Saturday, 14th December 2024

ಬಾಡಿಗೆಯಿಂದ ಬಿಡುಗಡೆ ಎಂದು ?

ಆರ್ಥಿಕ ನಷ್ಟ ಪೊಲೀಸ್ ಠಾಣೆಯ ದಿನನಿತ್ಯದ ಕೆಲಸಕ್ಕೆ ಸಂಕಷ್ಟ

ವಿಶೇಷ ವರದಿ: ರಂಗನಾಥ ಕೆ.ಮರಡಿ

ತುಮಕೂರು: ಸ್ಮಾರ್ಟ್‌ಸಿಟಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ ಕೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಹಲವು ವರ್ಷಗಳಿಂದ ಬಾಡಿಗೆ ನೀಡಿ ಠಾಣೆ ನಡೆಸುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೆ ತಿಂಗಳಿಗೆ ಲಕ್ಷಾಂತರ ರು. ನಷ್ಟ
ಉಂಟಾಗುತ್ತಿದೆ. ಇಲಾಖೆಯು ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಂಡರೆ ಆರ್ಥಿಕವಾಗಿ ಉಳಿತಾಯವಾಗುತ್ತದೆ. ಪ್ರತಿ ಠಾಣೆಗೆ
ತಿಂಗಳಿಗೆ ಸರಾಸರಿ 35 ಸಾವಿರಕ್ಕೂ ಅಧಿಕ ಬಾಡಿಗೆ ಖರ್ಚು ಬರುತ್ತಿದೆ. ಠಾಣೆಗಳ ಮುಂದೆ ವಾಹನಗಳನ್ನು ನಿಲ್ಲಿ ಸಲು ಜಾಗ
ವಿಲ್ಲದಿರುವುದರಿಂದ ತೊಂದರೆ ಯಾಗುತ್ತಿದೆ.

ನಗರದಲ್ಲಿ 5 ಪ್ರಮುಖ ಠಾಣೆಗಳು ಬಾಡಿಗೆ ಕಟ್ಟಡದಲ್ಲಿದ್ದು, ನಗರ ಠಾಣೆ, ಹೊಸಬಡಾವಣೆ ಠಾಣೆ, ಸೆನ್ ಠಾಣೆಗಳು ಮೇಲಂತಸ್ತಿ ನಲ್ಲಿದ್ದು, ದಿನನಿತ್ಯದ ಕೆಲಸಗಳಿಗೆ ಅಡ್ಡಿ ಉಂಟಾಗಿದೆ. ವಯಸ್ಸಾದವರು, ದಿವ್ಯಾಂಗರು ಠಾಣೆಯ ಕೆಲಸಕ್ಕೆ ಬಂದರೆ ಮೇಲತ್ತಿ ಹೋಗಲು ಸಾಧ್ಯವಿಲ್ಲ. ಸಿಬ್ಬಂದಿ ಸಹ ಪ್ರತಿದಿನ ಹಲವಾರು ಬಾರಿ ಮೆಟ್ಟಿಲು ಹತ್ತಿ ಇಳಿದು ಹೈರಾಣಾಗಿದ್ದಾರೆ.

ಪ್ರಕ್ರಿಯೆ ವಿಳಂಬ: ಸ್ವಂತ ಕಟ್ಟಡ ನಿರ್ಮಿಸಿ ಬಾಡಿಗೆಗೆ ಮುಕ್ತಿ ಹೇಳಲು ಪೊಲೀಸ್ ಇಲಾಖೆ ವಿಳಂಬ ಮಾಡುತ್ತಿದೆ. ಕಟ್ಟಡ ಕಾಮ ಗಾರಿ ಪ್ರಾರಂಭಿಸಲು ಪ್ರಕ್ರಿಯೆ ಆಮೆಗತಿಯಲ್ಲಿ ಪಯಣಿಸುತ್ತಿದೆ. ಲಕ್ಷಾಂತರ ರು. ಬಾಡಿಗೆ ನೀಡುವ ಬದಲು ಕಟ್ಟಡ ನಿರ್ಮಿಸಿ ಕೊಂಡು ಖಜಾನೆಗೆ ಹೊರೆ ಕಡಿಮೆ ಮಾಡಬೇಕು. ಪೊಲೀಸ್ ಠಾಣೆಗಳು ಬಾಡಿಗೆ ಯಿಂದ ಮುಕ್ತಿ ಹೊಂದಬೇಕು ಎಂಬುದು ಜನತೆಯ ಆಶಯ.
***

ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡಗಳಿಗೆ ಲಕ್ಷಾಂತರ ರು. ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ.
ಕರೋನಾದಂತಹ ಸಂಕಷ್ಟದ ಕಾಲದಲ್ಲಿ ಆರ್ಥಿಕ ಹೊರೆ ತಗ್ಗಿಸಬೇಕು. ಅನೇಕ ವರ್ಷಗಳಾದರೂ ಸ್ವಂತ ಕಟ್ಟಡ ನಿರ್ಮಿಸ ದಿರುವುದು ವಿಪರ್ಯಾಸ.

– ಶಿವಣ್ಣ ವಕೀಲರು

ಹಿರಿಯ ಜೀವಿಗಳು, ವಿಚೇತನರು ಹೊಸ ಬಡಾವಣೆ ಠಾಣೆಗೆ ಹೋದರೆ ಮೇಲಂತಸ್ತಿಗೆ ಮೆಟ್ಟಿಲು ಹತ್ತುವುದು ಕಷ್ಟ.
ಸಿಬ್ಬಂದಿಯಂತೂ ಪ್ರತಿದಿನ ಮೆಟ್ಟಿಲುಗಳನ್ನು ಸವೆಸಬೇಕು. ಶೀಘ್ರವೇ ನೂತನ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮುಂದಾಗಬೇಕು.
– ಮಲ್ಲಿಕಾರ್ಜುನ್, ಸಾಮಾಜಿಕ ಹೋರಾಟಗಾರ