ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರಿಗೆ ಯಾರು 100 ಕೋಟಿ ಆಫರ್ ಕೊಟ್ಟಿದ್ದಾರೆ? ದಾಖಲೆ ಬಿಡುಗಡೆ ಮಾಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಬರೀ ಬಾಯಿ ಮಾತಿನಲ್ಲಿ ಹೇಳಬೇಡಿ. ಯಾವ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದಾರೆ? ಎಂಬ ಬಗ್ಗೆ ಮೊದಲು ದಾಖಲೆ ನೀಡಿ ನೋಡೋಣ ಎಂದು ಸವಾಲೆಸೆದರು.
100 ಕೋಟಿ ಇರಲಿ, 500 ಕೋಟಿ ಆಫರ್ ಇರಲಿ ದಾಖಲೆ ಇದ್ದರೆ ಬಿಡುಗಡೆ ಮಾಡಿ. ನಿಮ್ಮನ್ನು ಯಾರೂ ತಡೆದಿಲ್ಲ. ಶಾಸಕ ರವಿ ಗಾಣಿಗ ಅವತ್ತಿನಿಂದ ಹೇಳುತ್ತಿದ್ದಾರೆ ಆದರೆ ಇನ್ನೂ ಏಕೆ ದಾಖಲೆ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | Narendra Modi: ಬ್ರೆಜಿಲ್ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಮಂತ್ರಗಳ ಸ್ವಾಗತ
ಕ್ರಮ ಕೈಗೊಳ್ಳಲಿದೆ ಕೇಂದ್ರ ಸರ್ಕಾರ
ಕಾಂಗ್ರೆಸ್ ಶಾಸಕರಿಗೆ ಯಾರೂ 50 ಕೋಟಿ, 100 ಕೋಟಿ, 500 ಕೋಟಿ ಆಫರ್ ಎಂದೆಲ್ಲ ಮಾತನಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಿದೆ ಭಾರತ ಸರ್ಕಾರ ಎಂದು ಜೋಶಿ ಸ್ಪಷ್ಟಪಡಿಸಿದರು. ಹಿಂದೆ ಬಿಜೆಪಿ ಸರ್ಕಾರ ರಚಿಸುವಾಗ ಇದೇ ಸಿದ್ದರಾಮಯ್ಯ ಅವರೇ ತಮ್ಮ ಆಪ್ತ ಶಾಸಕರನ್ನು ಬಿಜೆಪಿಗೆ ಕಳಿಸಿದ್ದರು ಎಂದು ಜೋಶಿ ಇದೇ ವೇಳೆ ಬಹಿರಂಗಪಡಿಸಿದರು. ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಜತೆ ಸರ್ಕಾರ ರಚನೆ ಇಷ್ಟವಿರಲಿಲ್ಲ. ಹಾಗಾಗಿ ತಾವೇ ಮುಂದೆ ನಿಂತು ಕೆಲ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳಿಸಿದ್ದರು ಎಂದು ಅವರು ಆರೋಪಿಸಿದರು.
ಕಳೆದ ಬಾರಿ ಅಪರೇಷನ್ ಕಮಲ ನಡೆಸಲು ಕಾರಣ ರಾಜ್ಯದಲ್ಲಿ ಅತಂತ್ರ ಸ್ಥಿತಿಯತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಜನ ಕಾಂಗ್ರೆಸ್ಗೆ ಬಹುಮತದ ಅಧಿಕಾರ ಕೊಟ್ಟಿದ್ದಾರೆ. ಹಾಗಿದ್ದಾಗ ನಾವೇಕೆ ಮೂಗು ತೂರಿಸೋಣ? ಎಂದು ಹೇಳಿದರು.
5 ವರ್ಷ ವಿಪಕ್ಷದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿಲುವು
ರಾಜ್ಯದಲ್ಲಿ 5 ವರ್ಷ ವಿರೋಧ ಪಕ್ಷ ಸ್ಥಾನದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿಲುವು ತೋರಿದೆ. ವಿಪಕ್ಷದಲ್ಲಿದ್ದು ಜನಪರವಾಗಿ ರಚನಾತ್ಮಕ ಕಾರ್ಯ ಕೈಗೊಳ್ಳುವಂತೆ ನಮ್ಮ ಹೈಕಮಾಂಡ್ ಸಹ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಆಪರೇಷನ್ ಕಮಲ ಇಲ್ಲ; ಕಾಂಗ್ರೆಸ್ ಷಡ್ಯಂತ್ರ ಇದೆಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ನಾವು ಉರುಳಿಸುವುದೂ ಇಲ್ಲ. ಮತ್ತೆ ಆಪರೇಷನ್ ಕಮಲ ನಡೆಸುವುದೂ ಇಲ್ಲ. ಕಾಂಗ್ರೆಸ್ನವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಮಾಡುತ್ತಿರುವ ಷಡ್ಯಂತ್ರ ಇದೆಲ್ಲ ಎಂದು ಆರೋಪಿಸಿದರು. ಹಗರಣಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಅದರಂತೆ ಲೋಕಾಯುಕ್ತ ವಿಚಾರಣೆ ನಡೆದಿದೆ. ಇದೆಲ್ಲಾ ಡೈವರ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | Kailash Gahlot: ಆಪ್ ತೊರೆದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ
ಸಿಎಂ ಸಿದ್ದರಾಮಯ್ಯ ವಿರುದ್ಧದ ತನಿಖೆ ಆದೇಶಕ್ಕೆ ಕೋರ್ಟ್ನಿಂದ ತಡೆಯಜ್ಞೆ ಸಿಕ್ಕಿಲ್ಲ. ನಿಮ್ಮ ವಿರುದ್ಧವೇ ಕೋರ್ಟ್ ಕೇಸ್ ಇದೆ. ಅಂಥದ್ದರಲ್ಲಿ ಮತ್ತೊಬ್ಬರ ಬಗ್ಗೆ ಮಾತನಾಡುತ್ತೀರಿ. ಮೊದಲು ನೀವು ಶುದ್ಧರಾಗಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ಕೊಟ್ಟರು.