂದು ಮಹತ್ತರ ಹೆಜ್ಜೆಯಾಗಿದೆ ಎಂದು ಜೋಶಿ ಹೇಳಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ 18ನೇ ಕಂತಿನಲ್ಲಿ ಒಟ್ಟು 9.4 ಕೋಟಿ ರೈತರಿಗೆ 20 ಸಾವಿರ ಕೋಟಿ ನೇರ ವರ್ಗಾವಣೆ ಮಾಡಲಾಗಿದೆ. ಕರ್ನಾಟಕದ 47.12 ಲಕ್ಷ ರೈತರು 942 ಕೋಟಿ ರು. ಪಡೆದಿದ್ದಾರೆ ಎಂದು ಸಚಿವ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Vadderse Raghurama Shetty: ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ

ಧಾರವಾಡದ 1.15 ಲಕ್ಷ ರೈತರಿಗೆ ಸಮ್ಮಾನ್ ನಿಧಿ

ಧಾರವಾಡ ಲೋಕಸಭಾ ಕ್ಷೇತ್ರದ 1.15 ಲಕ್ಷ ರೈತರು ಇದರ ಪ್ರಯೋಜನ ಪಡೆದಿದ್ದಾರೆ. 23.09 ಕೋಟಿ ರೂಪಾಯಿ ಧಾರವಾಡ ರೈತರ ಖಾತೆಗೆ ಜಮೆಯಾಗಿದ್ದು, ದಸರಾ ಹಬ್ಬದ ವೇಳೆ ರೈತರಲ್ಲಿ ಖುಷಿ ತಂದಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.