Thursday, 21st November 2024

Rajyotsava In Netherlands: ನೆದರ್ಲ್ಯಾಂಡ್ಸ್‌ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

Rajyotsava In Netherlands

ನೆದರ್ಲ್ಯಾಂಡ್ಸ್: ನೆದರ್ಲ್ಯಾಂಡ್ಸ್ ದೇಶದ ಐಂಧೋವನ್ ನಗರದಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ (Rajyotsava In Netherlands) ಆಚರಿಸಲಾಯಿತು. ಫಿಲಿಪ್ಸ್, ಎ.ಎಸ್.ಎಂ.ಎಲ್. ನಂತಹ ವಿಶ್ವ ದರ್ಜೆಯ ಕಂಪನಿಗಳ ಕೇಂದ್ರ ಕಚೇರಿಗಳಿರುವ ಐಂಧೋವನ್ ಎಂಬ ಚಿಕ್ಕ ನಗರದಲ್ಲಿ ಹಲವು ಸಾವಿರ ಭಾರತೀಯ ಎಂಜಿನಿಯರ್‌ಗಳು ಉದ್ಯೋಗ ನಿಮಿತ್ತ ಬಂದು ನೆಲೆಸಿದ್ದಾರೆ. ಅದರಲ್ಲೂ ವಿಶೇಷವೆಂದರೆ ನಮ್ಮ ಕನ್ನಡದ ಎಂಜಿನಿಯರ್‌ಗಳು ಬಹುಸಂಖ್ಯೆಯಲ್ಲಿದ್ದಾರೆ. ಹಲವು ವರ್ಷಗಳಿಂದ ಬಂದು ನೆಲೆಸಿರುವ ಕನ್ನಡಿಗರು ತಾಯ್ನೆಲದ ಹಾಗೂ ಕನ್ನಡದ ನಂಟನ್ನು ಉಳಿಸಿಕೊಳ್ಳುವ ಸಲುವಾಗಿ ‘ಶ್ರೀಗಂಧ ‘ ಎಂಬ ಕನ್ನಡ ಸಂಘವನ್ನು ಕಟ್ಟಿಕೊಂಡಿದ್ದಾರೆ. ಈ ಸಂಘದ ಮುಖೇನ ಪ್ರತಿ ವರ್ಷ ಯುಗಾದಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 9 ರಂದು ಆಚರಿಸಿಲಾಯಿತು. ಈ ಬಾರಿ ಉಡೆನ್ ಎಂಬ ಸಮೀಪದ ಗ್ರಾಮದಲ್ಲಿ ಒಂದು ಭವ್ಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಅದರಂತೆ ಐನ್ಧೋವನ ಹಾಗು ಸುತ್ತಮುತ್ತಲ ಕನ್ನಡಿಗರು ಕಾರು, ಬಸ್ಸುಗಳನ್ನೇರಿ ಮಧ್ಯಾಹ್ನ ಒಂದರ ಸುಮಾರಿಗೆ ಕಾರ್ಯಕ್ರಮದ ಸ್ಥಳ ಸೇರಿದರು. ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಶುರುವಾಯಿತು. ಕನ್ನಡ ಕಾರ್ಯಕ್ರಮದ ಶುರುವಿನಲ್ಲಿ ಸಾಮಾನ್ಯವಾಗಿ ಡಿ.ಎಸ್. ಕರ್ಕಿಯವರ ‘ಹಚ್ಚೇವು ಕನ್ನಡ ದೀಪ ‘ ಭಾವಗೀತೆಯನ್ನು ಹಾಡುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಪರಮೇಶ್ವರ ಭಟ್ಟರು ಬರೆದ ಹಾಗೂ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿರುವ ‘ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ.. ದೀಪ ಹಚ್ಚ’ ಎಂಬ ಅಷ್ಟೇ ಮಧುರವಾದ ಗೀತೆಯನ್ನು ಹಾಡಿದರು.

ಈ ಸುದ್ದಿಯನ್ನೂ ಓದಿ | Vishwavani Global Achievers Award: ಕರುನಾಡ ಸಾಧಕರಿಗೆ ಜಪಾನ್‌ ರಾಜಧಾನಿಯಲ್ಲಿ ನಾಳೆ ಸನ್ಮಾನ!

‘ಮೈಸೂರಿನ ಕಥೆಗಳು’ ಖ್ಯಾತಿಯ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರು ಬೆಂಗಳೂರಿನಿಂದ ಆನ್‌ಲೈನ್ ಸಂವಾದ ನಡೆಸಿದರು. ಅವರು ತಮ್ಮ ಸಹಜ ಶೈಲಿಯಲ್ಲಿ ಕನ್ನಡದ ಮೊದಲುಗಳ ಬಗ್ಗೆ ಹೇಳಿದರು. ʼನಾನು ಕೂಡ 25 ವರ್ಷ ಗಲ್ಫ್ ದೇಶದಲ್ಲಿದ್ದುದರಿಂದ ಹೊರನಾಡ ಕನ್ನಡಿಗನ ಪರಿಸ್ಥಿತಿಯ ಅರಿವು ಇದೆ. ಎಲ್ಲಿದ್ದರೂ ಎಂತಿದ್ದರೂ ಕನ್ನಡಿಗನಾಗಿ ಹೆಮ್ಮೆಯಿಂದ ಬಾಳಿರಿʼ ಎಂದು ಆಶೀರ್ವದಿಸಿದರು. ನಂತರ ನಟಿ ತಾರಾ ಅವರು ಕೂಡ ಆನ್‌ಲೈನ್‌ನಲ್ಲಿ ಶುಭ ಕೋರಿದರು.

ಚಿಕ್ಕ ಮಕ್ಕಳ ಫ್ಯಾಷನ್ ಶೋನಲ್ಲಿ ಒನಕೆ ಓಬವ್ವ, ಕೆಂಪೇಗೌಡ ಮುಂತಾದ ಕನ್ನಡದ ಮಹನೀಯರ ನೆನಪುಗಳಾದವು. ಸ್ಥಳೀಯ ಸಂಗೀತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಹಲವು ಮಕ್ಕಳು ಒಳ್ಳೆಯ ಸಂಗೀತಗಾರರಾಗಿ ರೂಪುಗೊಳ್ಳುತ್ತಿದ್ದು ಅವರಿಂದ ಉತ್ತಮ ಸಂಗೀತ ಪ್ರದರ್ಶನ ನಡೆದವು. ಇಲ್ಲಿನ ಭಾರತೀಯರ ಹೆಮ್ಮೆಯಂತಿರುವ ಭರತ ನಾಟ್ಯ ಶಾಲೆಯೊಂದಿದೆ. ಆ ಶಾಲೆಯವರು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಹಾಡಿಗೆ ನೃತ್ಯ ರೂಪ ಕೊಟ್ಟು ನೀಡಿದ ಪ್ರದರ್ಶನ ಮನಸೂರೆಗೊಂಡಿತು. ಎಂ.ಎಸ್‌. ಮೂರ್ತಿ ಅವರ ನಾಟಕವೊಂದನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಮೊಬೈಲ್‌ನಿಂದಾಗಿ ಉಂಟಾಗಿರುವ ಕೆಡುಕು ಹಾಗೂ ಅದನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಜೀವಿಸಬೇಕೆಂಬ ಸಂದೇಶವನ್ನು ಮನದಟ್ಟಾಗುವಂತೆ ಹೇಳುವ ಹಾಡು-ಕಥೆ ಮಿಶ್ರಿತ ಉತ್ತಮ ರಂಗ ಪ್ರದರ್ಶನವೊಂದು ಸಭಿಕರ ಮನಸೆಳೆಯಿತು.

ಕೆಲವು ದಿನಗಳ ಹಿಂದೆ ಸರಿಗಮಪ ಖ್ಯಾತಿಯ ಗಾಯಕ ಹರ್ಷ ಒಂದು ಕಾರ್ಯಾಗಾರ ನಡೆಸಿದ್ದರು. ಆ ಕಾರ್ಯಾಗಾರದ ವಿದ್ಯಾರ್ಥಿಗಳು ಜಾನಪದ ಹಾಡೊಂದನ್ನು ಚೇತೋಹಾರಿಯಾಗಿ ಹಾಡಿದರು. ಅದು ‘ಜನುಮದ ಜೋಡಿ’ ಚಿತ್ರದ ಕಂಸಾಳೆ ಹಾಡನ್ನು ನೆನಪಿಸಿತು. ಮಾಡ್ರನ್ ರಾಮಾಯಣ ಹಾಗು ಖಾಲಿ ತಟ್ಟೆ ಎಂಬ ಎರಡು ನಾಟಕಗಳು ಕಾಲೇಜುಗಳಲ್ಲಿ ನಡೆಸುವ Mad-Ads ಗಳಂತೆ ಕ್ರಿಯೇಟಿವ್ ಆಗಿದ್ದವು. ನಮ್ಮ ದೇಶದ ವಿಶಿಷ್ಟ ಹಾಗು ದೈವಿಕ ಅಘೋರಿಗಳ ಹಾಗು ಶಿವನ ಪಾತ್ರಧಾರಿಗಳ ನೃತ್ಯ ಪ್ರದರ್ಶನ ಅತ್ಯದ್ಭುತವಾಗಿತ್ತು. ಅದನ್ನು ನೋಡಿ ಸಭಿಕರೆಲ್ಲ ಮಂತ್ರಮುಗ್ಧರಾದರು. ಫ್ಯಾಷನ್ ಶೋಗಳು, ಹಾಡುಗಳು, ಸುದೀಪ್ ಚಿತ್ರದ ಡ್ಯಾನ್ಸ್‌ಗಳು ಹೀಗೆ ಒಂದರ ನಂತರ ಮತ್ತೊಂದು ಸಭಿಕರನ್ನು ರಂಜಿಸುತ್ತಿದ್ದವು. ಕಾರ್ಯಕ್ರಮದ ನಿರೂಪಣೆ ಸ್ವಚ್ಛ, ಸ್ಪಷ್ಟ ಕನ್ನಡದಿಂದ ಕೂಡಿದ್ದು ಕೇಳಲು ಹಿತವೆನಿಸುತ್ತಿತ್ತು.

ಸಭಾಂಗಣದ ಹೊರಭಾಗದಲ್ಲಿದ್ದ ಊಟದ ಮಳಿಗೆಗಳಲ್ಲಿ ತಮಗಿಷ್ಟವಾದ ಭಾರತೀಯ ತಿನಿಸುಗಳನ್ನು ಕೊಂಡು ಕೊಳ್ಳಬಹುದಾದ ವ್ಯವಸ್ಥೆಯಾಗಿತ್ತು. ಹೋಳಿಗೆ, ಜೋಳದ ರೊಟ್ಟಿ, ಎಣ್ಣೆ ಬದನೇಕಾಯಿ, ಬಿಸಿಬೇಳೆಬಾತ್‌ನಂಥ ಅಪ್ಪಟ ಕರ್ನಾಟಕದ ತಿನಿಸುಗಳು ಮಾತ್ರವಲ್ಲದೆ ವಿವಿಧ ಸಿಹಿ ತಿನಿಸುಗಳು, ಪಾನಿ ಪೂರಿ, ಸಮೋಸ ಚಾಟ್‌ಗಳು ಇದ್ದವು. ಈ ಸಲದ ವಿಶೇಷವೆಂದರೆ ಗಿಣ್ಣು ಕೂಡ ಲಭ್ಯವಿತ್ತು. ಕಾರ್ಯಕ್ರಮಗಳ ಬಿಡುವಿನಲ್ಲಿ ಆಗಾಗ್ಗೆ ಬಂದು ಎಲ್ಲರೂ ದೇಸಿ ತಿನಿಸುಗಳನ್ನು ಸವಿಯುತ್ತಿದ್ದರು.

ಈ ಸುದ್ದಿಯನ್ನೂ ಓದಿ | Liver Donation: 3 ಗಂಟೆಯೊಳಗೆ ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್‌!; ಸಾವಿನಲ್ಲೂ 16 ವರ್ಷದ ಬಾಲಕನ ಸಾರ್ಥಕತೆ

ಕಾರ್ಯಕ್ರಮವನ್ನು ಆಯೋಜಿಸಲು ಹಗಲಿರುಳು ಶ್ರಮಪಟ್ಟವರಿಗೆ ಹಾಗು ಪ್ರಾಯೋಜಕರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ಬೆಲ್ಜಿಯಂನಿಂದ ಬಂದಿದ್ದ ‘ನಿನಾದ’ ತಂಡವು ಮಧುರವಾದ ಕನ್ನಡ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನು ಭಾವಪರವಶರನ್ನಾಗಿಸಿದರು. ಅವರ ತಂಡದ ಪುಟ್ಟ ಪೋರನು ‘ಕಾಣದಂತೆ ಮಾಯವಾದನು’ ಹಾಡನ್ನು ಅತ್ಯುತ್ತಮವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾದನು. ಕೊನೆಯದಾಗಿ ನೆದರ್ಲ್ಯಾಂಡ್ಸಿನ ದೀಪಕ್ ದೊಡ್ಡೇರ ಅವರು ಎಂದಿನಂತೆ ಹಲವು ಕನ್ನಡ ಹಾಡುಗಳನ್ನು ಹಾಡಿ ರಂಜಿಸಿ, ಎಲ್ಲರನ್ನೂ ವೇದಿಕೆ ಮೇಲೆ ಕುಣಿಯುವಂತೆ ಪ್ರೇರೇಪಿಸಿದರು. ಐಂಧೋವನ್ ಕನ್ನಡಿಗರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿ ಮುಂದಿನ ಯುಗಾದಿಯ ಸಂಭ್ರಮದವರೆಗೂ ನೆನಪಿನಲ್ಲಿರುವಂತಹ ಹಲವು ರಸಮಯ ಕ್ಷಣಗಳನ್ನು ಮನದಲ್ಲಿ ಹೊತ್ತು ಮನೆಗೆ ಮರಳಿದರು ಎಂದು ಶ್ರೀನಿವಾಸ ಅವರು ತಿಳಿಸಿದ್ದಾರೆ.