ಬೆಂಗಳೂರು: ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ (Rameshwaram Cafe blast) ನಾಲ್ವರು ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 3000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು ಉಲ್ಲೇಖವಾಗಿದ್ದು, ಬೆಂಗಳೂರಿನ ಬಿಜೆಪಿ ಕಚೇರಿ ಸ್ಫೋಟಕ್ಕೂ ಆರೋಪಿಗಳಿಂದ ಯತ್ನ ನಡೆದಿತ್ತು ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಷರೀಫ್ ವಿರುದ್ಧ ಎನ್‌ಐಎ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಐಪಿಸಿ, ಯುಎ (ಪಿ) ಆಕ್ಟ್, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಪಿಡಿಎಲ್‌ಪಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಐಇಡಿ ಸ್ಫೋಟಗೊಂಡು 9 ಜನರು ಗಾಯಗೊಂಡಿದ್ದರು ಹಾಗೂ ಹೋಟೆಲ್‌ಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು.
ಮಾರ್ಚ್ 3 ರಂದು ಪ್ರಕರಣದ ತನಿಖೆ ಆರಂಭಿಸಿದ ಎನ್ಐಎ, ವಿವಿಧ ರಾಜ್ಯ ಪೊಲೀಸ್ ಪಡೆಗಳು ಮತ್ತು ಇತರ ಏಜೆನ್ಸಿಗಳ ಸಮನ್ವಯದಲ್ಲಿ ತನಿಖೆ ನಡೆಸಿತ್ತು. ನಂತರ ಆರೋಪಿ ಮುಸಾವಿರ್ ಹಾಗೂ ಅಬ್ದುಲ್ ಮತೀನ್ ತಾಹಾನನ್ನು ಕೋಲ್ಕತ್ತಾದ ಬಳಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
NIA Chargesheets 4 in Rameshwaram Cafe Blast Case pic.twitter.com/H8dBPMwdsx
— NIA India (@NIA_India) September 9, 2024
ವಿಚಾರಣೆ ವೇಳೆ ಅಬ್ದುಲ್ ಮತೀನ್ ಅಹ್ಮದ್ ತಾಹಾ ಪ್ರಕರಣದ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿತ್ತು, ಆರೋಪಿ ಮುಸಾವಿರ್ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿದ್ದ ಎಂಬುವುದು ಬೆಳಕಿಗೆ ಬಂದಿತ್ತು. ಶಿವಮೊಗ್ಗ ಜಿಲ್ಲೆಯವರಾದ ಈ ಇಬ್ಬರು ಆರೋಪಿಗಳು, ಐಸಿಸ್ ಮೂಲಭೂತವಾದಿಗಳಾಗಿದ್ದು, ಸಿರಿಯಾದ ಉಗ್ರ ಸಂಘಟನೆ ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದ್ದರು. ಇವರು ಸ್ಥಳೀಯ ಮುಸ್ಲಿಂ ಯುವಕರ ತಲೆ ಕೆಡಿಸಿ, ಉಗ್ರ ಸಂಘಟನೆ ಸೇರಲು ಪ್ರಚೋದನೆ ನೀಡುತ್ತಿದ್ದರು.
ಇದನ್ನೂ ಓದಿ | Actor Darshan: ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಇನ್ನು 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲೂ ಬಾಂಬ್ ಸ್ಫೋಟಕ್ಕೆ ಆರೋಪಿಗಳು ಸಂಚು ರೂಪಿಸಿದ್ದರೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಯತ್ನ ವಿಫಲವಾದ ಬಳಿಕ ಆರೋಪಿಗಳು, ರಾಮೇಶ್ವರಂ ಕೆಫೆ ಸ್ಫೋಟವನ್ನು ಯೋಜಿಸಿದ್ದರು, ಪ್ರಕರಣದ ತನಿಖೆ ಮುಂದುವರಿದಿದೆ.