Tuesday, 19th November 2024

PSI Selection List: 545 ಪಿಎಸ್‌ಐಗಳ ತಾತ್ಕಾಲಿಕ ಪಟ್ಟಿ ಪ್ರಕಟ

PSI Selection List

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ರಾಜ್ಯ ಪೊಲೀಸ್‌ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (PSI)ಗಳ ತಾತ್ಕಾಲಿಕ ಪಟ್ಟಿಯನ್ನು ರಾಜ್ಯ ಗೃಹ ಇಲಾಖೆ ಸೋಮವಾರ (ಅಕ್ಟೋಬರ್‌ 21) ಪ್ರಕಟಿಸಿದೆ. ವ್ಯಾಪಕ ಅಕ್ರಮ ನಡೆದ ಬಳಿಕ 545 ಪಿಎಸ್‌ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲಾಗಿತ್ತು. ಇದೀಗ ಪಿಎಸ್‌ಐ ಹುದ್ದೆಗಳ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ (PSI Selection List).

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಆದ ಅಕ್ರಮ ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಹೈಕೋರ್ಟ್‌ ನೀಡಿದ್ದ ಸೂಚನೆಯ ಅನ್ವಯ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಆದರೆ ಫಲಿತಾಂಶ ಪ್ರಕಟಿಸಿದ್ದು ಬಿಟ್ಟರೆ ಆಯ್ಕೆ ಪಟ್ಟಿ ಹೊರ ತಂದಿರಲಿಲ್ಲ. ಹೀಗಾಗಿ ವಿಪಕ್ಷಗಳು ಈ ವಿಚಾರದಲ್ಲಿ ಟೀಕೆ ಮಾಡುತ್ತಿದ್ದವು. ಇದೀಗ ರಾಜ್ಯ ಸರ್ಕಾರ ಆಯ್ಕೆ ಪಟ್ಟಿ ತಯಾರಿಸಿ ವಿಪಕ್ಷಗಳಿಗೆ ತಿರುಗೇಟು ನೀಡಿದೆ.

ಪಿಎಸ್‌ಐ ಪಟ್ಟಿ ಓದಲು ಇಲ್ಲಿ ಕ್ಲಿಕ್‌ ಮಾಡಿ (https://arc21.ksp-recruitment.in/assets/documents/PSI545_PSL_ENG_v1.pdf)

ಅಭ್ಯರ್ಥಿಗಳ ಮೀಸಲಾತಿಗೆ ಸಂಬಂಧಿಸಿದಂತೆ 2023ರ ಫೆ. 1ರಂದು ಹೊರಡಿಸಿದ್ದ ಸುತ್ತೋಲೆಯಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ. ಅಲ್ಲದೆ, 2020ರ ಜೂನ್ 6ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ 40 ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಅನುಗುಣವಾಗಿ 40
ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಆಯ್ಕೆ ಪಟ್ಟಿಯ ವೃಂದ ಬದಲಾವಣೆ, ಮೀಸಲಾತಿ ಪ್ರಚಾರ ಬದಲಾವಣೆ, ಅರ್ಹತಾ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗಳಿ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರದ ಸಿದ್ಧತೆ