Sunday, 15th December 2024

ಆ ಕಡೆ ರಮೇಶ್‌, ಈ ಕಡೆ ಡಿಕೆಶಿ

ಸಿಡಿ ಪ್ರಕರಣದಲ್ಲಿ ಯಾರ ಪರ ವಹಿಸಿಕೊಳ್ಳಬೇಕು ಎಂಬ ಗೊಂದಲ

ಸಹೋದರರನ್ನು ವಿರೋಧಿಸಲು ಸಾಧ್ಯವಿಲ್ಲ, ಪಕ್ಷದ ಪರವೂ ಮಾತನಾಡಲು ಆಗಲ್ಲ

ಅಡ್ಡಕತ್ತರಿಯಲ್ಲಿ ಬೆಳಗಾವಿ ಉಪ ಚುನಾವಣೆ ಕೈ ಅಭ್ಯರ್ಥಿ

ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಒಂದೆಡೆ ಸಿಡಿ ಪ್ರಕರಣ, ಇನ್ನೊಂದೆಡೆ ಪ್ರತಿಷ್ಟೆ ಪ್ರಶ್ನೆಯಾಗಿರುವ ಉಪಚುನಾವಣೆ. ಈ ಎರಡರ ನಡುವೆ ಇದೀಗ ಸಿಕ್ಕಿಹಾಕಿಕೊಂಡಿರುವುದು ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ.
ಹೌದು, ಬೆಳಗಾವಿ ಉಪ ಚುನಾವಣಾ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು, ಇದೀಗ ಇಕ್ಕಟ್ಟಿಗೆ ಸಿಲುಕಿದ್ದು ಒಂದೆಡೆ ಸಹೋ
ದರ ಹಾಗೂ ಇನ್ನೊಂದೆಡೆ  ರಾಜಕೀಯ ಭವಿಷ್ಯ ಎನ್ನುವಂತಾಗಿದೆ.

ಅಲ್ಲದೇ ಇಡೀ ಪ್ರಕರಣ ರಮೇಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ನಡೆಯುತ್ತಿರುವುದರಿಂದ ಯಾವ ಪರವಾಗಿ ಮಾತನಾಡಬೇಕು ಎನ್ನುವ ಗೊಂದಲದಲ್ಲಿ ಸತೀಶ್ ಇದ್ದಾರೆ. ಈ ಬಾರಿ ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿ
ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಆದ್ದರಿಂದ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ, ಅದರಲ್ಲಿಯೂ ಬೆಳಗಾವಿಯವರೇ ಆಗಿರುವ ರಮೇಶ್ ಜಾರಕಿಹೊಳಿ ಅವರ ಈ ರಾಸಲೀಲೆ ಪ್ರಕರಣವನ್ನು ಇಟ್ಟುಕೊಂಡು ಬಹಿರಂಗವಾಗಿ ವಾಗ್ದಾಳಿ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಆದರೆ ಈ ರೀತಿ ಬಹಿರಂಗ ಹೇಳಿಕೆ ನೀಡುವಾಗ ವೇದಿಕೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಇರಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಈ ಮುಜುಗರದಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಇದೀಗ ಅವರಲ್ಲಿ ಮೂಡಿದೆ.

ಕುಟುಂಬವನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ: ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಈಗಾಗಲೇ ಬಾಲಚಂದ್ರ, ಲಖನ್ ಜಾರಕಿಹೊಳಿ ಅವರು ಸಹೋದರನ ಪರವಾಗಿ ನಿಂತಿದ್ದಾರೆ. ಆದರೆ ಸತೀಶ್ ಅವರು ಬಹಿರಂಗವಾಗಿ ಬೆಂಬಲಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಿರುವುದರಿಂದ ಹಾಗೂ ಇಬ್ಬರು ಬೇರೆ ಪಕ್ಷದಲ್ಲಿರುವುದರಿಂದ ಕುಟುಂಬದಲ್ಲಿಯೂ ಈ
ಬಗ್ಗೆ ಅಪಸ್ವರ ಕೇಳಿಬಂದಿಲ್ಲ. ಆದರೀಗ ಜಾರಕಿಹೊಳಿ ವಿರುದ್ಧ ಸತೀಶ್ ಮಾತನಾಡಿದರೆ, ಮನೆಯಲ್ಲಿ ಕುಟುಂಬ ಸಮಸ್ಯೆ ಶುರುವಾಗುವ ಆತಂಕವಿದೆ.

ಅತ್ತ ದರಿ, ಇತ್ತ ಪುಲಿ
ಹಾಗೇ ನೋಡಿದರೆ ಸತೀಶ್ ಜಾರಕಿಹೊಳಿ ಅವರು ಆರಂಭದಲ್ಲಿ ಉಪಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಪ್ರಸ್ತಾಪಗಳು
ಶುರುವಾದಾಗ ಈ ಸಿಡಿ ವಿಷಯ ಬಂದಿರಲಿಲ್ಲ. ಆದ್ದರಿಂದ ಸ್ಪರ್ಧೆಗೆ ಉತ್ಸಾಹ ತೋರಿದರು. ಬಳಿಕ ಈ ಪ್ರಕರಣ ಕೆಲವೇ ದಿನದಲ್ಲಿ ಶಾಂತವಾಗುವ ವಿಶ್ವಾಸದಲ್ಲಿ ಸ್ಪರ್ಧೆಯಲ್ಲಿ ಮುಂದುವರಿಯುವುದಕ್ಕೆ ಮುಂದಾದರು. ಆದ ರೀಗ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಕಾಂಗ್ರೆಸ್ ನಾಯಕ ಈ ಬಾರಿ ಚುನಾವಣೆಯಲ್ಲಿ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನೇ ಮುಖ್ಯ ವಿಷಯವನ್ನಾಗಿಸಲು ಸಿದ್ಧತೆ ನಡೆಸಿ ಕೊಂಡಿದೆ. ಆದ್ದರಿಂದ ಇದೀಗ ಕಾಂಗ್ರೆಸ್ ಅಜೆಂಡಾವನ್ನೇ ಸತೀಶ್ ಮುಂದುವರಿಸಿದರೆ, ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ವಿರೋಧಿಸುವುದು ಮಾತ್ರವಲ್ಲದೇ, ಅವರ ಕುಟುಂಬಕ್ಕೂ ನೋವಾಗುತ್ತದೆ. ಒಂದು ವೇಳೆ ಮೌನಕ್ಕೆ
ಶರಣಾದರೇ, ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ.