Thursday, 12th December 2024

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಇಳಿಸಿ : ಆಪ್‌ ಪಕ್ಷದಿಂದ 23 ಕ್ಕೆ “ಬೈಕ್ ತಳ್ಳು” ಪ್ರತಿಭಟನೆ

ಬೆಂಗಳೂರು: ಜನರ ಸಂಕಷ್ಟಗಳಿಗೆ ಕಿವಿಗೊಡದ ಕೇಂದ್ರ ಸರ್ಕಾರ ಇದ್ದೂ ಸತ್ತಂತಿದೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ರಾಜ್ಯ ಸರ್ಕಾರವೂ ಜನರ ನೆರವಿಗೆ ನಿಲ್ಲದೆ ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಈ ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ಇಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ ಇದೇ 23 ಬುಧವಾರ ಬೆಳಿಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಿಂದ ಮೌರ್ಯ ವೃತ್ತದವರೆಗೆ “ಬೈಕ್ ತಳ್ಳು” ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ತಿಳಿಸಿದರು.

ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಒಬ್ಬ ವ್ಯಕ್ತಿ ಪ್ರತಿ ತಿಂಗಳು 3-5 ಸಾವಿರ ಹಣವನ್ನು ಪೆಟ್ರೋಲ್‌ಗೆಂದು ಖರ್ಚು ಮಾಡುತ್ತಿದ್ದಾನೆ, ಡಿಸೇಲ್ ಬೆಲೆ ಹೆಚ್ಚಳದಿಂದ ಸರಕು ಸಾಗಾಣೆ ಖರ್ಚು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ, ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವುದಕ್ಕೆ ಖರ್ಚು ಮಾಡುವುದು ಎಂದು ತಿಳಿಯದೇ ಸಾರ್ವಜನಿಕರು ಗೊಂದಲದಲ್ಲಿ ಮುಳುಗಿ ಹೋಗಿದ್ದಾರೆ ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗಿದೆ, ಪೆಟ್ರೋಲ್, ಡಿಸೇಲ್‌ ಮೂಲ ಬೆಲೆಗಿಂತ ಮುಕ್ಕಾಲು ಪಾಲು ತೆರಿಗೆಯನ್ನೇ ಹೆಚ್ಚು ಕಟ್ಟುತ್ತಿದ್ದೇವೆ ಆದ ಕಾರಣ ಈ ತೆರಿಗೆಯನ್ನು ಮೊದಲು ಕಡಿಮೆ ಮಾಡಿ ಎಂದರು.

ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಸರ್ಕಾರ ಕಳೆದ ಜೂನ್ ತಿಂಗಳಲ್ಲಿ ತನ್ನ ಪಾಲಿನ ತೆರಿಗೆ ಇಳಿಸಿದ ಪರಿಣಾಮ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಕ್ರಮವಾಗಿ 3,5 ರೂಪಾಯಿ ಇಳಿಕೆ ಆಗಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರವಾದರೂ ಜನರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.

ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಪಾಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಇಲ್ಲದಿದ್ದರೆ ಪ್ರತಿದಿನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ ಬೆಂಗಳೂರು ಯುವ ಘಟಕದ ಉಪಾಧ್ಯಕ್ಷೆ ಸಿಂಧು ಇದ್ದರು.