Saturday, 14th December 2024

ಹುಳಿಯಾರು ಹೋಬಳಿ ಮುಖಂಡರ ಕನಸಿಗೆ ಮೀಸಲಾತಿ ಭಗ್ನ

ಎಚ್.ಬಿ.ಕಿರಣ್ ಕುಮರ್

ಹುಳಿಯಾರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದ ಹುಳಿಯಾರು ಹೋಬಳಿಯ ಹಲವು ಮುಖಂಡರಿಗೆ ನಿರಾಸೆಯಾಗಿದೆ. ಮರ‍್ನಾಲ್ಕು ವರ್ಷಗಳಿಂದ ಚುನಾವಣೆ ಎದುರಿಸಲು ನಡೆಸಿಕೊಂಡು ಬಂದಿದ್ದ ಕೆಲ ನಾಯಕರ ರಂಗ ತಾಲೀಮು ವ್ಯರ್ಥವಾಗಿದ್ದು ಜಿಪಂ ಸ್ಪರ್ಧಿಸುವ ಅವರ ಕನಸು ಭಗ್ನವಾಗಿದೆ.

ಹುಳಿಯಾರು ಪಟ್ಟಣ ಪಂಚಾಯ್ತಿಯಾದ ಪರಿಣಾಮ ಹುಳಿಯಾರು ಪಟ್ಟಣ ಹೊರತು ಪಡಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಹೊಸದಾಗಿ ತಮ್ಮಡಿಹಳ್ಳಿ ಕ್ಷೇತ್ರ ರಚಿಸಲಾಗಿದೆ. ಹಾಲಿಯಿದ್ದ ಹೊಯ್ಸಲಕಟ್ಟೆ ಕ್ಷೇತ್ರವನ್ನು ಕೆಂಕೆರೆ ಕ್ಷೇತ್ರವೆಂದು ಹೆಸರು ಬದಲಾಯಿಸಲಾಗಿದೆ. ಕೆಲ ಬದಲಾವಣೆಗಳನ್ನು ಬಿಟ್ಟರೆ ಹುಳಿಯಾರು ಹೋಬಳಿಯಲ್ಲಿ ಎಂದಿನ0ತೆ 2 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ.

ಕೆಂಕೆರೆ ಕ್ಷೇತ್ರಕ್ಕೆ ಸ್ಪರ್ಧಿಸಲು ಕಳೆದ ಬಾರಿಯೇ ಬಿಜೆಪಿಯಿಂದ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಜೆಡಿಎಸ್‌ನಿಂದ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್, ಕಾಂಗ್ರೆಸ್‌ನಿAದ ಚಲನಚಿತ್ರ ನಿರ್ಮಾಪಕ ಜನಾರ್ಧನ್, ಹೊಯ್ಸಲಕಟ್ಟೆ ಗಿರೀಶ್ ಇಚ್ಚಿಸಿದ್ದರು. ಆದರೆ ಕಳೆದ ಬಾರಿ ಮೀಸಲಾತಿ ಬಾರದೆ ತೀರ್ವ ನಿರಾಸೆ ಮೂಡಿಸಿತ್ತು. ಆದರೂ ಈ ಮೂವರು ಈ ಬಾರಿಯಾದರೂ ಮೀಸಲಾತಿ ಬಂದೇ ಬರುತ್ತದೆಂದು ಜನರ ನಡುವೆ ಉಳಿದು ವರ್ಚಸ್ಸು ವೃದ್ಧಿಗೆ ತೀರ್ವ ಕಸರತ್ತು ನಡೆಸುತ್ತಿದ್ದರು. ಆದರೆ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗುವ ಮೂಲಕ ಮತ್ತೊಮ್ಮೆ ಮೀಸಲಾತಿ ಇವರ ಕನಸಿಗೆ ತಣ್ಣೀರು ಎರಚಿದಂತ್ತಾಗಿದೆ.

ಇನ್ನು ತಮ್ಮಡಿಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿAದ ಹಾಲಿ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾ ರ್ಜುನಯ್ಯ, ಮುಖಂಡ ಹೊಸಹಳ್ಳಿ ಅಶೋಕ್, ಬಿಜೆಪಿಯಿಂದ ಕಳೆದಬಾರಿ ಪರಾಭವಗೊಂಡಿದ್ದ ಹೊಸಹಳ್ಳಿಜಯಣ್ಣ, ನಂದಿಹಳ್ಳಿಶಿವಣ್ಣ, ಜೆಡಿಎಸ್‌ನಿಂದ ನಂದಿಹಳ್ಳಿ ದೇವರಾಜು, ಹೊಸಹಳ್ಳಿಕೃಷ್ಣಮೂರ್ತಿ ಹೀಗೆ 3 ಪಕ್ಷಗಳಿಂದಲೂ ಅನೇಕರು ಬಯಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಕಾಂಕ್ಷಿಗಳೆ0ದು ಪ್ರಚಾರ ಸಹ ಮಾಡಿದ್ದರು. ಆದರೆ ಎಸ್‌ಸಿ ಮಹಿಳೆಗೆ ಸ್ಪರ್ಧಿಸಲು ಅವಕಾಶ ಮೀಸಲಾಗಿ ಇವರ ಆಸೆ ನಿರಾಸೆಯಾಗಿದೆ.

ಹುಳಿಯಾರು ಹೋಬಳಿಯ ಎರಡೂ ಕ್ಷೇತ್ರಗಳಿಂದಲೂ ಪ್ರಭಲ ಆಕಾಂಕ್ಷಿಗಳಾಗಿದ್ದ ಮೂರು ಪಕ್ಷದ ಮುಖಂಡರಿಗೆ ತಾಲೂಕಿನ ಯಾವ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಅವಕಾಶವೇ ಇಲ್ಲದಾಗಿದೆ. ಏಕೆಂದರೆ ತಾಲೂಕಿನ ಉಳಿದ ಕ್ಷೇತ್ರಗಳಲ್ಲಿ ಶೆಟ್ಟಿಕೆರೆ ಕ್ಷೇತ್ರ ಸಾಮಾನ್ಯ ಮಹಿಳೆಗೂ, ಹಂದನಕೆರೆ ಕ್ಷೇತ್ರ ಎಸ್‌ಟಿಗೂ ಮೀಸಲಾಗಿದೆ. ತಿಮ್ಮನಹಳ್ಳಿ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದರೂ ಅಲ್ಲಿನ ಜಾತಿಮತಗಳ ಆಧಾರ ಹುಳಿಯಾರು ಹೋಬಳಿಯ ಮುಖಂಡರ ನಿಲ್ಲುವ ಧೈರ್ಯ ಕುಗ್ಗಿಸುವಂತಿದೆ.
ಹೆಚ್ಚು ಆಕಾಂಕ್ಷಿಗಳು ಕಂಡು ಬಂದಿದ್ದ ಈ ಎರಡೂ ಕ್ಷೇತ್ರಗಳೂ ಈಗ ಮಹಿಳೆಗೆ ಮೀಸಲಾಗಿರುವುದರಿಂದ 3 ಪಕ್ಷದ ಸ್ಪರ್ಧಾಕಾಂಶಿಗಳ ತೀವ್ರ ನಿರಾಸೆ ಮೂಡಿಸಿ ರುವ ಜೊತೆಗೆ ಅಸಮದಾನಕ್ಕೂ ಕಾರಣವಾಗಿದೆ.

ಅಲ್ಲದೆ ಈ ಎರಡೂ ಕ್ಷೇತ್ರಗಳಲ್ಲೂ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಮೂರು ಪಕ್ಷಗಳೂ ತೊಡಗಿವೆ. ಮತ ಸೆಳೆಯಬಲ್ಲ ಅಭ್ಯರ್ಥಿಗಳ ಆಯ್ಕೆಗೆ ಪಕ್ಷಗಳು ಒತ್ತು ನೀಡುತ್ತಿದ್ದು ಪ್ರಭಾವಿಗಳ ಪತ್ನಿ ಅಥವಾ ತಾಯಿಯನ್ನು ನಿಲ್ಲಿಸುವಂತೆ ಒತ್ತಡ ಏರುತ್ತಿದ್ದಾರೆ.

ಒಟ್ಟಾರೆಯಾಗಿ, ಜಿಲ್ಲಾ ಪಂಚಾಯತ್ ಗೆ ಸ್ಪರ್ಥಿಸಲು ಮುಂದಾಗಿ ಮೀಸಲಾತಿ ಪ್ರಕಟಣೆ ಎದುರು ನೋಡುತ್ತಿದ್ದ ಆಕಾಂಕ್ಷಿಗಳಿಗೆ ಚುನಾವಣಾ ಆಯೋಗವು ತಣ್ಣೀರು ಎರಚಿರುವುದನ್ನು ಕಾಣಬಹುದಾಗಿದೆ. ಇವರೆಲ್ಲರೂ ಇನ್ನೂ 5 ವರ್ಷ ಕಾಯುವ, ಜನರ ಸೇವೆ ಮಾಡುವ ಅನಿವಾರ್ಯತೆ ಸೃಷ್ಠಿಯಾಗಿರುವುದಂತೂ ಸತ್ಯ,