Sunday, 17th November 2024

Police Warning: ರೋಡ್‌ ರೋಮಿಯೋಗಳೇ ಹುಷಾರ್;‌ ಲಂಗ ದಾವನ್ಯಾಗ ಮಸ್ತ್ ಕಾಣತಿ,‌ ನಂಬರ್ ಕೊಡು ಅಂದ್ರೆ ಬೀಳುತ್ತೆ ಕೇಸ್!

ಹುಬ್ಬಳ್ಳಿ: ಅವಳಿ ನಗರದಲ್ಲಿ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಡ್‌ ರೋಮಿಯೋಗಳಿಗೆ ಬಿಸಿ ಮುಟ್ಟಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಇಲಾಖೆ ಮುಂದಾಗಿದೆ. ಯುವತಿಯರನ್ನು ಚುಡಾಯಿಸುವ, ಕಿರುಕುಳ ನೀಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ, ತಪ್ಪಿತಸ್ಥರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಗಡಿಪಾರು ಮಾಡುವುದಾಗಿ ಎಚ್ಚರಿಕೆ (Police Warning) ನೀಡಿದೆ.

ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ, ನಿನ್ನ ಫೋನ್ ನಂಬರ್ ಕೊಟ್ರ ಬರ್ತತಿ ಪುಣ್ಯ… ಅಂತ ಹಾಡು ಹೇಳಿ ಅದನ್ನು ಅಲ್ಲಿಗೆ ಬಿಡಬೇಕು. ಅದನ್ನ ಬಿಟ್ಟು ಏಣಾದರೂ ಹೆಣ್ಣುಮಕ್ಕಳನ್ನು ಚುಡಾಯಿಸುವುದಾಗಲಿ, ಕಿರುಕುಳ ನೀಡುವುದಾಗಲಿ ಮಾಡಿದ್ರೆ ಕೇಸ್, ರೌಡಿಶೀಟ್ ಹಾಕಿಸಿಕೊಂಡು ಹುಬ್ಬಳ್ಳಿ-ಧಾರವಾಡದಿಂದ ಸೀದಾ ಗಡಿಪಾರು ಆಗುತ್ತೀರಿ, ಹುಷಾರ್‌ ಎಂದು ಪೊಲೀಸ್‌ ಇಲಾಖೆ ಹೇಳಿದೆ.

ಇನ್ನು ಇತ್ತೀಚೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳನ್ನು ಚುಡಾಯಿಸಿದ್ದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಕುರಿತು ವಿಡಿಯೋಗಳು ಹರಿದಾಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಶುಭಂ, ಮೆಹಬೂಬ್ ಹಾಗೂ ಅವರಿಗೆ ಸಹಕರಿಸಿದ ಸಾಗರ್, ಸಚಿನ್, ಶ್ರೀವತ್ಸ ಸೇರಿ ಒಟ್ಟು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧಿತರಿಂದ ಒಟ್ಟು 6 ಮೊಬೈಲ್ ಫೋನ್ & ಕೃತ್ಯಕ್ಕೆ ಬಳಸಿದ್ದ 1 ಡಿಯೋ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಚುಡಾಯಿಸುವಂತಹ ಘಟನೆಗಳು ನಡೆದಲ್ಲಿ ಪೋಷಕರು ದೂರು ನೀಡಲು ಹಿಂಜರಿದರೆ ಪೊಲೀಸ್ ಇಲಾಖೆಯಿಂದಲೇ ಸು-ಮೋಟೋ (ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು. ಇಂತಹ ಘಟನೆಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಇಲಾಖೆ ಕೋರಿದೆ.

ಈ ಬಗ್ಗೆ ಹುಬ್ಬಳ್ಳಿ – ಧಾರವಾಡ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಪ್ರತಿಕ್ರಿಯಿಸಿ, ಮಹಿಳೆಯರು ಹಾಗೂ ಯುವತಿಯರನ್ನು ಚುಡಾಯಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಗರದಲ್ಲಿ ಯುವತಿಯರಿಗೆ ಕಿರುಕುಳ ನೀಡುವ ರೋಡ್‌ ರೋಮಿಯೋಗಳನ್ನು ಪಟ್ಟಿ ಮಾಡಲಾಗುತ್ತಿದೆ. ಚುಡಾಯಿಸಿ ತೊಂದರೆ ಕೊಡುವ ಯುವಕರ ಮೇಲೆ ರೌಡಿಶೀಟರ್ ತೆಗೆಯಲಾಗುವುದು. ಅಲ್ಲದೇ ಸ್ಟೇಷನ್‌ಗೆ ಕರೆಸಿ ವಾರ್ನ್ ಮಾಡುವುದು ಹಾಗೂ ಕಾನೂನು ರೀತಿಯ ಕ್ರಮಗಳನ್ನು ತಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಎಲ್ಲರ ಮನೆಯಲ್ಲೂ ಅಕ್ಕ – ತಂಗಿಯರು, ಮಹಿಳೆಯರು ಇರುತ್ತಾರೆ. ಯಾವುದೇ ಮಹಿಳೆ ಈ ರೀತಿ ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಈ ರೀತಿ ಯಾರಾದರೂ ಯುವತಿಯರನ್ನು ಚುಡಾಯಿಸುತ್ತಿರುವುದು ಕಂಡು ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ನಾವು ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿಚಾರದಲ್ಲಿ ಪೋಷಕರೇ ಬಂದು ದೂರು ನೀಡಬೇಕು ಎಂದೇನೂ ಇಲ್ಲ. ಯಾರಾದರೂ ಬಂದು ದೂರು ನೀಡಬಹುದು. ನಾವು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.