ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟ (Rameshwaram Cafe Blast, Bangalore Blast) ನಡೆಸಿದ ಭಯೋತ್ಪಾದಕ ಘಟಕದ ಹ್ಯಾಂಡ್ಲರ್ ಇನ್ನೂ ತಲೆತಪ್ಪಿಸಿಕೊಂಡಿದ್ದು, ಅಜ್ಞಾತನಾಗಿಯೇ ರಾಜ್ಯದಲ್ಲಿ ಮೂರು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳನ್ನು (Islamic Terror Module) ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಅಂದ ಹಾಗೆ, ಈತ ಪಾಕಿಸ್ತಾನ (Pakistan) ಮೂಲದವನಾಗಿದ್ದರೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ (Bangalore Engineer) ಮಾಡಿದವನು.
ಇವನ ಹೆಸರು ಮೊಹಮ್ಮದ್ ಶಾಹಿದ್ ಫೈಸಲ್ (Mohammed Shahid Faisal). ರಾಷ್ಟ್ರೀಯ ತನಿಖಾ ಸಂಸ್ಥೆ (NIA) 40 ವರ್ಷ ವಯಸ್ಸಿನ ಈ ಪಾತಕಿಯನ್ನು ಹುಡುಕುತ್ತಿದೆ. ಪಾಕಿಸ್ತಾನ ಮೂಲದ ಶಂಕಿತನಾದ ಈತ 2012ರಿಂದ ಎನ್‌ಐಎ ವಾಂಟೆಡ್ ಲಿಸ್ಟ್‌ನಲ್ಲಿದ್ದು, ತಲೆಯ ಮೇಲೆ ₹10 ಲಕ್ಷ ಬಹುಮಾನ ಹೊಂದಿದ್ದಾನೆ. ಈ 12 ವರ್ಷಗಳಲ್ಲಿ ಕರ್ನಾಟಕದಲ್ಲಿರುವ ಮೂರು ಭಯೋತ್ಪಾದನಾ ಘಟಕಗಳ ಹ್ಯಾಂಡ್ಲರ್ ಆಗಿ ಹೊರಹೊಮ್ಮಿದ್ದಾನೆ.
ಈತ ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವೀಧರ (2004-2008). ಬೆಂಗಲೂರಿನಲ್ಲಿ ಕೆಲವು ವರ್ಷ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ. ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿದವನು ವಾಪಸ್ ಬಂದಿಲ್ಲ. 2012ರಲ್ಲಿ ಮೊದಲ ಬಾರಿಗೆ ಕರ್ನಾಟಕ ಪೊಲೀಸರ ಕಣ್ಣಿಗೆ ಬಿದ್ದ. ಆಗ ಈತನ ಅಲಿಯಾಸ್ ಹೆಸರುಗಳಾದ ʼಝಾಕಿರ್ʼ ಮತ್ತು ʼಉಸ್ತಾದ್ʼ ಅಷ್ಟೇ ಪೊಲೀಸರಿಗೆ ಪರಿಚಿತವಾಗಿತ್ತು. ನಂತರ ಆತ ಸೌದಿ ಅರೇಬಿಯಾದ ರಿಯಾದ್‌ಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಈತ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಹಿಂದುತ್ವವಾದಿಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ ಲಷ್ಕರ್-ಎ-ತೊಯ್ಬಾ ಸಂಬಂಧಿತ ಭಯೋತ್ಪಾದಕ ಘಟಕದ ಹ್ಯಾಂಡ್ಲರ್ ಎಂದು ಆರೋಪಿಸಲಾಗಿದೆ. ಅಂದಿನಿಂದ ಆತ ತಲೆಮರೆಸಿಕೊಂಡಿದ್ದಾನೆ.
ಫೈಸಲ್ ಈಗ ಪಾಕಿಸ್ತಾನಕ್ಕೆ ತೆರಳಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈತ ಹೈದರಾಬಾದ್ ಮೂಲದ ಫರ್ಹತುಲ್ಲಾ ಘೋರಿ ಅಲಿಯಾಸ್ ಅಬು ಸೂಫಿಯಾನ್‌ನ ಅಳಿಯ ಎಂದು ಹೇಳಲಾಗುತ್ತದೆ. ಘೋರಿ, 2002ರಲ್ಲಿ ಗುಜರಾತ್‌ನಲ್ಲಿ ನಡೆದ ಅಕ್ಷರಧಾಮ ದಾಳಿಯ ಮಾಸ್ಟರ್‌ಮೈಂಡ್. ಭಾರತ ಸರ್ಕಾರ ಈತನನ್ನು 2018ರಲ್ಲಿ ಭಯೋತ್ಪಾದಕ ಎಂದು ಘೋಷಿಸಿದೆ.
ಫರ್ಹತುಲ್ಲಾ ಘೋರಿ ಪಾಕಿಸ್ತಾನ ಮೂಲದವನು. ಅಲ್ಲಿ ಆತ ಭಯೋತ್ಪಾದಕರ ನೇಮಕಾತಿ ಮತ್ತು ಹಣಕಾಸು ಸೆಲ್ ಅನ್ನು ನಡೆಸುತ್ತಾನೆ. ಅದರ ಮೂಲಕ ಭಾರತದಲ್ಲಿ ಹಲವಾರು ಸ್ಲೀಪರ್ ಸೆಲ್‌ಗಳನ್ನು ಸಿದ್ಧಪಡಿಸಿದ್ದಾನೆ. ಫರ್ಹತುಲ್ಲಾ ಘೋರಿ, ಭಾರತದೊಳಗಿನ ರೈಲ್ವೇ ಜಾಲದ ಮೇಲೆ ದಾಳಿ ಮಾಡಲು ಇಲ್ಲಿನ ಸ್ಲೀಪರ್ ಸೆಲ್‌ಗಳನ್ನು ಉತ್ತೇಜಿಸಿದ್ದ. ಈತ ಬಾಂಬ್ ತಯಾರಿಸುವ ವಿವಿಧ ವಿಧಾನಗಳನ್ನು ವಿವರಿಸುವ ವೀಡಿಯೊವನ್ನು ಇದೇ ಆಗಸ್ಟ್‌ನಲ್ಲಿ ಟೆಲಿಗ್ರಾಮ್‌ನಲ್ಲಿ ಪ್ರಸಾರ ಮಾಡಿದ್ದಾನೆ. ಇದನ್ನು ಭಾರತೀಯ ಭದ್ರತಾ ಏಜೆನ್ಸಿಗಳು ತಡೆಹಿಡಿದಿವೆ.
2012ರ ಎಲ್‌ಇಟಿ ಪಿತೂರಿ ಪ್ರಕರಣದ ಅಪರಾಧಿ ಶೋಯೆಬ್ ಅಹ್ಮದ್ ಮಿರ್ಜಾ ಐದು ವರ್ಷಗಳ ಶಿಕ್ಷೆ ಅನುಭವಿಸಿ 2018ರಲ್ಲಿ ಬಿಡುಗಡೆ ಹೊಂದಿದ್ದು, ಈತ ರಾಮೇಶ್ವರಂ ಕೆಫೆ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಮಥೀನ್ ತಾಹಾನನ್ನು ಫೈಸಲ್‌ಗೆ ಪರಿಚಯಿಸಿದ್ದ ಎಂದು ಎನ್‌ಐಎ ಆರೋಪಿಸಿದೆ. ಫೈಸಲ್ ಮತ್ತು ತಾಹಾ ನಡುವೆ ಸಂವಹನಕ್ಕಾಗಿ ಮಿರ್ಜಾ ಇ-ಮೇಲ್ ಐಡಿಯನ್ನು ಒದಗಿಸಿದ್ದಾನೆ ಎಂದು ಎನ್‌ಐಎ ಮೇ 2024ರಲ್ಲಿ ಮಿರ್ಜಾನನ್ನು ಬಂಧಿಸಿದಾಗ ತಿಳಿಸಿದೆ.
2024ರ ಏಪ್ರಿಲ್‌ನಲ್ಲಿ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್‌ರನ್ನು ಬಂಧಿಸಲಾಯಿತು. ವಿಚಾರಣೆಯ ವೇಳೆ ತಮ್ಮ ಹ್ಯಾಂಡ್ಲರ್ ಫೈಸಲ್ ಎಂದು ಇವರು ತಿಳಿಸಿದ್ದಾರೆ. ಆತನನ್ನು ʼಕರ್ನಲ್ʼ ಎಂದು ಕರೆಯುವುದಾಗಿ ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಚಾನೆಲ್‌ಗಳ ಮೂಲಕ ಫೈಸಲ್ ತಾಹಾ ಮತ್ತು ಇತರ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ. ಆತನನ್ನು “ಕರ್ನಲ್” ಮತ್ತು “ಭಾಯ್” ಎಂದು ಕರೆಯಲಾಗುತ್ತಿತ್ತು.
ಫೈಸಲ್ 2018ರಿಂದಲೂ ತಾಹಾ ಮೂಲಕ ಎರಡು ಭಯೋತ್ಪಾದಕ ಘಟಕಗಳನ್ನು ಸಿದ್ಧಪಡಿಸಿದ್ದಾನೆ. 2020ರ ಅಲ್ ಹಿಂದ್ ಮಾಡ್ಯೂಲ್ ಪ್ರಕರಣದಲ್ಲಿ ಕೂಡ ಫೈಸಲ್ ಹ್ಯಾಂಡ್ಲರ್ ಆಗಿದ್ದ. ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿರುವ ಅಲ್ ಹಿಂದ್ ಟ್ರಸ್ಟ್‌ನ ಮೆಹಬೂಬ್ ಪಾಷಾ, ತಮಿಳುನಾಡಿನ ಕಡಲೂರು ಮೂಲದ ಖಾಜಾ ಮೊಯ್ದೀನ್ ಇವರು ದಕ್ಷಿಣ ಭಾರತದ ಅರಣ್ಯಗಳಲ್ಲಿ ಭಯೋತ್ಪಾದನೆ ತರಬೇತಿ ನೀಡಲು ಬಯಸಿದ್ದ ಐಸಿಸ್‌ನ ದಕ್ಷಿಣ ಭಾರತದ ಹ್ಯಾಂಡ್ಲರ್ ಅಮೀರ್ ಸಂಪರ್ಕದಲ್ಲಿದ್ದರು. ಅಲ್ ಹಿಂದ್ ಮಾಡ್ಯೂಲ್ ಎಂದು ಕರೆಯಲ್ಪಡುವ ಈ ಘಟಕವನ್ನು ಜನವರಿ 2020 ರಲ್ಲಿ ಪೊಲೀಸರು ಭೇದಿಸಿದ್ದರು. ಆದರೆ ತಾಹಾ ಮತ್ತು ಶಾಜಿಬ್ ಏಜೆನ್ಸಿಗಳ ಕಣ್ಣು ತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾದರು.
ಫೈಸಲ್ ಮತ್ತೆ ಇಬ್ಬರನ್ನು ಸಿದ್ಧಪಡಿಸಿದ್ದ. ಕ್ರಿಪ್ಟೋಕರೆನ್ಸಿಗಳ ಮೂಲಕ ಅವರಿಗೆ ಹಣಕಾಸು ಒದಗಿಸಿದ್ದ. ನಾಲ್ಕು ವರ್ಷಗಳಿಂದ ಮತ್ತೊಂದು ಮಾಡ್ಯೂಲ್ ಅನ್ನು ಒಟ್ಟಿಗೆ ಸೇರಿಸಿದ್ದ. ಅದು ತೀರ್ಥಹಳ್ಳಿ ಮಾಡ್ಯೂಲ್. ತಾಹಾ ಮತ್ತು ಶಾಜಿಬ್ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮಂಗಳೂರಿನ ಕನಿಷ್ಠ 10 ಯುವಕರನ್ನು ಒಟ್ಟು ಸೇರಿಸಿದ್ದಾರೆ. ಈ ಘಟಕ ಇದುವರೆಗೆ ಕನಿಷ್ಠ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದೆ. ಭಯೋತ್ಪಾದಕ ಗೀಚುಬರಹ ಪ್ರಕರಣ, ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣ, 2021ರಲ್ಲಿ ಶಿವಮೊಗ್ಗದಲ್ಲಿ ನಡೆದ ಪ್ರಯೋಗ ಸ್ಫೋಟ ಪ್ರಕರಣ ಮತ್ತು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ.
2012ರ ಎಲ್‌ಇಟಿ ಪಿತೂರಿ ಪ್ರಕರಣ ಮತ್ತು 2020 ರ ಅಲ್ ಹಿಂದ್ ಘಟಕ ಪ್ರಕರಣವನ್ನುತನಿಖೆ ನಡೆಸಿದ ರಾಜ್ಯದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು, ಈ ಎರಡೂ ಪ್ರಕರಣಗಳ ಹ್ಯಾಂಡ್ಲರ್ ಫೈಸಲ್ ಎಂದು ಈಗ ಗುರುತಿಸಿದ್ದಾರೆ.
ಈ ಸುದ್ದಿ ಓದಿ: Rameshwaram Cafe blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ; ಬಿಜೆಪಿ ಕಚೇರಿ ಸ್ಫೋಟಕ್ಕೂ ನಡೆದಿತ್ತು ಯತ್ನ!