ಬೆಂಗಳೂರು: ರಾಜಧಾನಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮಹತ್ವ ನಿರ್ಧಾರ ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಅನುಮೋದನೆಗೊಳ್ಳದ ಬಡಾವಣೆಗಳಲ್ಲಿನ ಸಿಂಗಲ್ ಸೈಟ್ ಗಳಿಗೆ ‘ಎ’ ಅಥವಾ ‘ಬಿ’ ಖಾತೆ (ಏಕ ನಿವೇಶನ ಸ್ವತ್ತು) ನೀಡುವ ಪದ್ಧತಿಯನ್ನು (Property Registration) ಸ್ಥಗಿತಗೊಳಿಸಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.
ಒಂದು ವೇಳೆ ಕೃಷಿಯೇತರ ಚಟುವಟಿಕೆಗಳಿಗಾಗಿ ಭೂಪರಿವರ್ತನೆ ಮಾಡಲಾಗಿದ್ದರೂ ಆ ಭೂಮಿಯಲ್ಲಿರುವ ಯಾವುದೇ ಸಿಂಗಲ್ ಸೈಟ್‌ಗೆ ಎ ಖಾತೆ ಅಥವಾ ಬಿ ಖಾತೆಯನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಒಂದು ಅನುಕೂಲವೇನೆಂದರೆ, ಇದೇ ವರ್ಷ ಸೆ. 30ಕ್ಕೂ ಮುನ್ನ ನೋಂದಾವಣಿಯಾದ ಸೈಟುಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ ಪತ್ರವೊಂದನ್ನು ಬರೆದು ಅದರಲ್ಲಿ ತನ್ನಿಂದ ಅನುಮೋದನೆ ಪಡೆದ ಬಡಾವಣೆಗಳಿಗಷ್ಟೇ ಖಾತೆಗಳನ್ನು ನೀಡಬೇಕಾಗಿ ಸೂಚಿಸಿತ್ತು. ಅದರಂತೆ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.
ಬಿಡಿಎ, ಬಿಬಿಎಂಪಿಗೆ ಬರೆದ ಪತ್ರದಲ್ಲಿ 20 ಸಾವಿರ ಚದರ ಮೀಟರ್‌ವರೆಗಿನ ವಿಸ್ತೀರ್ಣದ ಯಾವುದೇ ಭೂಮಿಯು ಕೃಷಿಯೇತರ ಚಟುವಟಿಕೆಗಾಗಿ ಪರಿವರ್ತನೆಗೊಂಡರೆ ಅದಕ್ಕೆ ಬಡಾವಣೆ ನಿರ್ಮಿಸುವ ಬಗ್ಗೆ ತನ್ನ (ಬಿಡಿಎ) ಅನುಮತಿ ಕೊಡುವ ಅಧಿಕಾರ ತನಗೇ ಇರುತ್ತದೆ. ಅಲ್ಲದೆ, ಬಡಾವಣೆಗಾಗಿ ಅನುಮತಿ ಪಡೆಯವುದು ಕಡ್ಡಾಯವಾಗಿರುತ್ತದೆ. ತಾನೇ ಅಭಿವೃದ್ಧಿಪಡಿಸಿದ ಬಡಾವಣೆಗಳು, ತಮ್ಮಿಂದ ಅನುಮೋದನೆ ಪಡೆದು ಅಭಿವೃದ್ಧಿಯಾದ ಖಾಸಗಿ ಬಡಾವಣೆಗಳು ಅಥವಾ ಬಿಡಿಎ ವತಿಯಿಂದ ‘ಎ’ ಖಾತಾ ಎಂದು ವರ್ಗೀಕರಿಸಲಾಗಿರುವ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಡಾವಣೆಗಳಲ್ಲಿನ ಸೈಟುಗಳಿಗೆ ಮಾತ್ರ ಆಯಾ ದಾಖಲೆಗಳಿಗೆ ಅನುಗುಣವಾಗಿ ಎ ಖಾತಾ ಅಥವಾ ಬಿ ಖಾತೆಗಳನ್ನು ನೀಡಬೇಕು. ಆದರೆ, 2024ರ ಸೆ. 30ರ ನಂತರ, ತನ್ನಿಂದ ಅನುಮೋದನೆ ಪಡೆಯದ ಯಾವುದೇ ಸೈಟುಗಳಿಗೆ ಎ ಅಥವಾ ಬಿ ಖಾತೆಯನ್ನು ನೀಡಕೂಡದು ಎಂದು ಪತ್ರದಲ್ಲಿ ಬಿಡಿಎ ಮನವಿ ಮಾಡಿದೆ.
ಯಾರಿಗೆ ಅನುಮೋದನೆ ಸಿಗಲಿದೆ?
ಖಾಸಗಿ ಬಡಾವಣೆಗಳು ಸುತ್ತಮುತ್ತಲಿನ ಜನಜೀವನಕ್ಕೆ ಅನುಕೂಲವಾಗುವಂತಹ ರೀತಿಯಲ್ಲಿ ಅಭಿವೃದ್ಧಿಯಾಗಿರಬೇಕು. ವಿಶಾಲವಾದ ರಸ್ತೆಗಳು, ಸಾರ್ವಜನಿಕರ ಉಪಯೋಗಕ್ಕಾಗಿ ವಿಶಾಲವಾದ ಜಾಗ, ಪಾರ್ಕ್‌ಗಳು, ನಾಗರಿಕ ಸೌಲಭ್ಯ ಹೊಂದಿರಬೇಕು. ಖಾಸಗಿ ಬಡಾವಣೆಗಳನ್ನು ನಿರ್ಮಿಸುವವರು ಕಡ್ಡಾಯವಾಗಿ ಈ ನಿಯಮಗಳನ್ನು ಮಾಡಿದರೆ ಮಾತ್ರ ಬಿಡಿಎ ಅನುಮೋದನೆ ಸಿಗುತ್ತದೆ.
ಈ ಸುದ್ದಿಯನ್ನೂ ಓದಿ | Namma Metro: ನಾಗಸಂದ್ರ – ಮಾದಾವರ ನಮ್ಮ ಮೆಟ್ರೋ ಹಸಿರು ಮಾರ್ಗ ಇಂದು ಸಂಚಾರಕ್ಕೆ ಮುಕ್ತ?
ಮುಡಾ ಹೆಸರಲ್ಲಿ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ; ಸಿದ್ದರಾಮಯ್ಯ ಬೇಸರ
ಮೈಸೂರು: ಮುಡಾಕ್ಕೆ (MUDA) ಸಂಬಂಧಿಸಿದಂತೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಲೋಕಾಯುಕ್ತ (Lokayukta) ವಿಚಾರಣೆಯಲ್ಲಿ ಸತ್ಯವನ್ನು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಮೈಸೂರಿನಲ್ಲಿ (Mysuru) ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳು ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಲೋಕಾಯುಕ್ತ ವಿಚಾರಣೆಗೆ ಇಂದು ಹಾಜರಾಗಿದ್ದು, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದೇನೆ ಎಂದು ಹೇಳಿದರು.
ಬಿಜೆಪಿಯವರು ಗೋಬ್ಯಾಕ್ ಸಿಎಂ ಎಂಬ ಪ್ರತಿಭಟನೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ನೇಹಮಯಿ ಕೃಷ್ಣ ಅವರು ಕೋರಿದಂತೆ, ರಾಜ್ಯಪಾಲರ ಆದೇಶದಂತೆ ಲೋಕಾಯುಕ್ತ ವಿಚಾರಣೆಯನ್ನು ನಡೆಸಲಾಗಿದೆ. ಬಿಜೆಪಿಯವರು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಇದರಿಂದ ಈ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು. ವಿಚಾರಣೆ ನಡೆಸುವ ಲೋಕಾಯುಕ್ತ ನಂಬಿಕೆಯಿಲ್ಲ, ತನಿಖೆಯನ್ನು ಸಿಬಿಐ ನವರು ನಡೆಸಬೇಕೆಂಬ ಬಿಜೆಪಿಯವರ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐ ಗೆ ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | KPSC Jobs: ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ
ಸಿಬಿಐ ಯಂತೆ, ಲೋಕಾಯುಕ್ತ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತದ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಬಿಜೆಪಿಯವರು ಯಾವುದೇ ಪ್ರಕರಣವನ್ನು ಇದುವರೆಗೆ ಸಿಬಿಐ ಗೆ ನೀಡಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆ ಎಂದರು.
ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರ
ಮುಡಾದಿಂದ ಹಂಚಿಕೆಯಾದ 14 ನಿವೇಶನಗಳು ಕಾನೂನುಬದ್ಧವಾಗಿತ್ತೇ, ಅವುಗಳನ್ನು ವಾಪಸ್ಸು ನೀಡಲಾಯಿತೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಿವೇಶನ ಹಂಚಿಕೆ ಕಾನೂನೂ ಬದ್ಧವಾಗಿಯೇ ಆಗಿದೆ. ಬಿಜೆಪಿ, ಜೆಡಿಎಸ್‌ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರವನ್ನು ನೀಡಿದ್ದು, ತನಿಖೆಯನ್ನು ಕಾನೂನುರೀತ್ಯ ಮುಂದುವರಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ; ಚಾರ್ಜಿಂಗ್ ಸ್ಟೇಷನ್‌ನಲ್ಲಿ ರಾಜ್ಯ ನಂ.1
ನನ್ನ ಮೇಲೆ ಬಂದ ಸುಳ್ಳು ಆರೋಪಗಳ ಮಾಡಲಾಗಿದ್ದರಿಂದ ನನ್ನ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿದರೆ ಹೊರತು, ತಪ್ಪು ಮಾಡಿದ್ದಕ್ಕಾಗಿ ನಿವೇಶನಗಳನ್ನು ವಾಪಸ್ಸು ನೀಡಲಾಗಿಲ್ಲ. ಈ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನನ್ನ ಬಳಿಯಿಲ್ಲ ಹಾಗೂ ನನ್ನಿಂದ ಯಾವುದೇ ದಾಖಲೆ ಕೇಳಲಾಗಿಲ್ಲ. ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ನನ್ನ ರಾಜಕೀಯ ಜೀವನಕ್ಕೆ ಯಾವುದೇ ಕಪ್ಪು ಮಸಿ ಇಲ್ಲ. ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.