Friday, 22nd November 2024

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಆರ್.ಅಶೋಕ್ ನಾಳೆ ಪ್ರವಾಸ

R Ashok

ಬೆಂಗಳೂರು: ನೆರೆ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ನಾಳೆ ಪ್ರವಾಸ ಕೈಗೊಳ್ಳುತ್ತಿದ್ದು, ಬೆಳಗಾವಿಯಲ್ಲಿ ಸ್ಥಳೀಯ ಜನ ಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ.

ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಅಶೋಕ್ ಅವರು, ಸೋಮವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅತಿವೃಷ್ಠಿ ಕುರಿತು ಸಭೆ ನಡೆಸಲಿದ್ದಾರೆ.

ನಂತರ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 12.30ಕ್ಕೆ ಹುಕ್ಕರಿ ತಾಲ್ಲೂಕಿನ ಹತ್ತರಗಿ, ಜಿನರಾಳ ಗ್ರಾಮಗಳಲ್ಲಿ ಬೆಳೆ ಹಾನಿ ಕುರಿತು ವೀಕ್ಷಣೆ ನಡೆಸಲಿದ್ದಾರೆ. ಹುಕ್ಕೇರಿಯಲ್ಲಿ ಮನೆ ಹಾಗೂ ಬಸ್ ನಿಲ್ದಾಣದ ಮುಖ್ಯ ರಸ್ತೆ ಹಾನಿಯನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಎಲಿಮುನ್ನೋಳ್ಳಿಯಲ್ಲಿ ಬೆಳೆ ಹಾನಿ, ಕಲ್ಲೋಳದಲ್ಲಿ ಬ್ಯಾರೇಜ್ ಮತ್ತು ದತ್ತ ಮಂದಿರ ವೀಕ್ಷಣೆ, ಯಡೂರ, ಯಡೂರವಾಡಿ, ಇಂಗಳಿಯಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಲಿದ್ದಾರೆ.

ಮಳೆಯಿಂದ ಕಳೆದ ಒಂದು ವಾರದಿಂದ ಪ್ರವಾಹ ಪರಿಸ್ಥಿತಿ ಇದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಆದರೆ ಕಂದಾಯ ಸಚಿವ ಆರ್.ಅಶೋಕ್ ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದಿಸುವ ಬದಲು, ಉಪಚುನಾವಣೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಎರಡು ದಿನಗಳ ಹಿಂದೆ ಕಲ್ಬುರ್ಗಿ ಜಿಲ್ಲೆಗೆ ಭೇಟಿ ನೀಡಿದ ಅಶೋಕ್ ಅವರು ಅಲ್ಪಕಾಲದ ಸಮೀಕ್ಷೆ ನಡೆಸಿ ವಾಪಾಸ್ಸಾಗಿದ್ದರು. ಇದು ಕೂಡ ಟೀಕೆಗೆ ಗುರಿಯಾಗಿತ್ತು.