Thursday, 21st November 2024

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನ ನಂಟು; ಪ್ರಮುಖ ಆರೋಪಿ ಪಾಕ್‌ನಲ್ಲಿ

Rameshwaram Cafe blast

ಬೆಂಗಳೂರು: ಬೆಂಗಳೂರಿನ (Bengaluru Crime News) ರಾಮೇಶ್ವರಂ ಕೆಫೆ ಸ್ಫೋಟಕ್ಕೂ (Rameshwaram Cafe Blast) ಪಾಕಿಸ್ತಾನಕ್ಕೂ (Pakistan) ಸಂಬಂಧವಿದೆ ಎಂಬ ಸ್ಫೋಟಕ ಮಾಹಿತಿ ಎನ್​ಐಎ (NIA) ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವುದು ಈಗ ತಿಳಿದುಬಂದಿದೆ. ರಾಮೇಶ್ವರಂ ಕೆಫೆ ಸ್ಫೋಟ​ ಪ್ರಕರಣಕ್ಕೆ ಪಾಕಿಸ್ತಾನದ ನಂಟಿದ್ದು, ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಸದ್ಯ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ.

ಪ್ರಕರಣದ ತನಿಖೆ ಮಾಡಿದ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಈಗಾಗಲೇ ಕೋರ್ಟ್​ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಅದರಲ್ಲಿ ಈ ವಿಷಯ ತಿಳಿಸಲಾಗಿದೆ. ಫೈಸಲ್‌ ಇಲ್ಲಿನ ಉಗ್ರರನ್ನು ದೂರದಿಂದಲೇ ಹ್ಯಾಂಡಲ್‌ ಮಾಡುತ್ತಿದ್ದ.

ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ತಾಹಾ ಮತ್ತು ಶಾಜಿಬ್ ನಾಪತ್ತೆಯಾಗಿದ್ದರು. ಕೆಲಕಾಲದ ಬಳಿಕ ವಾಪಸ್ ಬೆಂಗಳೂರಿಗೆ ಬಂದಿದ್ದರು. ಆಗ ಮುಜಾಮಿಲ್ ಷರೀಫ್ ಜೊತೆಗೆ ಪರಿಚಯವಾಗಿತ್ತು. ಮುಜಾಮಿಲ್ ಮೆಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮುಜಾಮಿಲ್ ಷರೀಫ್‌ನ ತಾಹಾ ಮತ್ತು ಶಾಜಿಬ್ ಮನಪರಿವರ್ತಿಸಿ ಐಸಿಸ್‌ಗೆ ಸೇರ್ಪಡೆ ಮಾಡಿದ್ದರು. ಮೊದಲ ಹಂತದಲ್ಲಿ ಕೆಲವು ದುಷ್ಕೃತ್ಯ ನಡೆಸಲು ಮುಜಾಮಿಲ್‌ಗೆ ತಾಹಾ ಮತ್ತು ಶಾಜಿಬ್ ಟಾಸ್ಕ್ ನೀಡಿದ್ದರು.

ಉಗ್ರರು 2023 ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ್ದರು. ಆನ್‌ಲೈನ್ ಹ್ಯಾಂಡ್ಲರ್ ಮೂಲಕ ಈ ಸೂಚನೆ ಬಂದಿತ್ತು. ಜನವರಿ 22, 2024ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅಂದೇ ಸ್ಫೋಟ ನಡೆಸಿ ಎಂಬ ಸೂಚನೆ ಇತ್ತು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿ ಟಾರ್ಗೆಟ್ ಮಾಡಿದ್ದ ಶಾಜಿಬ್, ಹೀಗಾಗಿ ಬೆಂಗಳೂರಿನಿಂದ ಚೆನ್ನೈಗೆ ಶಿಫ್ಟ್ ಆಗಿದ್ದ. ಟ್ರಿಪ್ಲಿಕೇನ್ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೆ ಐಇಡಿ ಬಾಂಬ್ ತಯಾರಿಕೆ ಮಾಡಿದ್ದ. 2024 ಜನವರಿ 22ರಂದು ಬೆಳಗ್ಗೆ ಐಇಡಿ ಬಾಂಬ್ ಹಿಡ್ಕೊಂಡು ಬೆಂಗಳೂರಿಗೆ ಬಂದಿದ್ದ ಶಾಜಿಬ್, ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್ ಇಡಲು ಸಂಚು ಹೂಡಿದ್ದ. ಹೆಚ್ಚಿನ ಭದ್ರತೆ ಹಿನ್ನೆಲೆ ಬಿಜೆಪಿ ಕಚೇರಿ ಹಿಂಭಾಗದಲ್ಲಿ ಬಾಂಬ್ ಇಟ್ಟಿದ್ದ. 90 ನಿಮಿಷಕ್ಕೆ ಟೈಮರ್ ಸೆಟ್ ಮಾಡಿದ್ದ. ಬಾಂಬ್​ ಇಟ್ಟವನೇ ಚೆನ್ನೈಗೆ ಎಸ್ಕೇಪ್​ ಆಗಿದ್ದ. ಆದರೆ ಬಾಂಬ್ ಸ್ಫೋಟವಾಗಿರಲಿಲ್ಲ.

ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿಯ ಹಿಂಭಾಗ ಇಟ್ಟಿದ್ದ ಬಾಂಬ್ ಸ್ಫೋಟಗೊಳ್ಳದ ಹಿನ್ನೆಲೆ ಮತ್ತೆ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ. ಅಂತಿಮವಾಗಿ ಫೆಬ್ರವರಿ ತಿಂಗಳಲ್ಲಿ ಐಇಡಿ ಬಾಂಬ್ ತಯಾರಿಸಿ, ಫೆಬ್ರವರಿ 29ರಂದು ಶಾಜಿಬ್ ಚೆನ್ನೈನಿಂದ ಬೆಂಗಳೂರಿಗೆ ಬಂದು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಇಳಿದು, ಕುಂದಲಹಳ್ಳಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟಿದ್ದ.

ಇದನ್ನೂ ಓದಿ: Rameshwaram Cafe blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ; ಬಿಜೆಪಿ ಕಚೇರಿ ಸ್ಫೋಟಕ್ಕೂ ನಡೆದಿತ್ತು ಯತ್ನ!