Sunday, 27th October 2024

Pralhad Joshi: ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧ ಹೇರುವ ಧೈರ್ಯ ಕಾಂಗ್ರೆಸ್‌ ಸರ್ಕಾರಕ್ಕಿದೆ; ಪ್ರಲ್ಹಾದ್‌ ಜೋಶಿ ವಾಗ್ದಾಳಿ

prahlad joshi

ಬೆಂಗಳೂರು: ದೀಪಾವಳಿ ಹಬ್ಬ(Deepavali Festival)ದಲ್ಲಿ ರಾಜ್ಯ ಸರ್ಕಾರ ಪಟಾಕಿ ಸಿಡಿಸಲು ಹೇರಿದ ನಿರ್ಬಂಧಕ್ಕೆ ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ(Pralhad Joshi) ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರದವರು ಪುರುಷತ್ವ ತೋರುತ್ತಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೇ ನಮಾಜ್ ಶುರು ಮಾಡುತ್ತಾರೆ. ಇದಕ್ಕೆ ಸರ್ಕಾರದ ನೀತಿ, ನಿಯಮ ಏಕೆ ಅನ್ವಯಿಸಲ್ಲ? ಎಂದು ಪ್ರಶ್ನಿಸಿದರು. ಹಿಂದೂ ಹಬ್ಬಗಳಲ್ಲಿ ಮಾತ್ರ ಡಿಜೆ ಹಾಕಲು, ವಿಗ್ರಹ ವಿಸರ್ಜಿಸಲು, ಮೆರವಣಿಗೆ ನಡೆಸಲು, ಪಟಾಕಿ ಸಿಡಿಸಲು ಸಮಯ ನಿಗದಿ, ನೀತಿ, ನಿಯಮ ಹೇರುತ್ತದೆ ಸರ್ಕಾರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಾರೂ, ಯಾವ ಪಟಾಕಿ ಹೊಡೆಯುವುದನ್ನೂ ತಡೆಯಲು ಸಾಧ್ಯವಿಲ್ಲ. ಯಾರೇನೇ ಮಾಡಿದರೂ ಅದರ ಪಾಡಿಗೆ ಅದು ನಡೆಯುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.

ರಾಜ್ಯ ಸರ್ಕಾರದ ಆದೇಶ ಏನು?

ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಸಿಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹಲವು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ದೀಪಾವಳಿ ದಿನ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶವಿದ್ದು ರಾತ್ರಿ 8 ಗಂಟೆಯಿಂದ 10 ಗಂಟೆ ಒಳಗೆ ಮಾತ್ರ ಪಟಾಕಿ ಹೊಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್​ ಸಿಇಒಗಳ ಜತೆ ಗೃಹಕಚೇರಿ ಕೃಷ್ಣಾದಲ್ಲಿ ನಿನ್ನೆ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಪ್ರತಿವರ್ಷ ಪಟಾಕಿ ಸಿಡಿಸುವ ವೇಳೆ ಅವಘಡಗಳು ಸಂಭವಿಸುತ್ತದೆ. ಈ ಬಾರಿ ಪಟಾಕಿ‌ ಅವಘಡ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್​ ಸೂಚನೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಅವಕಾಶ ನೀಡಬಾರದು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಲೋಪ ಆಗಬಾರದು. ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ, ನಿಯಮ ಮೀರಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ: Deepavli 2024: ಪಟಾಕಿ ಪ್ರಿಯರೇ ಗಮನಿಸಿ, ಈ ಪಟಾಕಿಗಳ ಮಾರಾಟ, ಬಳಕೆ ನಿಷೇಧ