Friday, 22nd November 2024

Rajyotsava In Germany: ಜರ್ಮನಿಯ ಮ್ಯೂನಿಕ್‌‌ನ ಸಿರಿಗನ್ನಡ ಕೂಟದಿಂದ ಕನ್ನಡ ಕಹಳೆ ಸಾಹಿತ್ಯ ಸಂಜೆ

Kannada Kahale Sahitya Sanje
-ಶೋಭಾ ಚೌಹಾನ್, ಪ್ರಾಂಕ್ಫರ್ಟ್, ಜರ್ಮನಿ

ಸಿರಿಗನ್ನಡ ಕೂಟ ಮ್ಯೂನಿಕ್ ಕಳೆದ 13 ವರ್ಷಗಳಿಂದ ಮ್ಯೂನಿಕ್ ನೆಲದಲ್ಲಿ ಕನ್ನಡದ ಕಂಪು ಬೀರುತ್ತಾ ಬಂದಿದೆ. ಕೇವಲ ನವೆಂಬರ್ ಕನ್ನಡಿಗರಾಗದೆ ನಿರಂತರ ಕನ್ನಡ ಕಂಪಿಗಾಗಿ ತ್ರೈಮಾಸಿಕ ಕನ್ನಡ ಕಹಳೆ ಸಾಹಿತ್ಯ ಸಂಜೆಯಲ್ಲಿ (Rajyotsava In Germany) ಜರ್ಮನಿಯ ಕನ್ನಡಿಗರನ್ನು ಅಲ್ಲದೇ ಯುರೋಪಿನ ಕನ್ನಡಿಗರನ್ನು ಒಂದುಗೂಡಿಸುತ್ತ, ಸಾಹಿತ್ಯಾಸಕ್ತರನ್ನು, ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುತ್ತಾ, ಆರು ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ.

ಹೊನ್ನುಡಿ

ಕರುನಾಡ ಹೊನ್ನುಡಿಯು ಮ್ಯೂನಿಕ್ ಮಣ್ಣಿನಲ್ಲಿ ಕೇವಲ ದೊಡ್ಡವರಿಗಷ್ಟೇ ಅಲ್ಲ, ಭವಿಷ್ಯದ ಕುಡಿಗಳಿಗೆ ಆಸ್ಥೆ, ಪ್ರೀತಿ ಚಿಮ್ಮಿಸಲು, ಮನನ ಮಥನ ನಮನದ ಕನ್ನಡ ಕಹಳೆಯಲ್ಲಿ ಮಕ್ಕಳ ಕಲರವವೂ ಸೇರುತ್ತದೆ. ಪುಟ್ಟ ಮಕ್ಕಳ ಕನ್ನಡ ಪ್ರೇಮ ಅವರಿಗಿಷ್ಟದ ಕಥೆ, ಕವನ ವಾಚನದ ಮೂಲಕ ದ್ವಿಗುಣಗೊಳಿಸುವುದಕ್ಕೆ ಈ ಆನ್ಲೈನ್ ವೇದಿಕೆ ಅಡಿಪಾಯವಾಗಿದೆ. ಇದಾಂತ್, ಚಿರಾಗ್, ಚಿರಂತ್, ಆದಿಶೇಷ, ಶಿವ ಮಲ್ಲಿಗೆರೆ ಇಂತಹ ಎಳೆಯ ಮನಸುಗಳ ಮೇಲೆ ಕನ್ನಡ ತನ್ನ ಒಲ್ಮೆಯನ್ನು ತೋರಿ ಭವಿಷ್ಯದ ಬಗ್ಗೆ ಭರವಸೆಯನ್ನು ಚಿಗುರಿಸುತ್ತಿದೆ. ಕನ್ನಡ ಕಹಳೆ ಸಾಹಿತ್ಯ ಸಂಜೆಯಲ್ಲಿನ ಕವನ, ಕಥೆಗಳು ಹೊನ್ನುಡಿಯ ಪುಟಗಳು ಸೇರಿ ಶಾಶ್ವತ ಸ್ಮರಣಿಕೆಯೂ ಆಗಿ ಉಳಿಯುತ್ತದೆ.

ಈ ಸುದ್ದಿಯನ್ನೂ ಓದಿ | Google Maps: 2 ಶತಕೋಟಿ ಬಳಕೆದಾರರ ಮೂಲಕ ನಂ. 1 ನ್ಯಾವಿಗೇಷನ್‌ ಆ್ಯಪ್‌ ಪಟ್ಟಕ್ಕೇರಿದ ಗೂಗಲ್‌ ಮ್ಯಾಪ್‌

ಸ್ವರಚಿತ ಕವನ, ಕಥೆ, ಲೇಖನಗಳು ಹೀಗೆ ಬರವಣಿಗೆಯ ವಿವಿಧ ಆಯಾಮಗಳಿಗೆ ವೇದಿಕೆಯಾಗುವ ಮನನ ಮಥನ ನಮನ, ಹಿರಿಯರ ಭಾಷಾ ಕೌಶಲ್ಯ ಹೆಚ್ಚಿಸುವ ‘ಮನನ’, ಕನ್ನಡ ಕೃತಿಗಳ ಓದು ಮತ್ತು ಚರ್ಚೆ ನಡೆಸುವ ‘ಮಥನ’ ಕನ್ನಡಕ್ಕಾಗಿ ಶ್ರಮಿಸಿದವರ ಸ್ಮರಣೆಗಾಗಿ ‘ನಮನ’ ಇಂತಹ ಉದಾತ್ತ ಧ್ಯೇಯಗಳನ್ನು ಹೊಂದಿದೆ.

ಭಾವುಕ ಬರಹ

ಈ ಬಾರಿಯ ಸಾಹಿತ್ಯ ಸಂಜೆಯಲ್ಲಿ ಪೂಜಾ, ರಕ್ಷಾ, ಅರವಿಂದ್, ವಿನುತಾ, ಸಹನಾ, ಗಿರೀಶ್ ರಾವಂದೂರ್, ಕಮಲಾಕ್ಷ, ವಿಭಾರವರ ಬರಹಗಳು ಒಮ್ಮೆ ಭಾವುಕರನ್ನಾಗಿಸಿದರೆ, ಒಮ್ಮೆ ಕಚಗುಳಿಯಿಟ್ಟಿತು. ಬಣ್ಣದ ಬದುಕು, ಸ್ವಾತಿಮುತ್ತು, ಗೊಡ್ರಪ್ಪನ ಸಂಕಟ, ನಮ್ಮ ಕಣ್ಮಣಿ, ಮನದಾಳದ ಮಾತು, ನಾನು ಎನ್ನುವ ನಾನು, ಹೇಳುವ ಬಾಯಿಗಳು, ವಸಂತ ಸೇನೆಯ ವಿರಹಗೀತೆ ಹೀಗೆ ಒಂದೊಂದು ಶೀರ್ಷಿಕೆಯು ವಿಭಿನ್ನ ಹಾಗೂ ಸೃಜನಾತ್ಮಕತೆಯನ್ನು ಹೊಂದಿತ್ತು.

ನವನವೀನ ಭಾವಗಳು ವಿಕಸಿಸಿ ಕವನ, ಕಥೆಗಳಾಗಿ ಹೊರಹೊಮ್ಮಿ ಅದು ಮತ್ತೊಬ್ಬರ ಅಂತರಾಳವನ್ನು ಹೊಕ್ಕಲು ಭಾಷೆ ಸಹಾಯಕವಾಗಿರುತ್ತದೆ. ಇಂತಹ ಭಾವ ಪಸರಿಸಲು ಹೊರ ನಾಡಿನಲ್ಲೂ ಭಾಷಾಸೇವೆಗೆ ಮುಂದಾಳುಗಳಾಗಿರುವ ಸಿರಿಗನ್ನಡ ಕೂಟ ಮ್ಯೂನಿಕ್‌ನ ಎಲ್ಲ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ. ಕನ್ನಡ ಕಹಳೆಯ ಬೆನ್ನೆಲುಬಾಗಿರುವ ಕಮಲಾಕ್ಷ ಎಚ್‌.ಎನ್, ಅರವಿಂದ ಸುಬ್ರಹ್ಮಣ್ಯರವರ ನಿಸ್ವಾರ್ಥ ಸೇವೆ ನಿರಂತರವಾಗಿರಲಿ.

ಈ ಸುದ್ದಿಯನ್ನೂ ಓದಿ | Rudra Garuda Purana Movie: ರಿಷಿ ಅಭಿನಯದ ʼರುದ್ರ ಗರುಡ ಪುರಾಣʼ ಚಿತ್ರದ ʼಕಣ್ಮುಂದೆ ಬಂದುʼ ಹಾಡು ಕೇಳಿ

6ನೇ ಆವೃತ್ತಿಯ ಕನ್ನಡ ಕಹಳೆಯಲ್ಲಿ ಬರಹಗಾರರ ವಿಭಿನ್ನತೆಯ ಜತೆಗೆ ಅಖಿಲಾ ಅವಧಾನಿ ಅವರ ಭಕ್ತಿಪೂರ್ಣ ಪ್ರಾರ್ಥನೆ, ದಿವ್ಯ ಎಚ್.ಎನ್ ‌ರವರ ಸ್ನೇಹಭರಿತ ಸ್ವಾಗತ, ಅರವಿಂದರವರ ವಂದನಾರ್ಪಣೆ, ಶೋಭಾರವರ ನಿರೂಪಣೆಯೊಂದಿಗೆ ಒಂದು ಸುಂದರ ಸಂಜೆ ಸಾಹಿತ್ಯ ಮಯವಾಗಿ ಸಾರ್ಥಕಗೊಂಡಿತು.