Wednesday, 11th December 2024

Producer K Manju: ಎದೆ ನೋವು ಹಿನ್ನೆಲೆ ಹಿರಿಯ ನಿರ್ಮಾಪಕ ಕೆ.ಮಂಜು ಆಸ್ಪತ್ರೆಗೆ ದಾಖಲು

Producer K Manju

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಮಂಜು ಅವರು ಅನಾರೋಗ್ಯರಿಂದ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದ ಕೆ.ಮಂಜು (Producer K Manju) ಅವರಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಇದೀಗ ಮತ್ತೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ನಿರ್ಮಾಪಕ ಕೆ.ಮಂಜು ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚಿತ್ರದಲ್ಲಿ ಅವರಿಗೆ ಇಸಿಜಿ ಪರೀಕ್ಷೆ ನಡೆಸುತ್ತಿರುವುದು ತಿಳಿಯುತ್ತದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ಕೆ.ಮಂಜು ಅವರು, ನನಗೆ ಯಾವುದೇ ಅನಾರೋಗ್ಯ ಇಲ್ಲ. ಇತ್ತೀಚೆಗೆ ಕೆಲಸ ತುಸು ಹೆಚ್ಚಾಗಿ ಒತ್ತಡ ಉಂಟಾಗಿತ್ತು, ಹಾಗಾಗಿ ವೈದ್ಯರ ಸಲಹೆ ಮೇರೆಗೆ ಜನರಲ್ ಬಾಡಿ ಚೆಕಪ್ ಮಾಡಿಸಿದ್ದೇನೆ. ಅಲ್ಲದೆ ಹಿಂದೆ ಆಪರೇಷನ್ ಆಗಿತ್ತು, ಅದರ ನೋವು ಸಣ್ಣಗೆ ಕಾಣಿಸಿಕೊಂಡಿತ್ತು ಹಾಗಾಗಿ ಇಸಿಜಿ ಇನ್ನಿತರೆ ಪರೀಕ್ಷೆಗಳನ್ನು ಮಾಡಿಸಿದ್ದು, ಯಾವುದೇ ಸಮಸ್ಯೆ ಇಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಕೆ.ಮಂಜು ಅವರ ಪುತ್ರ ಮಗ ಶ್ರೇಯಸ್ ಮಂಜು ಪ್ರತಿಕ್ರಿಯಿಸಿ, ಇಂದು ಸಂಜೆ ದಿಢೀರನೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ‌ ತಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಆಗಿದ್ದು, ವೈದ್ಯರು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Self Harming: ಹೆಂಗಸಿನಂತೆ ಡ್ರೆಸ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಉದ್ಯೋಗಿ!

ಕೆ ಮಂಜು ಅವರು ಕನ್ನಡದ ಜನಪ್ರಿಯ ಸಿನಿಮಾ ನಿರ್ಮಾಪಕರಾಗಿದ್ದು, ಚಂದನವನದಲ್ಲಿ ಹಲವಾರು ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಯಮಲೋಕದಲ್ಲಿ ವೀರಪ್ಪನ್’, ಸುದೀಪ್ ನಟನೆಯ ‘ವಾಲಿ’, ವಿಷ್ಣುವರ್ಧನ್ ನಟನೆಯ ‘ಜಮೀನ್ದಾರ್ರು’, ‘ಹೃದಯವಂತ’, ‘ಮಾತಾಡ್ ಮಾತಾಡ್ ಮಲ್ಲಿಗೆ’, ‘ಬಳ್ಳಾರಿ ನಾಗ’, ‘ಲಂಕೇಶ್ ಪತ್ರಿಕೆ’, ‘ಅರಮನೆ’, ‘ಕಿಚ್ಚ-ಹುಚ್ಚ’, ‘ರಾಮ ಶಾಮ ಭಾಮ’, ‘ರಾಜಾ ಹುಲಿ’, ‘ಸಂತು ಸ್ಟ್ರೈಟ್ ಫಾರ್ವರ್ಡ್’, ‘ಜಿಗರ್​ಥಂಡ’ ಇನ್ನೂ ಹಲವಾರು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಕೆ. ಮಂಜು ಪುತ್ರ ಶ್ರೇಯಸ್ ಮಂಜು ಸಹ ನಾಯಕನಾಗಿ ನಟಿಸುತ್ತಿದ್ದಾರೆ.