ಮುಂಬೈ: ಭಾರತದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಇನ್ನಿಲ್ಲ (Ratan Tata Death). ಅನಾರೋಗ್ಯದಿಂದ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಕ್ಟೋಬರ್ 9ರಂದು ಕೊನೆಯುಸಿರೆಳೆದರು. ಅವರ ಅಗಲಿಕೆಗೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಕರ್ನಾಟಕದ ಉದ್ಯಮಿ, ಸಮಾಜ ಸೇವಕಿ, ಲೇಖಕಿ ಸುಧಾ ಮೂರ್ತಿ ಮಾತನಾಡಿ ಟಾಟಾ ಜತೆಗಿನ ಒಡನಾಟ ಮೆಲುಕು ಹಾಕಿದ್ದಾರೆ. ಪರೋಪಕಾರವನ್ನು ಟಾಟಾ ಕುಟುಂಬದಿಂದ ಕಲಿತಿರುವುದಾಗಿ ತಿಳಿಸಿದ್ದಾರೆ. ಟಾಟಾ ಅವರ ನಿಧನವನ್ನು ಯುಗವೊಂದರ ಅಂತ್ಯ ಎಂದು ಬಣ್ಣಿಸಿರುವ ಸುಧಾ ಮೂರ್ತಿ (Sudha Murthy), ವೈಯಕ್ತಿಕವಾಗಿಯೂ ತುಂಬಲಾರದ ನಷ್ಟ ಎಂದಿದ್ದಾರೆ.
“ಸರಳ ವ್ಯಕ್ತಿತ್ವ ಹೊಂದಿದ, ಯಾವಾಗಲೂ ಇತರರ ಬಗ್ಗೆ ಕಾಳಜಿ ಮತ್ತು ಸಹಾನುಭೂತಿ ಹೊಂದಿದ್ದ ರತನ್ ಟಾಟಾ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರಂತಹ ಉನ್ನತ ವ್ಯಕ್ತಿತ್ವ ಹೊಂದಿದ ಇತರ ವ್ಯಕ್ತಿಯನ್ನು ನಾನು ಭೇಟಿಯಾಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರು ದಂತಕಥೆಯಾಗಿದ್ದರು. ಇದು ಯುಗಾಂತ್ಯʼʼ ಎಂದು ಸುಧಾ ಮೂರ್ತು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
#WATCH | Bengaluru, Karnataka | On the demise of Ratan Tata, author-philanthropist and Rajya Sabha MP Sudha Murty says, "… In my life, I met him (Ratan Tata), a man of integrity, and simplicity, always caring for others and compassionate… I really miss him… I don't think in… pic.twitter.com/hDb6Qbfhau
— ANI (@ANI) October 10, 2024
ರತನ್ ಟಾಟಾ ಸಮಗ್ರತೆ ಹೊಂದಿದ ವ್ಯಕ್ತಿಯಾಗಿದ್ದರು ಎಂದು ಸುಧಾ ಮೂರ್ತಿ ಹೇಳಿದ್ದಾರೆ. ʼʼಅವರು ತಾಳ್ಮೆಯ ಸಾಕಾರಮೂರ್ತಿಯಾಗಿದ್ದರು. ಸರಳತೆಯನ್ನು ಜೀವನದುದ್ದಕ್ಕೂ ಪಾಲಿಸಿದ್ದರು. ಪರೋಪಕಾರಿ ಗುಣವನ್ನು ನಾನು ಟಾಟಾ ಕುಟುಂಬದಿಂದ ಕಲಿತಿದ್ದೇನೆ. ವೈಯಕ್ತಿಕವಾಗಿಯೂ ಇದು ನನಗೆ ತುಂಬಲಾರದ ನಷ್ಟʼʼ ಎಂದು ಹೇಳಿದ್ದಾರೆ.
ಗಣ್ಯರಿಂದ ಸಂತಾಪ
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು, “ಟಾಟಾ ಗ್ರೂಪ್ ಮಾತ್ರವಲ್ಲದೆ ದೇಶಕ್ಕೇ ಗಣನೀಯ ಕೊಡುಗೆ ನೀಡಿದ ಅಸಾಮಾನ್ಯ ನಾಯಕ ರತನ್ ನವಲ್ ಟಾಟಾ ಅವರಿಗೆ ನೋವಿನಿಂದ ವಿದಾಯ ಹೇಳುತ್ತಿದ್ದೇವೆ” ಎಂದು ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರತನ್ ಟಾಟಾ ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.
‘ʼಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ʼ ಎಂದು ಸ್ಯಾಂಡಲ್‌ವುಡ್ ನಟ ಡಾ. ಶಿವರಾಜ್ ಕುಮಾರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ʼʼರತನ್ ಟಾಟಾ ನಿಧನವಾರ್ತೆ ಕೇಳಿ ದುಃಖವಾಗಿದೆʼʼ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ʼʼನಿಮ್ಮ ನಾಯಕತ್ವ ಮತ್ತು ಉದಾರತೆಯ ಪರಂಪರೆಯು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶಕ್ಕಾಗಿ ನೀವು ನೀಡಿದ ಕೊಡುಗೆ, ನಿಮ್ಮ ಸಾಟಿಯಿಲ್ಲದ ಉತ್ಸಾಹ ಮತ್ತು ಸಮರ್ಪಣೆಗಾಗಿ ಧನ್ಯವಾದಗಳು. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆʼ’ ಎಂದು ಹೇಳಿದ್ದಾರೆ.
ʼʼರತನ್ ಟಾಟಾ ಅವರು ಎಲ್ಲ ತಲೆಮಾರಿಗೂ ಸ್ಫೂರ್ತಿ. ದೇಶಕ್ಕಾಗಿ ಅವರು ಸಲ್ಲಿಸಿದ ಕೊಡುಗೆ ಸೀಮಾತೀತ. ಅವರ ಕೊಡುಗೆಯನ್ನು ದೇಶ ಯಾವತ್ತಿಗೂ ಮರೆಯುವುದಿಲ್ಲʼʼ ಎಂದು ನಟ ಅಜಯ್ ದೇವಗನ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಟಾಲಿವುಡ್ ನಟ ಜೂನಿಯರ್ ಎನ್ಟಿಆರ್, ʼʼಉದ್ಯಮದ ಟೈಟಾನ್ ರತನ್ ಟಾಟಾ ಅವರ ನಿಸ್ವಾರ್ಥ ಲೋಕೋಪಕಾರ ಮತ್ತು ದೂರದೃಷ್ಟಿಯ ನಾಯಕತ್ವವು ಅಸಂಖ್ಯಾತ ಜೀವನವನ್ನು ಪರಿವರ್ತಿಸಿದೆʼʼ ಎಂದು ಹೇಳಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ratan Tata Death: 55 ವರ್ಷದ ಕಿರಿಯನ ಜತೆಗಿತ್ತು ರತನ್ ಟಾಟಾಗೆ ಅಪರೂಪದ ಸ್ನೇಹ; ಯಾರು ಈ ಶಂತನು ನಾಯ್ಡು?