Sunday, 6th October 2024

E-Khata: ಅ.7ರಿಂದ ಎಲ್ಲ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಸ್ಥಿರಾಸ್ತಿ ವಹಿವಾಟಿಗೆ ಇ- ಖಾತೆ

e-khata

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು (Urban development department) ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ (E-Khata karnataka) ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು (Kaveri Online Services) ಸಂಯೋಜನೆ ಮಾಡಲು ಸಮ್ಮತಿ ನೀಡಿದೆ.

ಧಾರವಾಡ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಸೂಚಿಸಿದ್ದು, ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜಿಸಿ, ಅಕ್ಟೋಬರ್ 07, 2024ರಿಂದ ಜಾರಿಗೆ ಬರುವಂತೆ ಸರ್ಕಾರವು ಆದೇಶಿಸಿದೆ.

ಈ ಕುರಿತು ಪ್ರಕಟಣೆ ನೀಡಿದ್ದು, ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದೆ. ಜಮೀನಿನ ಸರ್ವೇ ನಕ್ಷೆ (ಸ್ಕೆಚ್) ನಮೂನೆ 11 ಇ ಇರುವ ಮೋಜಣಿ ತಂತ್ರಾಂಶದೊಂದಿಗೆ ಕಾವೇರಿ ತಂತ್ರಾಂಶವನ್ನು ಅಕ್ಟೋಬರ್ 05, 2016 ರಿಂದ ಸಂಯೋಜನೆ ಮಾಡಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ‌ ದಸ್ತಾವೇಜುಗಳ ನೋಂದಣಿಗಾಗಿ 2014ರಿಂದ ಸಂಯೋಜನೆಗೊಳಿಸಲಾಗಿದೆ ಎಂದಿದೆ.

ನಗರ ಪ್ರದೇಶಗಳಲ್ಲಿನ ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ- ಆಸ್ತಿ ತಂತ್ರಾಂಶವನ್ನು ರೂಪಿಸಿದ್ದು , ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜನೆ ಮಾಡಿ ದಿನಾಂಕ: 29-01-2020ರಿಂದ ಯಶಸ್ವಿಯಾಗಿ ನೋಂದಣಿ ಮಾಡಲಾಗುತ್ತಿದೆ.

ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯಲು ಸಾಧ್ಯವಿದೆ. ಮತ್ತು ಇ-ಖಾತಾದಿಂದ ಮಾತ್ರ ಸ್ವ ತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯವಾಗುತ್ತದೆ. ನೈಜ ಮಾಲೀಕರಿಗೆ ವಂಚಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿ ಆಗುವುದನ್ನು
ತಪ್ಪಿಸಬಹುದಾಗಿದೆ. ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸುವುದು ಸಾಧ್ಯ. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ ಕಾನೂನು ತೊಂದರೆಗಳನ್ನು ತಪ್ಪಿಸುವ ಉದ್ದೇಶವನ್ನು ಈ ತಂತ್ರಾಂಶ ಹೊಂದಿದೆ.

ಇದನ್ನೂ ಓದಿ: Muda Case: ಸಿಎಂ ಪತ್ನಿಯ 14 ನಿವೇಶನಗಳ ಖಾತೆ ರದ್ದು; ವಶಕ್ಕೆ ಪಡೆದ ಮುಡಾ