ಹುಬ್ಬಳ್ಳಿ: ರಾಜ್ಯದಲ್ಲಿ ಹತ್ತಿಪತ್ತು ಲಕ್ಷ ಬಿಪಿಎಲ್ (BPL Card) ಕಾರ್ಡ್ ರದ್ದುಪಡಿಸುವ ಮೂಲಕ ರಾಜ್ಯ ಸರ್ಕಾರ ಈಗ ಬಡವರ ಅನ್ನಕ್ಕೇ ಕಲ್ಲು ಹಾಕಲು ಹೊರಟಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲಾ ಅನ್ನ ಭಾಗ್ಯ ಎನ್ನುತ್ತಾ, ಹತ್ತು ಕೆಜಿ ಅಕ್ಕಿ…ಬೇಕಾ..ಬೇಡ್ವಾ..? ಎಂದು ಏರು ದನಿಯಲ್ಲಿ ಕೇಳುತ್ತಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಈಗೇನಾಗಿದೆ? ʼಅನ್ನ ಭಾಗ್ಯʼ ಕ್ಕೆ ಏಕೆ ಕಲ್ಲು ಹಾಕುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ಮಾಹಿತಿಯ ಪ್ರಕಾರ ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಜನರ ಕಾರ್ಡ್‌ಗಳಿಗೆ ಕೊಕ್ಕೆ ಹಾಕಿ ಬಿಪಿಎಲ್ ಫಲಾನುಭವಿಗಳನ್ನು ವಿವಿಧ ಯೋಜನೆ, ಸೌಲಭ್ಯಗಳಿಂದಲೇ ವಂಚಿತರನ್ನಾಗಿ ಮಾಡುತ್ತಿದೆ ರಾಜ್ಯ ಸರ್ಕಾರ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ಜಾತಿ ರಹಿತ ಸಮಾಜಕ್ಕೆ ಸುಭದ್ರ ಅಡಿಪಾಯ ಹಾಕಿದವರು ಕನಕದಾಸರು; ಪ್ರಲ್ಹಾದ್ ಜೋಶಿ
ಎಲ್ಲಿ ನುಡಿದಂತೆ ನಡೆದಿರಿ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ ಮುಂದೆ ಮಾತೆತ್ತಿದರೆ ʼನುಡಿದಂತೆ ನಡೆದಿದ್ದೇವೆʼ ಎನ್ನುತ್ತಾರೆ. ಇದೇನಾ ನುಡಿದಂತೆ ನಡೆಯುವುದು? ಎಂದು ಟೀಕಿಸಿದ್ದಾರೆ.
ಲಕ್ಷ ಲಕ್ಷ ಪಡಿತರ ಚೀಟಿ ರದ್ದು ಮಾಡುತ್ತಿರುವ ಉದ್ದೇಶವೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಲಕ್ಷ ಲಕ್ಷ ಪಡಿತರ ಚೀಟಿ ರದ್ದು ಮಾಡುತ್ತಿರುವ ಉದ್ದೇಶವೇನು? ಎಂದು ಪ್ರಶ್ನಿಸಿರುವ ಕೇಂದ್ರ ಆಹಾರ ಸಚಿವರು, ಬಡ ಜನರ ಅನ್ನಕ್ಕೆ ಕಲ್ಲು ಹಾಕಿದರೆ ಅವರ ಶಾಪ ತಟ್ಟದೇ ಇರದು ಎಂದು ಎಚ್ಚರಿಸಿದ್ದಾರೆ.
ಕೇಂದ್ರದ ಅಕ್ಕಿಗೂ ಕನ್ನವೇ
ಬಡ ಜನರ ಹಸಿವು ನೀಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್ ಪಡಿತರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಪೂರೈಸುತ್ತಿದೆ. ಹಾಗಿದ್ದರೂ ಬಿಪಿಎಲ್ ಕಾರ್ಡ್ ರದ್ದುಪಡಿಸೋ ಮೂಲಕ ಇದಕ್ಕೇಕೆ ಕೊಕ್ಕೆ ಹಾಕುತ್ತಿದ್ಧೀರಿ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru News: ವರ್ಲ್ಡ್ ಪ್ರೀಮೆಚುರಿಟಿ ಡೇ 2024; ಮೆಡಿಕವರ್ ಆಸ್ಪತ್ರೆಯಲ್ಲಿ ಅವಧಿಪೂರ್ವ ಜನಿಸಿದ ಮಕ್ಕಳ ಕಲರವ
ಒಂದೊಂದೇ ಗ್ಯಾರೆಂಟಿಗಳಿಗೆ ಕೊಕ್ಕೆ
ಚುನಾವಣೆ ಗೆಲ್ಲುವ ಭರದಲ್ಲಿ ಯಾವುದೇ ದೂರದೃಷ್ಟಿ ಇಲ್ಲದೆ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಈಗ ಅದನ್ನು ಪೂರೈಸಲಾಗದೆ ಒಂದೊಂದಕ್ಕೇ ಕೊಕ್ಕೆ ಹಾಕುತ್ತಿದ್ದೀರಿ. ಇದು ಸರಿಯಲ್ಲ ಎಂದು ತಿಳಿಸಿರುವ ಅವರು, ರಾಜ್ಯದ ಬೊಕ್ಕಸವನ್ನು ಬರಿದಾಗಿಸಿ ಈಗ ನೇರವಾಗಿ ಬಡ ಜನರ ಅನ್ನಕ್ಕೂ ಕಲ್ಲು ಹಾಕಲು ಹೊರಟಿದ್ದೀರಿ. ರಾಜ್ಯದ ಜನತೆಯ ಜೀವನದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವಾಯಿತೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಎಕ್ಸ್ ಖಾತೆ ಮುಖೇನ ಪ್ರಶ್ನಿಸಿದ್ದಾರೆ.