Saturday, 26th October 2024

Bus Ticket Price Hike: ಹಬ್ಬಕ್ಕೆ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸಿದರೆ ಲೈಸೆನ್ಸ್ ರದ್ದು!

private bus

ಬೆಂಗಳೂರು: ದೀಪಾವಳಿ (Deepavali 2024) ಹಬ್ಬ ಸಮೀಪಿಸುತ್ತಿದೆ. ಹಬ್ಬಕ್ಕೆ ಬೆಂಗಳೂರಿನಿಂದ (Bengaluru news) ಊರಿಗೆ ತೆರಳುವವರು ಹಾಗೂ ನಂತರ ಮರಳುವವರ ಸಂಖ್ಯೆಯಲ್ಲಿ ಅಗಾಧ ಏರಿಕೆಯಾಗಲಿದೆ. ಇದೇ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಮೂರು ಪಟ್ಟು, ನಾಲ್ಕು ಪಟ್ಟು (Bus Ticket Price Hike) ಏರಿಸುತ್ತಿವೆ. ಇನ್ನು ಇದಕ್ಕೆ ಕಡಿವಾಣ ಬೀಳಲಿದೆ.

ದೀಪಾವಳಿ ಹಬ್ಬದ ಒಂದು ವಾರ ಮೊದಲು ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ, ಹೀಗೆ ಮಿತಿ ಮೀರಿ ದರ ಹೆಚ್ಚಿಸುವ ಖಾಸಗಿ ಬಸ್ಸುಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬಸ್ಸಿನ ಲೈಸೆನ್ಸ್ ಕೂಡ ರದ್ದುಗೊಳಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪತ್ರಿಕಾ ಸಾರಿಗೆ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣದ ದರವನ್ನು ಹೆಚ್ಚಿಸುವಂತಿಲ್ಲ. ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ಸುಗಳ ಬುಕ್ಕಿಂಗ್ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಖಾಸಗಿ ಬಸ್ ನಿಲ್ದಾಣಗಳಲ್ಲೂ ಸಾರಿಗೆ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.

ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದರೆ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಖಾಸಗಿ ಬಸ್ ರಹದಾರಿ ಸೇರಿದಂತೆ ಲೈಸೆನ್ಸ್ ಕೂಡ ರದ್ದುಪಡಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದೆ. ರಾಜ್ಯದ ಜನರು ಖಾಸಗಿ ಬಸ್ ಗಳು ದುಬಾರಿ ಪ್ರಯಾಣ ದರವನ್ನು ವಸೂಲಿ ಮಾಡುತ್ತಿದ್ದರೆ ಸಾರಿಗೆ ಇಲಾಖೆಯ ಸಹಾಯವಾಣಿ ಸಂಖ್ಯೆ 9449863429, 9449863426 ಗೆ ಕರೆ ಮಾಡಿ ದೂರು ನೀಡುವಂತೆ ಮನವಿ ಮಾಡಿದೆ.

ಇದನ್ನೂ ಓದಿ: Bus Service: ಬಸ್ ಸಂಚಾರ ಆರಂಭ