Friday, 22nd November 2024

R Ashok: ಇ-ಖಾತಾ ವ್ಯವಸ್ಥೆ; ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ: ಆರ್‌. ಅಶೋಕ್‌ ಆರೋಪ

R Ashok

ಬೆಂಗಳೂರು: ಇ-ಖಾತಾ (E-Khatha) ವ್ಯವಸ್ಥೆಯನ್ನು ಸರ್ಕಾರ ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಇ-ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು. ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ-ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ. ಈಗಾಗಲೇ ಅಪ್‌ಲೋಡ್‌ ಮಾಡಿರುವ ಇ-ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್‌ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | BY Vijayendra: ಶಾಸಕರಿಗೆ ಹಣದ ಆಮಿಷ; ಹಗರಣ ಮುಚ್ಚಿಡಲು ಸಿಎಂ ಹೆಣೆದಿರುವ ಸುಳ್ಳಿನ ಕಂತೆ; ವಿಜಯೇಂದ್ರ ಟೀಕೆ

ಜನರಿಗೆ ಮನೆ ಸಾಲ ಸಿಗಲು ಇ-ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ-ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೆ ಇ-ಖಾತಾ ವರ್ಗಾವಣೆಯಾಗಬೇಕು. ನಾನು ಕಂದಾಯ ಸಚಿವನಾಗಿದ್ದಾಗ ಶುಲ್ಕ ಕಡಿಮೆ ಮಾಡಿದ್ದೆ. ಈಗಿನ ಸರ್ಕಾರ ಮುದ್ರಾಂಕ ಶುಲ್ಕವನ್ನು 200-250% ಹೆಚ್ಚಿಸಿದೆ. ಜತೆಗೆ ಇ ಖಾತಾ ಬರೆ ಬಿದ್ದಿದೆ. ಸರ್ಕಾರ ಈ ಕುರಿತು ಕ್ರಮ ವಹಿಸದಿದ್ದರೆ ಸಾವಿರಾರು ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ತಿಳಿಸಿದ್ದಾರೆ.