Wednesday, 20th November 2024

Ration card: ರೇಷನ್ ಕಾರ್ಡ್ ರದ್ದಾಗಿ ಹೃದ್ರೋಗಿ ಮಹಿಳೆ‌ಗೆ ಸಂಕಷ್ಟ; ಅಧಿಕಾರಿಗಳ ಎಡವಟ್ಟಿನಿಂದ ಅರ್ಹ ಫಲಾನುಭವಿಗಳ ಪರದಾಟ

Ration card

ಪಾವಗಡ: ರಾಜ್ಯ ಸರ್ಕಾರದ ಸೂಚನೆಯಂತೆ ಅನರ್ಹ ಫಲಾನುಭವಿಗಳ ರೇಷನ್‌ ಕಾರ್ಡ್‌ (Ration card) ರದ್ದುಗೊಳಿಸಲು ಆಹಾರ ಇಲಾಖೆ ಮುಂದಾಗಿದೆ. ಈ ನಡುವೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಅನೇಕ ಅರ್ಹರ ಕಾರ್ಡ್‌ಗಳು ರದ್ದಾಗಿವೆ ಎಂಬ ಆರೋಪ ಕೇಳಿಬಂದಿದ್ದು, ಆಹಾರ ಇಲಾಖೆ ವಿರುದ್ಧ ತಾಲೂಕಿನ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ಹೌದು, ಪಾವಗಡದಲ್ಲಿ ಒಬ್ಬ ಅರ್ಹ ಫಲಾನುಭವಿ ಮಹಿಳೆ ರೇಷನ್ ಕಾರ್ಡ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವುದು ಕಂಡುಬಂದಿದೆ. ಬಡ ಕುಟುಂಬಗಳಿಗೆ ನೆರವಾಗಲು ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ ಇನ್ನಿತರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಇಂದಿಗೂ ಅದೆಷ್ಟೊ ಕುಟುಂಬಗಳು ಪಡಿತರ ಅಕ್ಕಿಯನ್ನೇ ಅವಂಬಿಸಿ ಜೀವನ ಸಾಗಿಸುತ್ತಿವೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದಾಗಿ ಅರ್ಹ ಫಲಾನುಭವಿಗಳು ಕೂಡ ಕಾರ್ಡ್ ಕಳೆದುಕೊಂಡು ಪರದಾಡುತ್ತಿದ್ದಾರೆ.

ಪಾವಗಡದ ನಿವಾಸಿ ಶ್ರೀವಲ್ಲಿ ಪ್ರತಿಕ್ರಿಯಿಸಿ, ಪಾವಗಡ ತಾಲೂಕಿನಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳು ಹೆಚ್ಚು ಇವೆ. ಅವರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು, ಅರ್ಹ ಫಲಾನುಭವಿಯಾದ ತಮ್ಮ ಕಾರ್ಡ್‌ ರದ್ದು ಪಡಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಇವರಿಗೆ ಗಂಡ ಇಲ್ಲ, ಒಬ್ಬರೆ ಹೇಗೋ ಜೀವನ ಸಾಗಿಸುತ್ತಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಇರುವ ಹಿನ್ನೆಲೆ ರೇಷನ್ ಕಾರ್ಡ್‌ ಬಳಸಿಕೊಂಡು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಏಕಾಏಕಿ ಕಾರ್ಡನ್ನು ರದ್ದುಗೊಳಿಸಿರುವುದರಿಂದ ಮಹಿಳೆ ಕಂಗಾಲಾಗಿದ್ದಾರೆ.

ಸುಮಾರು 15 ವರ್ಷಗಳಿಂದ ನಾನು ಬಿಪಿಎಲ್‌ ಕಾರ್ಡ್‌ ಬಳಸುತ್ತಿದ್ದೇನೆ. ಗಂಡ ತೀರಿ ಹೋಗಿದ್ದು, ಮಗ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಅವನ ವಿದ್ಯಾಭ್ಯಾಸಕ್ಕೆ ಸಹೋದರ ಮತ್ತು ನನ್ನ ಗಂಡನ ತಂಗಿ ನೆರವು ನೀಡುತ್ತಿದ್ದಾರೆ. ನನಗೆ ಹೃದಯ ಸಮಸ್ಯೆ ಇರುವುದರಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಗೃಹಲಕ್ಷ್ಮಿ ಯೋಜನೆ ಹಣ ಕೂಡ ಸ್ಥಗಿತವಾಗಿದೆ, ಈಗ ರೇಷನ್‌ ಕಾರ್ಡ್‌ ಕೂಡ ರದ್ದಾಗಿದೆ ಎಂದು ಶ್ರೀವಲ್ಲಿ ಹೇಳಿದ್ದಾರೆ.

ಅಧಿಕಾರಿಗಳ ಎಡವಟ್ಟಿನಿಂದಾಗಿ ಅರ್ಹ ಫಲಾನುಭವಿಗಳು ಪರದಾಡುತ್ತಿದ್ದು, ಜೀವನಕ್ಕೆ ಒಂದು ರೀತಿಯಲ್ಲಿ ಆಧಾರವಾಗಿದ್ದ ರೇಷನ್ ಕಾರ್ಡನ್ನು ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಆದ್ರೆ ಸರ್ಕಾರ ಮಾತ್ರ ಅರ್ಹರು ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿ ಕೈತೊಳೆದುಕೊಂಡಿದೆ. ಇವರು ಅರ್ಜಿ ಸಲ್ಲಿಸಿ ಮತ್ತೆ ಅದು ಬರುವವರೆಗೂ ಇವರ ಜೀವನದ ಪಾಡೇನು ಎಂದು ತಾಲೂಕಿನ ಜನ ಆಕ್ರೋಶ ಹೊರಹಾಕಿದ್ದಾರೆ.

(ವರದಿ: ಇಮ್ರಾನ್ ಉಲ್ಲಾ, ಪಾವಗಡ)