Saturday, 14th December 2024

ಮನಸ್ಸಾಕ್ಷಿಗೆ ಅನುಗುಣವಾಗಿ ಕಾರ್ಯಕ್ರಮ ರದ್ದು ಮಾಡಿದ್ದೀನಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಜೆಪಿಯ ದೊಡ್ಡಬಳ್ಳಾಪುರದ ಜನೋತ್ಸವ (ಸಾಧನಾ ಸಮಾವೇಶ) ಮತ್ತು ಎಲ್ಲಾ ಸರ್ಕಾರಿ ಕಾರ್ಯಕ್ರಮವನ್ನು ರದ್ದು ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿಜೆಪಿಯ ಕಾರ್ಯಕರ್ತ ಹಾಗೂ ಹಿಂದೂ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಬರ್ಬರ, ಕೊಲೆಯ ಹಿನ್ನೆಲೆಯಲ್ಲಿ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ  ತಡರಾತ್ರಿ ತುರ್ತು ಸುದ್ದಿ ಗೋಷ್ಠಿ ನಡೆಸಿ ವಿಷಯ ತಿಳಿಸಿದ್ದಾರೆ.

“ನನ್ನ ಸರ್ಕಾರಕ್ಕೆ 1 ವರ್ಷ ಯಡಿಯೂರಪ್ಪ ಸರ್ಕಾರಕ್ಕೆ 3 ವರ್ಷ ತುಂಬುತ್ತಿದೆ. ಜನಪರ ವಾಗಿ ಮಾಡಿರುವ ಕೆಲಸಕ್ಕೆ ಜನೋತ್ಸವ ಮಾಡ್ತಿದ್ದೇವೆ. ರಾಜ್ಯಾಧ್ಯಕ್ಷರ ಕಾರ್ಯ ಅತ್ಯಂತ ಶ್ಲಾಘನೀಯ.

ಮನಸ್ಸಿಗೆ ಶಾಂತಿ ಇರಲಿಲ್ಲ, ಕುಟುಂಬಸ್ಥರ ಆಕ್ರಂದನ ನೋಡಿ ನೋವಾಗಿದೆ. ಜನೋ ತ್ಸವ ಕಾರ್ಯಕ್ರಮ ರದ್ದು ಮಾಡುವ ತೀರ್ಮಾನ ಕೈಗೊಂಡೆ, ಭರವಸೆಯ ಬದುಕನ್ನ ಜನ ಬದುಕಬೇಕು. ಜನರಿಗಾಗಿ ಜನೋತ್ಸವ ಮಾಡ್ತಿದ್ದೇವೆ. ದೊಡ್ಡಬಳ್ಳಾಪುರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇನೆ,” ಎಂದು ಹೇಳಿದರು.

ಇಂದಿನ ವಿಧಾನಸೌಧದ ಸರ್ಕಾರಿ ಕಾರ್ಯಕ್ರಮ ಕೂಡ ರದ್ದು ಮಾಡಿದ್ದೇನೆ. ವಿಧಾನಸಭೆಯಲ್ಲಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಎಲ್ಲಾ ಸರ್ಕಾರಿ ಕಾರ್ಯಕ್ರಮ ಇರುವುದಿಲ್ಲ. ಎಸ್ಸಿ ಮತ್ತು ಎಸ್ಟಿ ಸೇರಿದಂತೆ ಅಭಿವೃದ್ದಿ ಕಾರ್ಯಕ್ರಮ ನಿಲ್ಲಬಾ ರದು ಎಂಬ ಕಾರಣಕ್ಕೆ ಪ್ರಕಟಣೆ ಮೂಲಕ ಯೋಜನೆ ಘೋಷಿಸುತ್ತೇನೆ. ಮನಸ್ಸಾಕ್ಷಿಗೆ ಅನುಗುಣವಾಗಿ ಕಾರ್ಯಕ್ರಮ ರದ್ದು ಮಾಡಿದ್ದೀನಿ ಎಂದು ಸ್ಪಷ್ಟಪಡಿಸಿದರು.

ತಡ ರಾತ್ರಿ ನಡೆದ ಸುದ್ದಿಗೋಷ್ಠಿಯ ವೇಳೆ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಸಚಿವ ಸುಧಾಕರ್ ಉಪಸ್ಥಿತರಿದ್ದರು.

ಪ್ರವೀಣ್ ಹತ್ಯೆಯನ್ನು ಖಂಡಿಸಿ ಮಂಗಳೂರು ಭಾಗದಲ್ಲಿ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಾಂತ್ವಾನ ಹೇಳಲು ಹೋದ ಸಮಯದಲ್ಲಿ ಅವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಮಂಗಳೂರು ಭಾಗದ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಯನ್ನು ನೀಡಿದರು. ಈ ಎಲ್ಲಾ ಅಂಶಗಳನ್ನು ಗಮನಿಸಿ ತಮ್ಮ ಪಕ್ಷದ ಗಟ್ಟಿ ಬೇರುಳ್ಳ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದಾಗಿ ಸರ್ಕಾರ ತನ್ನ ಎಲ್ಲಾ ಕಾರ್ಯಕ್ರಮವನ್ನು ರದ್ದು ಮಾಡಿದೆ.