Friday, 22nd November 2024

PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಲು ಬಿಜೆಪಿ ಆಗ್ರಹ; ಗೃಹ ಸಚಿವರಿಗೆ ಪತ್ರ

PSI Exam

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ ಹಾಗೂ ಯುಪಿಎಸ್‌ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯು (UPSC Exam), ಸೆ.22 ರಂದು ಒಂದೇ ದಿನ ನಿಗದಿಯಾಗಿರುವುದರಿಂದ ರಾಜ್ಯದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಹೀಗಾಗಿ ಪಿಎಸ್‌ಐ ಪರೀಕ್ಷಾ (PSI Exam) ದಿನಾಂಕವನ್ನು ಮುಂದೂಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಬಿಜೆಪಿ ನಿಯೋಗ ಮನವಿ ಮಾಡಿದೆ.

ಸದಾಶಿವನಗರದ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರನ್ನು ಮಂಗಳವಾರ ಭೇಟಿಯಾದ ಡಾ.ಸಿಎನ್‌.ಅಶ್ವತ್ಥ ನಾರಾಯಣ್ ನೇತೃತ್ವದ ಬಿಜೆಪಿ ನಿಯೋಗ, ಪಿಎಸ್‌ಐ ಪರೀಕ್ಷೆ ಮುಂದೂಡುವಂತೆ ಮನವಿ ಪತ್ರ ಸಲ್ಲಿಸಿದೆ. ನಿಯೋಗದಲ್ಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಸೇರಿ ಪರೀಕ್ಷಾ ಅಭ್ಯರ್ಥಿಗಳು ಇದ್ದರು.

ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟ ಸರ್ಕಾರ

ಯುವಕರ ಭವಿಷ್ಯದ ಕುರಿತು ಎಳ್ಳಷ್ಟು ಕಾಳಜಿಯಿಲ್ಲದ ಭ್ರಷ್ಟ ಕಾಂಗ್ರೆಸ್‌ ಸರ್ಕಾರ, ಯುಪಿಎಸ್‌ಸಿ ಪರೀಕ್ಷೆ ನಡೆಯುವ ದಿನಾಂಕದಂದೇ ಪಿಎಸ್ಐ ಪರೀಕ್ಷೆ ದಿನಾಂಕ ನಿಗದಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಯುಪಿಎಸ್‌ಸಿ ಹಲವು ತಿಂಗಳುಗಳ ಮೊದಲೇ ಪರೀಕ್ಷೆ ದಿನಾಂಕ ಪ್ರಕಟಿಸುತ್ತದೆ. ಅದರಂತೆ, ಜೂನ್ 16ರಂದು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ (ಸೆ.20ರಿಂದ 29) ಮುಖ್ಯ ಪರೀಕ್ಷೆ ನಡೆಯಲಿದೆ. ವಿವೇಚನೆ, ಸಂವೇದನೆ ಇಲ್ಲದ ಸಿಎಂ ಸಿದ್ದರಾಮಯ್ಯ ಅವರು ನವರ ಸರ್ಕಾರ ಪಿಎಸ್ಐ ಪರೀಕ್ಷೆಯನ್ನು ಸೆ.22ರಂದೇ ನಡೆಸುವುದಾಗಿ ಜುಲೈ 31ರಂದು ಪ್ರಕಟಿಸಿದೆ. ಈ ಮೂಲಕ ಯುವಕರ ಉದ್ಯೋಗದ ಕನಸಿಗೆ ಕೊಳ್ಳಿಯಿಡುವ ಕೆಲಸ ಮಾಡಿದೆ ಎಂದು ಕಿಡಿಕಾರಿದೆ.

ಸೆ.22ರಂದು ನಿಗದಿಯಾಗಿರುವ ಯುಪಿಎಎಸ್‌ ಮುಖ್ಯ ಪರೀಕ್ಷೆ, ಎಸ್‌ಎಸ್‌ಸಿ ಪರೀಕ್ಷೆ ಜೊತೆಗೆ ಪಿಎಸ್ಐ ಪರೀಕ್ಷೆಯೂ ನಡೆದರೆ ಮೂರೂ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿ ಗೊಂದಲದ ಕುರಿತು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಅವರು ಈ ಹಿಂದೆ ಮೇಲ್ಮನೆಯಲ್ಲಿ ಕೇಳಿದ್ದ ಪ್ರಶ್ನೆಗೆ, ಯುಪಿಎಎಸ್‌ಸಿ, ಎಸ್‌ಎಸ್‌ಸಿ ಹಾಗೂ ಎನ್‌ಟಿಎ ಮತ್ತು ಇತರ ನೇಮಕಾತಿ ಪ್ರಾಧಿಕಾರಗಳಿಂದ ಪ್ರಕಟಿತವಾಗುವ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುತ್ತಯೇ? ಎಂಬ ಪ್ರಶ್ನೆಗೆ, ಇಲ್ಲ ಒಂದು ವೇಳೆ ಪರೀಕ್ಷೆಗೆ ತೊಂದರೆಯಾದರೇ ಪರೀಕ್ಷೆ ದಿನಾಂಕ ಮರು ನಿಗದಿಪಡಿಸಲಾಗುವುದು ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | 7th Pay Commission: ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಗುಡ್‌ ನ್ಯೂಸ್‌; ಪರಿಷ್ಕೃತ ವೇತನ ಶ್ರೇಣಿ ಜಾರಿಗೆ ಸರ್ಕಾರ ಆದೇಶ

ಸದ್ಯ ಉಲ್ಟಾ ಹೊಡೆದಿರುವ ಕಾಂಗ್ರೆಸ್ ಸರ್ಕಾರ ಸೆ.22ರಂದು ಪಿಎಸ್ಐ ಪರೀಕ್ಷೆ ನಡೆಸಲು ಹೊರಟಿರುವುದು ಖಂಡನೀಯ, ಕೂಡಲೇ, ವಿದ್ಯಾರ್ಥಿ ವಿರೋಧಿ ನೀತಿ ಕೈಬಿಟ್ಟು, ಸಾವಿರಾರು ಉದ್ಯೋಗಾಕಾಂಕ್ಷಿ ಪರೀಕ್ಷಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪಿಎಸ್‌ಐ ಪರೀಕ್ಷೆಯ ದಿನಾಂಕವನ್ನು ಮರು ನಿಗದಿ ಮಾಡಲಿ ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.