Tuesday, 12th November 2024

Pooja Gandhi: ಲಂಡನ್‌ನಲ್ಲಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಳೆ ಹುಡುಗಿ ಪೂಜಾ ಗಾಂಧಿ

Pooja Gandhi

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ. ಬಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ ದಂಪತಿ ಭಾಗಹಿಸಿದ್ದರು. ಇದೇ ವೇಳೆ ಅಲ್ಲಿನ ಕನ್ನಡ ಸಂಘಗಳು ಈ ಜೋಡಿಯನ್ನು ಸನ್ಮಾನಿಸಿದೆ.

ಲಂಡನ್‌ನಲ್ಲಿರುವ ಎರಡು ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಆಫ್‌ ದಿ ಯುನೈಟೆಡ್‌ ಕಿಂಗ್‌ಡಮ್‌ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಸಂದರ್ಭದಲ್ಲಿ, ಪೂಜಾ ಗಾಂಧಿ ಅವರು ಬಸವೇಶ್ವರರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. 12 ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ತನಗೆ ಬಸವಣ್ಣನವರ ಬಗ್ಗೆ ಅಪಾರ ಅಭಿಮಾನವಿದೆ ಮತ್ತು ಅವರ ಬೋಧನೆಗಳ ಸಮರ್ಪಿತ ಅನುಯಾಯಿ ಎಂದು ಪೂಜಾ ಗಾಂಧಿ ಹೇಳಿದರು.

2015ರ ನ. 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಭಗವಾನ್ ಬಸವೇಶ್ವರರ ಐತಿಹಾಸಿಕ ಪ್ರತಿಮೆಯು ಯುಕೆಯಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1854ರ UK ಶಾಸನಗಳ ಕಾಯಿದೆಯ ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್‌ನಿಂದ ಅನುಮೋದನೆಯನ್ನು ಪಡೆದ ಕೆಲವು ಪರಿಕಲ್ಪನಾ ಪ್ರತಿಮೆಗಳಲ್ಲಿ ಇದು ಕೂಡ ಒಂದಾಗಿದೆ. ಈ ಹಿಂದೆ, 2023ರ ಮಾರ್ಚ್ 5 ರಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಸವೇಶ್ವರ ದೇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.

ಇದನ್ನೂ ಓದಿ | Karnataka Rajyotsava Awards 2024: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ಸಾಧಕರ ಆಯ್ಕೆಗೆ ಸಮಿತಿ ರಚನೆ

ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಮತ್ತು ಯೂನೈಟೆಡ್‌ ಕಿಂಗ್‌ಡಮ್‌ ಕನ್ನಡಿಗರ ಸಂಘದ ಅಧ್ಯಕ್ಷ ಡಾ. ನೀರಜ್ ಪಾಟೀಲ್, ಗಣಪತಿ ಭಟ್, ಯುಕೆ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಅಭಿಜೀತ್ ಸಾಲಿಮಠ್, ಮಿರ್ಗಿ ರಂಗನಾಥ್ ಮತ್ತು ಶರಣ್ ಭೇಮಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.