ಬೆಂಗಳೂರು: ಕಳೆದ ಎರಡು ದಿನಗಳಿಂದ ಬಿಡುವು ಕೊಟ್ಟಿದ್ದ ಮುಂಗಾರು ಮಳೆ, ಮತ್ತೆ ಚುರುಕುಗೊಂಡಿದ್ದು, ಹಲವೆಡೆ ಧಾರಾಕಾರವಾಗಿ ಸುರಿದಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜು.21ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕೊಪ್ಪಳ, ಬೀದರ್‍ನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕ ಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ದೀರ್ಘಕಾಲದವರೆಗೆ ಮುಂದುವರೆಯಲಿದೆ. ಆದರೆ ಮಳೆ ಬಿಡದಂತೆ ನಿರಂತರವಾಗಿ ಸುರಿಯುತ್ತಿದ್ದರೆ ಕೊಳೆ ರೋಗಗಳು ಬರುವ ಆತಂಕವೂ ಎದುರಾಗಿದೆ.
ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಲಬಾಳದಲ್ಲಿ ನದಿ ಉಕ್ಕಿ ಗುಂಡಿಬೈಲ್ ಗ್ರಾಮದ ಹಲವು ಮನೆಗಳು ಜಲಾವೃತ ವಾಗಿವೆ. ಹಾಸನದ ಸಕಲೇಶಪುರ, ಆಲೂರು ಭಾಗದಲ್ಲಿ ಕಾರ್ಮೋಡ ಕವಿದಿದ್ದು, ಆಗಾಗ್ಗೆ ಮಳೆ ಆಗುತ್ತಿದೆ. ದಾವಣಗೆರೆ- ಹರಪನಹಳ್ಳಿ ಪ್ರಮುಖ ಸಂಪರ್ಕ ಸೇತುವೆ ಇದಾಗಿದ್ದು, ಮಳೆ ಮುಂದುವರಿದರೆ ಈ ಭಾಗದ ಸಂಪರ್ಕ ಸ್ಥಗಿತವಾಗುವ ಭೀತಿ ಎದುರಾಗಿದೆ.
ಬೀದರ್, ಔರಾದ್, ಹುಮ್ನಾಬಾದ್, ಚಿಟ್ಟಗುಪ್ಪ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಬಳಿಯ ಕಾರಹಳ್ಳಿ ಕ್ರಾಸ್ ನಲ್ಲಿ ಬೃಹತ್ ಮರಗಳು ರಸ್ತೆಗೆ ಉರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.