ಹುಳಿಯಾರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳಲ್ಲಿ ಅತಿಥಿ ಬೋಧಕರು ಕೆಲಸ ನಿರ್ವಹಿಸುತ್ತಿರುವವರು ತಮ್ಮ ಬೇಡಿಕೆಗಳ ಈಡೇರಿಕೆಗಳಿಗಾಗಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಶುಕ್ರವಾರ ಆನ್‌ಲೈನ್ ಪ್ರತಿಭಟನೆ ಮಾಡಿದರು.
ಹುಳಿಯಾರಿನ ಅತಿಥಿ ಉಪನ್ಯಾಸಕ ರಮೇಶ್ ಅವರು ತಮ್ಮ ಮನೆಯಲ್ಲಿ ಬೇಡಿಕೆ ಪಟ್ಟಿಯನ್ನು ಹಿಡಿದುಕೊಂಡು ಪ್ರತಿಭಟನೆ ಮಾಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
ಕಳೆದ ವರ್ಷ ದೇಶಕ್ಕೆ ಬಂದ ಕೊರೋನಾದಿಂದ ಬಹಳಷ್ಟು ಸಮಸ್ಯೆಯನ್ನು ಐಟಿಐ ಕಾಲೇಜಿನ ಅತಿಥಿ ಉಪನ್ಯಾಸಕರು ಎದುರಿಸುತ್ತಿದ್ದಾರೆ. ಇದೀಗ ಎರಡನೇ ಅಲೆಯಿಂದಾಗಿ ಜೀವನ ನಡೆಸಲು ಪರದಾಡುವಂತಾಗಿದೆ. ಕಳೆದ ಮೂರು ತಿಂಗಳ ವೇತನವಿಲ್ಲದೆ ಸಂಸಾರಗಳನ್ನು ನಡೆಸುವುದು ಕಷ್ಟವಾಗಿದೆ. ಕಾರಣ ಐಟಿಐ ಗಳಲ್ಲಿ ಕೆಲಸ ನಿರ್ವಹಿಸುವ ಅತಿಥಿ ಬೋಧಕರಿಗೆ ಕೊರೋನ ಪ್ಯಾಕೇಜ್ ಘೋಷಿಸಬೇಕು ಎನ್ನುವ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಆನ್ಲೆöÊನ್ ಪ್ರತಿಭಟನೆಗೆ ಸರ್ಕಾರಿ ಐಟಿಐ ಅತಿಥಿ ಬೋಧಕರ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯ ಅತಿಥಿ ಬೋಧಕರ ಸಂಬಳ ಈ ಕೂಡಲೇ ನೀಡಬೇಕು. ಕೊರೋನದಿಂದ ಮೃತಪಟ್ಟ ಅತಿಥಿ ಬೋಧಕರಿಗೆ 25 ಲಕ್ಷ ಪರಿಹಾರವನ್ನು ಘೋಷಿಸಬೇಕು ಹಾಗೂ ಅತಿಥಿ ಬೋಧಕರಿಗೆ ವೈದ್ಯಕೀಯ ಭದ್ರತೆ ಒದಗಿಸಬೇಕು. ಮತ್ತು ಅತಿಥಿ ಬೋಧಕರ ಸೇವಾಭದ್ರತೆ ಖಾತ್ರಿಪಡಿಸಬೇಕು ಎಂಬುದು ಐಟಿಐ ಅತಿಥಿ ಉಪನ್ಯಾಸಕರುಗಳ ಬೇಡಿಕೆಗಳಾಗಿವೆ ಎಂದು ಅವರು ವಿವರಿಸಿದ್ದಾರೆ.