ಬೆಂಗಳೂರು: ಇನ್ನು ಸರ್ಕಾರಿ ರಜಾ ದಿನಗಳಲ್ಲಿಯೂ ಆಸ್ತಿ ನೋಂದಣಿ (Property Registration) ಮಾಡುವ ಸೇವೆ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಅ.21ರಿಂದ ಶನಿವಾರ ಮತ್ತು ಭಾನುವಾರ ನಿರ್ದಿಷ್ಟ ಉಪ ನೋಂದಣಾಧಿಕಾರಿ (Sub Registrar Office) ಕಚೇರಿಗಳಲ್ಲಿ ಸೇವೆ ಲಭ್ಯವಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Revenue Minister Krishna Byre Gowda) ತಿಳಿಸಿದ್ದಾರೆ.
ಪ್ರತಿ ನೋಂದಣಿ ಜಿಲ್ಲೆಗೂ ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಸೇವೆ ಇರಲಿದೆ. ಸುಗಮ ಆಡಳಿತ ಹಾಗೂ ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರಿಗೆ ಸುಲಭವಾಗಲಿ ಎಂಬ ಉದ್ದೇಶದಿಂದ ಮುಂದಿನ ತಿಂಗಳು 21ರಿಂದ ಉಪನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿ ನೋಂದಣಿ ಜಿಲ್ಲೆಯಲ್ಲಿ ಐದಾರು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಒಂದು ಕಚೇರಿ ಮಾತ್ರ ರಜೆ ದಿನದಲ್ಲಿ ಕಾರ್ಯನಿರ್ವಹಿಸಲಿದೆ. ರಜೆ ದಿನದಲ್ಲಿ ಕೆಲಸ ಮಾಡುವ ಕಚೇರಿಗೆ ಮಂಗಳವಾರದ ರಜೆ ನೀಡಲಾಗುತ್ತದೆ. ಯಾವ ನೋಂದಣಿ ಕಚೇರಿ ರಜೆ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬುದರ ಕುರಿತು ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುವುದು. ನೋಂದಣಿಯಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡಲಾಗುವುದು.
ವಾರದ ದಿನಗಳಲ್ಲಿ ದುಡಿಯುವ ವರ್ಗದ ಜನ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗೆ ಬರುವುದು ಕಷ್ಟವಾಗುತ್ತಿದೆ. ಇದನ್ನು ಗಮನಿಸಿ ಜನರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಶನಿವಾರ, ಭಾನುವಾರ ರಜಾ ದಿನಗಳಲ್ಲೂ ನೋಂದಣಿ ಕಚೇರಿ ತೆರೆಯಬೇಕೆಂಬ ಒತ್ತಾಯವಿತ್ತು. ಮುಖ್ಯಮಂತ್ರಿಗಳು ಈ ಬಗ್ಗೆ ಸೂಚನೆ ನೀಡಿದ್ದು, ಕಾನೂನು ತಿದ್ದುಪಡಿ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸಮೀಪದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅನುಕೂಲಕರವಾದ ದಿನ, ಸಮಯದಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಇನ್ನು ರಜಾದಿನಗಳಲ್ಲೂ ಆಸ್ತಿ ನೋಂದಣಿ ಮಾಡಿಸಬಹುದಾಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿ ಎನಿವೇರ್ ವ್ಯವಸ್ಥೆ ಜಾರಿ: ೧೩೬೮ ದಸ್ತಾವೇಜು ನೋಂದಣಿ