ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧನವಾಗಿರುವ ಶಂಕಿತ ಉಗ್ರರಿಗೆ ಐಸಿಸ್ ನಂಟು ಇದೆ ಎಂಬ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಪ್ರಕರಣಕ್ಕೆ (Rameshwaram Cafe blast) ಸಂಬಂಧಿಸಿ ಎನ್‌ಐಎ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಆರೋಪಿಗಳಿಗೆ ಉಗ್ರ ಸಂಘಟನೆಯು ಹಣಕಾಸಿನ ನೆರವು ಕೂಡ ನೀಡುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.
ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹ, ಮಾಜ್ ಮುನೀರ್, ಮುಜಾಮಿಲ್ ಶರೀಫ್, ಮೊಹಮ್ಮದ್ ಶರೀಫ್, ಶಾಜೀಬ್ ಮತ್ತು ಅರಮತ್ ಅಲಿ ಐಸಿಸ್ ಜತೆ ಸಂಪರ್ಕ ಹೊಂದಿರುವುದು ಎನ್‌ಐಎ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 2020ರಿಂದಲೂ ಐಸಿಸ್ ಜತೆ ಸಂಪರ್ಕದಲ್ಲಿದ್ದ ಮತೀನ್ ತಾಹ, ಸದ್ಯ ಎಲ್ಲ ಉಸ್ತುವಾರಿ ಜತೆಗೆ ಹಣಕಾಸು ವರ್ಗಾವಣೆ ಕೆಲಸ ಕೂಡ ನಿರ್ವಹಣೆ ಮಾಡುತ್ತಿದ್ದನು. ಅಬ್ದುಲ್ ಮತೀನ್ ತಾಹ ತಾಂತ್ರಿಕವಾಗಿ ಉತ್ತಮವಾಗಿದ್ದರಿಂದ ಈತನಿಗೆ ಐಸಿಸ್ ಉಸ್ತುವಾರಿ ವಹಿಸಿತ್ತು ಎನ್ನಲಾಗಿದೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ನ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ, ಮೂಲತಃ ಶಿವಮೊಗ್ಗದವನಾಗಿದ್ದು, ಐಸಿಸ್ ಜತೆ ನಿರಂತರ ಸಂಪರ್ಕದಲ್ಲಿದ್ದ. 2020ರಿಂದಲೂ ಐಸಿಸ್ ಜತೆ ಸಂಪರ್ಕದಲ್ಲಿದ್ದ ಈತ ಎಲ್ಲ ಉಸ್ತುವಾರಿ ಜತೆಗೆ ಹಣಕಾಸು ವರ್ಗಾವಣೆ ಕೆಲಸ ಕೂಡ ನಿರ್ವಹಣೆ ಮಾಡುತ್ತಿದ್ದ. ರಾಮೇಶ್ವರಂ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಶಿವಮೊಗ್ಗ ಸರಣಿ ಬೈಕ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳ ಹಿಂದೆ ಈತನ ಕೈವಾಡ ಇದೆ ಎಂದು ತಿಳಿದುಬಂದಿದೆ.
ಇನ್ನು ಆರೋಪಿ ಮಾಜ್ ಮುನೀರ್ ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ನ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹ ಮೂಲಕ ಮೊದಲಿಗೆ ಅಲ್ ಹಿಂದ್ ಟ್ರಸ್ಟ್ಗೆ 2018ರಲ್ಲಿ ಸೇರ್ಪಡೆಯಾಗಿದ್ದ. ಅಲ್ ಹಿಂದ್ ಟ್ರಸ್ಟ್ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಫ್ಲಾನ್ ಮಾಡುತ್ತಿದ್ದ. 2018ರಲ್ಲೇ ಅಲ್ ಹಿಂದ್ ಟ್ರಸ್ಟ್ ಮೇಲೆ ಕೇಸ್ ದಾಖಲಾಗಿತ್ತು. ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಸರಣಿ ಬೈಕ್ಗಳಿಗೆ ಬೆಂಕಿ ಕೃತ್ಯದಲ್ಲಿ ಭಾಗಿಯಾಗಿದ್ದ.
ಮುಜಾಮಿಲ್ ಶರೀಫ್ ಕೂಡ ಅಬ್ದುಲ್ ಮತೀನ್ ತಾಹ ಮೂಲಕ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಐಸಿಸ್ ಈತನಿಗೂ ಭಯೋತ್ಪಾದಕ ಕೃತ್ಯದ ಟಾಸ್ಕ್ ನೀಡಿತ್ತು. ಮೆಜೆಸ್ಟಿಕ್ ಹಾಗೂ ಯಶವಂತಪುರದಲ್ಲಿ ಬಸ್ ಸ್ಫೋಟಗೊಳಿಸುವಂತೆ ಟಾಸ್ಕ್ ನೀಡಲಾಗಿತ್ತು. ಆದರೆ, ಅದು ಫೇಲ್ ಆಗಿದ್ದು ಕೊನೆಗೆ ಶಾಂತಿನಗರದ ಟೈರ್ ಅಂಗಡಿಗೆ ಬೆಂಕಿ ಇಟ್ಟಿದ್ದರು.
ಆರೋಪಿ ಮೊಹಮದ್ ಶಾರೀಕ್ ಕೂಡ ಐಸಿಸ್ ಜತೆ ಸಂಪರ್ಕ ಹೊಂದಿದ್ದ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಬೈಕ್ಗಳ ಸ್ಪೋಟ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೃತ್ಯದ ಹಿಂದೆ ಈತನ ಕೈವಾಡವಿದೆ. ಅದೇ ರೀತಿ ಮುಸಾವೀರ್ ಹುಸೇನ್ ಶಾಜೀಬ್‌ಗೂ ಐಸಿಸ್ ನಂಟಿದೆ. ಈತ ಶಾರಿಕ್ ಜತೆಗೂಡಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಮಂಗಳೂರು ಕುಕ್ಕರ್ ಬ್ಲಾಸ್ಟ್, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದನು. ಹಾಗೇ ಬಿಜೆಪಿ ಕಚೇರಿ ಬಳಿ ಸ್ಫೋಟಕ್ಕೆ ಯತ್ನಿಸಿದ್ದ.
ಮತ್ತೊಬ್ಬ ಆರೋಪಿ ಅರಾಫತ್ ಅಲಿ ಉಳಿದ ಐದೂ ಜನರಿಗೆ ಹಣಕಾಸು ಸಹಾಯ ಮಾಡುತ್ತಿದ್ದ. ತಾಹ ಹೇಳಿದಂತೆ ಹಣ ಸಹಾಯ ಮಾಡುವುದು ಈತನ ಕೆಲಸವಾಗಿತ್ತು. ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಟಾಸ್ಕ್ ಮುಗಿದ ಮೇಲೆ ಅದನ್ನು ವಿಡಿಯೋ ರೆಕಾರ್ಡ್ ಮಾಡಿ ಅಂತ ಐಸಿಸ್ ಸೂಚನೆ ನೀಡಿತ್ತು. ಅದರಂತೆ ಉ್ರಗರೆಲ್ಲರು ವೀಡಿಯೋ ಮಾಡಿರುವ ಸಾಧ್ಯತೆಯೂ ಇದೆ. ಈ ಎಲ್ಲ ಅಂಶಗಳನ್ನು ಎನ್‌ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿಯನ್ನೂ ಓದಿ | J&K Encounter: ಕಣಿವೆ ರಾಜ್ಯದಲ್ಲಿ ಸೇನೆಯಿಂದ ಭರ್ಜರಿ ಬೇಟೆ; ವಿಲೇಜ್ ಡಿಫೆನ್ಸ್ ಗಾರ್ಡ್‌ಗಳ ಹತ್ಯೆಗೈದಿದ್ದ ಉಗ್ರರು ಟ್ರ್ಯಾಪ್!